
ಪ್ರಕೃತಿಗೆ ವಿಮುಖವಾದಲ್ಲಿ ಅನಾರೋಗ್ಯ
Sunday, May 4, 2025
ಲೋಕಬಂಧು ನ್ಯೂಸ್
ಉಡುಪಿ: ಪ್ರಪಂಚದಲ್ಲಿ ಮನುಷ್ಯನನ್ನು ಹೊರತುಪಡಿಸಿ ಯಾವುದೇ ಜೀವರಾಶಿಗಳು ಪ್ರಕೃತಿಗೆ ವಿರುದ್ಧವಾಗಿಲ್ಲ. ಹಾಗಾಗಿ ಮನುಷ್ಯ ಪ್ರಕೃತಿಗೆ ಪೂರಕವಾಗಿಲ್ಲದ ಕಾರಣ ಅನಾರೋಗ್ಯಗಳು ಬಾಧಿಸುತ್ತಿವೆ ಎಂದು ಸುಬ್ರಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನತೀರ್ಥ ಶ್ರೀಪಾದರು ಅಭಿಪ್ರಾಯ ವ್ಯಕ್ತಪಡಿಸಿದರು.
ಭಾನುವಾರ ಆತ್ರಾಡಿ ಓಂತಿಬೆಟ್ಟು ಮದಗದಲ್ಲಿ ಗಾಂಧಿ ಆಸ್ಪತ್ರೆಯ ಮೂವತ್ತನೇ ವಾರ್ಷಿಕೋತ್ಸವ ಹಾಗೂ ಪಂಚಮಿ ಟ್ರಸ್ಟ್ ರಜತ ಸಂಭ್ರಮಾಚಾರಣೆ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಮಾನಸಿಕ ಮತ್ತು ದೈಹಿಕ ಅಸ್ವಾಸ್ಥ್ಯ ಅತಿಶಯ ದುರಾಸೆಯ ಫಲ. ಪಡೆದುಕೊಳ್ಳುವ ಭರದಲ್ಲಿ ಶಾಂತಿಯನ್ನು ಕಳೆದುಕೊಳ್ಳುತ್ತಿದ್ದೇವೆ. ವೈದ್ಯರ ಸಹಾಯದಿಂದ ಬದುಕು ದೀರ್ಘಗೊಳಿಸಲು ಪ್ರಯತ್ನ ಸಾಗುತ್ತಿದೆ ಎಂದರು.
ಮನುಷ್ಯನ ಬದುಕು ಅಮೂಲ್ಯ. ಆದರೆ,ಜನ್ಮಾಂತರದ ಕರ್ಮದ ಫಲವಾಗಿ ಬದುಕಿನಲ್ಲಿ ಕಷ್ಟ, ಸುಖ ಪ್ರಾಪ್ತಿಯಾಗುತ್ತವೆ. ಅದೆಲ್ಲವನ್ನು ದಾಟಿ ಸುಖಮಯ ಬದುಕಿಗೆ ಪ್ರಯತ್ನ ನಿರಂತರವಾಗಿರುತ್ತದೆ ಎಂದವರು ಹೇಳಿದರು.
ಆಸ್ಪತ್ರೆ ಆಡಳಿತ ನಿರ್ದೇಶಕ ಎಂ. ಹರಿಶ್ಚಂದ್ರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಜ್ಯೋತಿಷ್ಯ ವಿದ್ವಾನ್ ಕಬಿಯಾಡಿ ಜಯರಾಮ ಆಚಾರ್ಯ, ಶಾಸಕ ಯಶಪಾಲ್ ಸುವರ್ಣ, ಮನೋವೈದ್ಯ ಡಾ. ಪಿ. ವಿ. ಭಂಡಾರಿ, ಉದ್ಯಮಿ ಎನ್. ಅಚ್ಚುತ ಹೊಳ್ಳ, ಗಾಂಧಿ ಆಸ್ಪತ್ರೆ ವೈದ್ಯಕೀಯ ನಿರ್ದೇಶಕ ಡಾ. ವ್ಯಾಸರಾಜ ತಂತ್ರಿ, ಲಕ್ಷ್ಮೀ ಹರಿಶ್ಚಂದ್ರ, ಡಾ. ಪಂಚಮಿ, ಡಾ. ವಿದ್ಯಾ ತಂತ್ರಿ ಉಪಸ್ಥಿತರಿದ್ದರು.
ಶ್ವೇತಾ ತಂತ್ರಿ ಪ್ರಾರ್ಥಿಸಿದರು. ಪೂರ್ಣಿಮಾ ಜನಾರ್ದನ್ ಕಾರ್ಯಕ್ರಮ ನಿರೂಪಿಸಿದರು.