ಸರ್ವಜ್ಞ ಪೀಠಕ್ಕೆ ಸುವರ್ಣ ಕವಚ ಅರ್ಪಣೆ
Monday, April 14, 2025
ಲೋಕಬಂಧು ನ್ಯೂಸ್
ಉಡುಪಿ: ಸೌರ ಯುಗಾದಿ ಪರ್ವದಿನದಂದು ಸೋಮವಾರ ಶ್ರೀಕೃಷ್ಣ ಮಠದ ಸರ್ವಜ್ಞ ಪೀಠಕ್ಕೆ ಸುವರ್ಣ ಕವಚ ತೊಡಿಸಲಾಯಿತು.ಅದಮಾರು ಮಠದ ಹಿರಿಯ ಯತಿ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಶ್ರೀಕೃಷ್ಣ- ಮುಖ್ಯಪ್ರಾಣ ದೇವರ ಉತ್ಸವ ಮೂರ್ತಿಯನ್ನು ಸರ್ವಜ್ಞ ಪೀಠದಲ್ಲಿಟ್ಟು ಅರ್ಚಿಸಿದರು.
ಪರ್ಯಾಯ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ವಿಶ್ವವಂದ್ಯ ಲೋಕಗುರು ಶ್ರೀಮದಾನಂದತೀರ್ಥ ಶ್ರೀಪಾದರು ಮಂಡಿಸಿರುವ ದಿವ್ಯ ಸಾನ್ನಿಧ್ಯವಿರುವ ಸರ್ವಜ್ಞ ಪೀಠಕ್ಕೆ ಸುವರ್ಣ ಕವಚ ತೊಡಿಸಿ ಶ್ರೀಕೃಷ್ಣನಿಗೆ ಸಮರ್ಪಿಸುವ ಮೂಲಕ ತಮ್ಮ ಸನ್ಯಾಸಾಶ್ರಮದ ಸುವರ್ಣ ಮಹೋತ್ಸವ ಆಚರಿಸಿದರು.
ಬಳಿಕ ಆಶೀರ್ವಚನ ನೀಡಿದ ಶ್ರೀಪಾದರು, ಸರ್ವಜ್ಞ ಪೀಠದಲ್ಲಿ ಶ್ರೀಕೃಷ್ಣ ಮುಖ್ಯಪ್ರಾಣರೊಂದಿಗೆ ಆಚಾರ್ಯರ ರೂಪವೆಂದೇ ಜ್ಞಾನಿಗಳು ಪರಿಗಣಿಸಿದ ಸರ್ವಮೂಲ ಗ್ರಂಥಗಳನ್ನು ಇರಿಸಲಾಗಿದ್ದು ಅವೇ ಮುಖ್ಯಾರ್ಥದಲ್ಲಿ ಸುವರ್ಣ ಗಳಿಸಿದ್ದು ಆ ಮೂಲಕ ಸರ್ವಜ್ಞ ಸುವರ್ಣ ಸಿಂಹಾಸನದಿಂದ ವೈಷ್ಣವ ಭಕ್ತಿಸಿದ್ದಾಂತ ಪ್ರಚಾರವಾಗುವಂತೆ ಶ್ರೀಕೃಷ್ಣ ದೇವರು ಅನುಗ್ರಹಿಸಲಿ ಎಂದರು.
ಪುತ್ತಿಗೆ ಕಿರಿಯ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು, ಭಂಡಾರಕೇರಿ ಮಠಾಧೀಶ ಶ್ರೀ ವಿದ್ಯೇಶತೀರ್ಥ ಶ್ರೀಪಾದರು ಸಾನ್ನಿಧ್ಯ ವಹಿಸಿದ್ದರು.
ಅನೇಕ ಮಂದಿ ಭಕ್ತರು ಹಾಗೂ ವಿದ್ವಾಂಸರು, ಶ್ರೀಮಠದ ದಿವಾನ ನಾಗರಾಜ ಆಚಾರ್ಯ, ಕಾರ್ಯದರ್ಶಿ ಪ್ರಸನ್ನಾಚಾರ್ಯ ಮೊದಲಾದವರಿದ್ದರು.