ಕರಾವಳಿಯನ್ನು ಕೋಮು ಸಂಘರ್ಷ ಪ್ರದೇಶ ಎಂದು ಬಿಂಬಿಸಲು ಸರ್ಕಾರದ ಹುನ್ನಾರ
Monday, July 7, 2025
ಲೋಕಬಂಧು ನ್ಯೂಸ್, ಉಡುಪಿ
ಕಳೆದ ಮೂರು ತಿಂಗಳಿಂದ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಕರಾವಳಿಯಲ್ಲಿ ಕೋಮು ಗಲಭೆ ನಡೆಯುತ್ತಿದೆ ಎಂಬ ಸುದ್ದಿಗಳ ಬಗ್ಗೆಯೇ ಚರ್ಚೆಗಳು ನಡೆಯುತ್ತಿವೆ. ಈ ರೀತಿ ಕರಾವಳಿಯನ್ನು ಬಿಂಬಿಸಲು ಕಾಂಗ್ರೆಸ್ ಸರ್ಕಾರ ಹುನ್ನಾರ ನಡೆಸುತ್ತಿದೆ ಎಂದು ಬಜರಂಗದಳ ಕರ್ನಾಟಕ ದಕ್ಷಿಣ ಪ್ರಾಂತದ ಸಂಯೋಜಕ ಸುನಿಲ್ ಕೆ.ಆರ್. ಆಕ್ರೋಶ ವ್ಯಕ್ತಪಡಿಸಿದರು.ಹಿಂದೂ ಕಾರ್ಯಕರ್ತರ ಮೇಲೆ ನಡೆಯುತ್ತಿರುವ ದೌರ್ಜನ್ಯ ಖಂಡಿಸಿ ಹಿಂದು ಜಾಗರಣ ವೇದಿಕೆ ವತಿಯಿಂದ ಸೋಮವಾರ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಎದುರು ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.
ಕರ್ನಾಟಕದಲ್ಲಿ ಜನರು ಕರಾವಳಿಯ ಬಗ್ಗೆ ನಕಾರಾತ್ಮಕವಾಗಿ ಮಾತನಾಡುವಂತೆ ಸರ್ಕಾರ ಹುನ್ನಾರ ನಡೆಸುತ್ತಿದೆ. ಹಿಂದೂ ಮುಖಂಡರ ಮೇಲೆ ನಿರಂತರ ಕೇಸು, ರೌಡಿಶೀಟರ್ ಹಾಕುವ ಸಂಚು ನಡೆಯುತ್ತಿದೆ. ಎರಡು ವರ್ಷದ ಹಿಂದೆ ಕರಾವಳಿ ಹಿಂದುತ್ವದ ಫ್ಯಾಕ್ಟರಿ ಎಂದು ಇದೇ ಸಿದ್ದರಾಮಯ್ಯ ಹೇಳಿದ್ದರು. ಅದನ್ನೇ ಈಗ ಸಹಿಸಿಕೊಳ್ಳಲು ಆಗದೇ ಹಿಂದುತ್ವವನ್ನು ಮುಗಿಸುವ ಸಂಚು ನಡೆಯುತ್ತಿದೆ ಎಂದು ಆರೋಪಿಸಿದರು.
ಸಾಮಾಜಿಕ ಜಾಲತಾಣದಲ್ಲಿ ಹಿಂದೂ ಜಾಗೃತಿ ಬಗ್ಗೆ ಜಾಗೃತೆ ಮೂಡಿಸಿದರೂ ಕೇಸ್ ಹಾಕಲಾಗುತ್ತಿದೆ.
ಈ ಹಿಂದೆಯೂ ಹಿಂದೂ ನಾಯಕರು ಹಾಗೂ ಕಾರ್ಯಕರ್ತರ ಮೇಲೆ ಹಲವು ದೌರ್ಜನ್ಯ ನಡೆದಿದೆ. ಈ ಹಿಂದೂ ವಿರೋಧಿ ನೀತಿಯನ್ನು ವಿಹಿಂಪ ಮತ್ತು ಬಜರಂಗದಳ ಮಂಗಳೂರು ವಿಭಾಗ ಗಟ್ಟಿಯಾಗಿ ಪ್ರಶ್ನೆ ಮಾಡಿತ್ತು. ಈಗಲೂ ಅದೇ ರೀತಿಯ ಪ್ರಯತ್ನ ನಡೆಯುತ್ತಿದೆ.
ಕೋಮುವಾದ ತಡೆಯಲು ವಿಶೇಷ ಪಡೆಯನ್ನು ಸರ್ಕಾರ ರಚಿಸಿದೆ. ಅದು ಉತ್ತಮ ಬೆಳವಣಿಗೆಯಾದರೂ ಅದನ್ನು ಹಿಂದೂಗಳ ವಿರುದ್ಧ ಮಾತ್ರ ಬಳಸಲಾಗುತ್ತಿದೆ. ಹಿಂದೂಗಳನ್ನು ಮೂರನೇ ದರ್ಜೆಯ ಸಮಾಜದಂತೆ ನೋಡುವುದನ್ನು ನಾವು ಸಹಿಸುವುದಿಲ್ಲ. ಗೋವು ಕಳ್ಳತನ ಸೇರಿದಂತೆ ಎಲ್ಲವನ್ನೂ ನಿಲ್ಲಿಸಲು ಈ ಪಡೆಯನ್ನು ಬಳಸಿಕೊಳ್ಳಿ. ಲವ್ ಜಿಹಾದ್, ಗೋ ಹತ್ಯೆ, ಮತಾಂತರ ನಿಂತರೆ ತನ್ನಿಂದತಾನೇ ಸೌಹಾರ್ದತೆ ಮೂಡುತ್ತದೆ ಎಂದರು.
ಇದೀಗ ಸತೀಶ್ ಪೂಜಾರಿ ಸೇರಿದಂತೆ ಹಲವು ಹಿಂದೂ ಮುಖಂಡರಿಗೆ ರಾಜ್ಯದ ಬೇರೆ ಬೇರೆ ಕಡೆ ಹೋಗದಂತೆ ನಿರ್ಬಂಧ ವಿಧಿಸಿ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಲಾಗುತ್ತಿದೆ. ಹಿಂದೂಗಳ ಮೇಲಿನ ದಾಳಿಯನ್ನು, ಹಿಂದೂಗಳ ಶ್ರದ್ಧೆಗಳ ಮೇಲಿನ ದಾಳಿಯನ್ನು ಪ್ರಶ್ನಿಸಿದರೆ ಅದು ಹೇಗೆ ಪ್ರಚೋದನೆ ಆಗುತ್ತದೆ? ದಿನೇಶ್ ಗುಂಡೂರಾವ್ ಸೇರಿದಂತೆ ಹಲವು ಮುಖಂಡರು ಇದೇ ರೀತಿ ಕೋಮು ಸೌಹಾರ್ದ ಕೆಡಿಸುವ ಮಾತನಾಡುತ್ತಾರೆ. ಅವರನ್ನು ಕೂಡಾ ಬಂಧಿಸಿ ಎಂದು ಸವಾಲೆಸೆದರು.
ಬೈಂದೂರಿನ ದೇವಸ್ಥಾನದ ಎದುರು, ಸಿದ್ದಾಪುರ ಇತ್ಯಾದಿ ಹಲವೆಡೆ ಗೋ ಕಳ್ಳತನ ಆಗಿದೆ. ಆದರೆ, ಅದನ್ನು ನಾವು ಪ್ರಶ್ನೆ ಮಾಡಬಾರದೇ ಎಂದು ಸುನಿಲ್ ಕೆ.ಆರ್. ಪ್ರಶ್ನಿಸಿದರು.
ಈ ಸಂದರ್ಭದಲ್ಲಿ ಹಿಂದೂ ಜಾಗರಣ ವೇದಿಕೆ ಮುಖಂಡ ವಾಸುದೇವ ಗಂಗೊಳ್ಳಿ, ಬಿಜೆಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ, ಶಾಸಕರಾದ ಗುರುರಾಜ್ ಗಂಟಿಹೊಳೆ ಮತ್ತು ಗುರ್ಮೆ ಸುರೇಶ್ ಶೆಟ್ಟಿ, ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ, ಮಹೇಶ್ ಬೈಲೂರು ಮೊದಲಾದವರಿದ್ದರು.