
ಪಿಯುಸಿ ಫಲಿತಾಂಶ: ಉಡುಪಿ ಜಿಲ್ಲೆ ಪ್ರಥಮ
Thursday, April 10, 2025
ಲೋಕಬಂಧು ನ್ಯೂಸ್
ಉಡುಪಿ: ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶದಲ್ಲಿ ಕಳೆದ ಬಾರಿ ಉಡುಪಿ ಜಿಲ್ಲೆ ಶೇ. 96.70 ಸಾಧನೆಯೊಂದಿಗೆ ರಾಜ್ಯಕ್ಕೆ ದ್ವಿತೀಯ ಸ್ಥಾನ ಗಳಿಸಿತ್ತು. ಈ ಬಾರಿ ಶೇ 93.90ರಷ್ಟು ವಿದ್ಯಾರ್ಥಿಗಳು ತೇರ್ಗಡೆಗೊಂಡಿದ್ದು, ಪ್ರಥಮ ಸ್ಥಾನ ಪಡೆದಿದೆ.
ವಿಜ್ಞಾನ ವಿಭಾಗದಲ್ಲಿ ಉಡುಪಿ ಜಿಲ್ಲೆಯ 5 ಮತ್ತು ವಾಣಿಜ್ಯ ವಿಭಾಗದಲ್ಲಿ 5 ವಿದ್ಯಾರ್ಥಿಗಳು ಮೊದಲ 10 ಟಾಪ್ ಸ್ಥಾನ ಪಡೆದಿದ್ದಾರೆ.
ಜಿಲ್ಲೆಯಲ್ಲಿ ಈ ವರ್ಷ 16,127 ಮಂದಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಅವರಲ್ಲಿ 14,884 ಮಂದಿ ತೇರ್ಗಡೆ ಹೊಂದಿದ್ದಾರೆ. ಕಲಾ ವಿಭಾಗದಲ್ಲಿ 1,150 ವಿದ್ಯಾರ್ಥಿಗಳಲ್ಲಿ 914 ಮಂದಿ, ವಾಣಿಜ್ಯ ವಿಭಾಗದಲ್ಲಿ 7,246 ವಿದ್ಯಾರ್ಥಿಗಳಲ್ಲಿ 6,503 ಮಂದಿ, ವಿಜ್ಞಾನ ವಿಭಾಗದಲ್ಲಿ 7,731 ವಿದ್ಯಾರ್ಥಿಗಳಲ್ಲಿ 7,467 ಮಂದಿ ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ.
10 ಮಂದಿ ಟಾಪರ್
ವಿಜ್ಞಾನ ವಿಭಾಗ: ಆಸ್ತಿ ಎಸ್. ಶೆಟ್ಟಿ (596) ಜ್ಞಾನಸುಧಾ ಕಾಲೇಜು ಕಾರ್ಕಳ, ಅಪೂರ್ವ್ ವಿ. ಕುಮಾರ್ (595) ಜ್ಞಾನಸುಧಾ ಕಾಲೇಜು ಉಡುಪಿ, ಭೂಮಿಕಾ ಆರ್. ಹೆಗ್ಡೆ (595) ಎಂ.ಜಿ.ಎಂ. ಕಾಲೇಜು ಉಡುಪಿ, ಶ್ರೀರಕ್ಷಾ ಬಿ. ನಾಯಕ್ (595) ಜ್ಞಾನಸುಧಾ ಕಾಲೇಜು ಕಾರ್ಕಳ ಮತ್ತು ವಿಶ್ವಾಸ್ ಅತ್ರೇಯಾ (594), ಜ್ಞಾನಸುಧಾ ಕಾಲೇಜು ಕಾರ್ಕಳ.
ವಾಣಿಜ್ಯ ವಿಭಾಗ
ಸುಧೀಕ್ಷಾ ಶೆಟ್ಟಿ (595) ಕ್ರೈಸ್ಟ್ ಕಿಂಗ್ ಪ.ಪೂ. ಕಾಲೇಜು ಕಾರ್ಕಳ, ಪ್ರಣವಿ ಎಚ್. ಸುವರ್ಣ (595) ವಿದ್ಯೋದಯ ಕಾಲೇಜು ಉಡುಪಿ, ಸಹನಾ ನಾಯಕ್ (594), ಜ್ಞಾನಸುಧಾ ಕಾಲೇಜು ಕಾರ್ಕಳ, ಸುಧಾ ತನ್ವಿ ರಾವ್ (594), ಜ್ಞಾನಸುಧಾ ಕಾಲೇಜು ಕಾರ್ಕಳ ಮತ್ತು ಅರ್ಚನಾ ಎಸ್. ಶೆಟ್ಟಿ (594) ತ್ರಿಶಾ ಪಿಯು ಕಾಲೇಜು ಕಟಪಾಡಿ.
ವೈದ್ಯೆಯಾಗುವೆ
ಸುದ್ದಿಗಾರರೊಂದಿಗೆ ಮಾತನಾಡಿದ ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ ಐದನೇ ರ‌್ಯಾಂಕ್ ಪಡೆದ ಎಮ್‌ಜಿಎಮ್ ಕಾಲೇಜಿನ ಭೂಮಿಕ ಆರ್. ಹೆಗ್ಡೆ ವೈದ್ಯೆ ಆಗುವ ಇಂಗಿತ ವ್ಯಕ್ತಪಡಿಸಿದ್ದಾರೆ.
ಒತ್ತಡವಿಲ್ಲದ ಓದು ನಿರಂತರ ಅಭ್ಯಾಸದಿಂದ ಈ ಅಂಕ ಪಡೆದಿದ್ದೇನೆ. ಉತ್ತಮ ಅಂಕ ಪಡೆಯಬೇಕು ಎಂಬ ಕಾರಣಕ್ಕೆ ಬಳ್ಳಾರಿಯಿಂದ ಉಡುಪಿಗೆ ಬಂದು ವಿದ್ಯಾಭ್ಯಾಸ ಪಡೆದಿದ್ದೇನೆ. ಜೀವಶಾಸ್ತ್ರ ನನ್ನ ಆಸಕ್ತಿಯ ವಿಷಯ ಎಂದರು.