ಕ್ರೈಸ್ತರಿಂದ ಪಾಮ್ ಸಂಡೆ ಆಚರಣೆ
Sunday, April 13, 2025
ಲೋಕಬಂಧು ನ್ಯೂಸ್
ಉಡುಪಿ: ಏಸುಕ್ತಿಸ್ತ ಜೆರುಸಲೆಮ್ ನಗರ ಪ್ರವೇಶಿಸಿದ ಸಂಕೇತವಾಗಿ ಆಚರಿಸುವ ಗರಿಗಳ ಭಾನುವಾರ (ಪಾಮ್ ಸಂಡೆ)ವನ್ನು ಉಡುಪಿ ಜಿಲ್ಲೆಯಾದ್ಯಂತ ಕ್ರೈಸ್ತ ಬಾಂಧವರು ಶ್ರದ್ಧಾಭಕ್ತಿಯಿಂದ ಆಚರಿಸಿದರು.
ಉಡುಪಿ ಬಿಷಪ್ ವಂ. ಡಾ. ಜೆರಾಲ್ಡ್ ಐಸಾಕ್ ಲೋಬೊ ಅವರು ಕುಂದಾಪುರ ತಾಲೂಕಿನ ಬಸ್ರೂರು ಸಂತ ಫಿಲಿಪ್ ನೆರಿ ಚರ್ಚಿನಲ್ಲಿ ನಡೆದ ಧಾಮರ್ಿಕ ವಿಧಿಯಲ್ಲಿ ಭಾಗವಹಿಸಿ ಗರಿಗಳನ್ನು ಆಶೀರ್ವದಿಸಿ, ಬಲಿಪೂಜೆಯಲ್ಲಿ ಸಂದೇಶ ನೀಡಿದರು. ಈ ವೇಳೆ ಚರ್ಚಿನ ಪ್ರಧಾನ ಧರ್ಮಗುರು ವಂ.ರೋಯ್ ಲೋಬೊ, ಸಹಾಯಕ ಧರ್ಮಗುರು ವಂ. ವಿಲ್ಸನ್ ಸಲ್ಡಾನಾ ಉಪಸ್ಥಿತರಿದ್ದರು.
ಜಿಲ್ಲೆಯ ಎಲ್ಲ ಚರ್ಚುಗಳಲ್ಲಿ ಕ್ರೈಸ್ತ ಬಾಂಧವರು ಬೆಳಗ್ಗಿನ ಪ್ರಾರ್ಥನಾ ವಿಧಿಯಲ್ಲಿ ಪಾಲ್ಗೊಂಡು ತೆಂಗಿನ ಗರಿಗಳನ್ನು ಹಿಡಿದುಕೊಂಡು ಮುಖ್ಯ ರಸ್ತೆಗಳಲ್ಲಿ ಮೆರವಣಿಗೆ ಮೂಲಕ ಸಾಗಿ, ಏಸುವಿನ ಕಷ್ಟದ ದಿನಗಳನ್ನು ನೆನಪು ಮಾಡಿಕೊಂಡು ಬಲಿಪೂಜೆಯಲ್ಲಿ ಭಾಗವಹಿಸಿದರು.
ಧರ್ಮಪ್ರಾಂತ್ಯದ ಪ್ರಧಾನ ಇಗರ್ಜಿಯಾದ ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್ ನಲ್ಲಿ ಪ್ರಧಾನ ಧರ್ಮಗುರು ಹಾಗೂ ಧರ್ಮಪ್ರಾಂತ್ಯದ ಶ್ರೇಷ್ಠಗುರು ಮೊನ್ಸಿಂಜ್ಞೊರ್ ಫರ್ಡಿನಾಂಡ್ ಗೊನ್ಸಾಲ್ವಿಸ್ ಧಾರ್ಮಿಕ ವಿಧಿ ವಿಧಾನದ ನೇತೃತ್ವ ವಹಿಸಿದ್ದರು.
ಪಾಮ್ ಸಂಡೆ ಆಚರಣೆಯೊಂದಿಗೆ ಕ್ರೈಸ್ತರ ಪವಿತ್ರ ಸಪ್ತಾಹ ಆರಂಭಗೊಳ್ಳುತ್ತದೆ. ಏಸುಕ್ರಿಸ್ತರು ಜೆರುಸಲೆಮ್ ನಗರ ಪ್ರವೇಶಿಸಿದಾಗ ಅಲ್ಲಿನ ಭಕ್ತರು ಒಲಿವ್ ಮರದ ಗರಿಗಳನ್ನು ಹಿಡಿದು ಸ್ವಾಗತಿಸಿದ ಸಂಕೇತವಾಗಿ ತೆಂಗಿನ ಗರಿಗಳನ್ನು ಹಿಡಿದು ಮೆರವಣಿಗೆಯಲ್ಲಿ ತೆರಳಲಾಗುತ್ತದೆ.
ಪವಿತ್ರ ಸಪ್ತಾಹ ಕ್ರೈಸ್ತರಿಗೆ ಮಹತ್ವದ್ದಾಗಿದ್ದು, ಗುರುವಾರ ಏಸುಕ್ರಿಸ್ತರು ಕೊನೆಯ ಭೋಜನ ಸ್ಮರಣೆ ಮಾಡಿದರೆ, ಶುಕ್ರವಾರ ಏಸುಕ್ರಿಸ್ತನ ಮರಣದ ದಿನವಾದ ಗುಡ್ ಫ್ರೈಡೆ ಆಚರಿಸಿ ಇಡೀ ದಿನವನ್ನು ಉಪವಾಸ, ಧ್ಯಾನದಲ್ಲಿ ಕಳೆಯುತ್ತಾರೆ.
ಶನಿವಾರ ಈಸ್ಟರ್ ಜಾಗರಣೆ ಮತ್ತು ಭಾನುವಾರ ಏಸುಕ್ರಿಸ್ತನ ಪುನರುತ್ಥಾನ ಪ್ರಯುಕ್ತ ಈಸ್ಟರ್ ಹಬ್ಬ ಆಚರಿಸಲಾಗುತ್ತದೆ.