ಕೇಂದ್ರ ಕಾರ್ಮಿಕ ನೀತಿಗೆ ವಿಮಾ ನೌಕರರ ವಿರೋಧ
Thursday, July 10, 2025
ಲೋಕಬಂಧು ನ್ಯೂಸ್ ಉಡುಪಿ
ಕೇಂದ್ರ ಕಾರ್ಮಿಕ ಸಂಘಟನೆಗಳು ಮತ್ತು ಸ್ವತಂತ್ರ ವಲಯದ ರಾಷ್ಟ್ರೀಯ ಒಕ್ಕೂಟಗಳ ಜಂಟಿ ವೇದಿಕೆ ಕರೆ ನೀಡಿದ ರಾಷ್ಟ್ರವ್ಯಾಪಿ ಮುಷ್ಕರದಲ್ಲಿ ಅಖಿಲ ಭಾರತ ವಿಮಾ ನೌಕರರ ಸಂಘ ಭಾಗಿಯಾಗಿದ್ದು ಉಡುಪಿ, ದ.ಕ. ಮತ್ತು ಚಿಕ್ಕಮಗಳೂರು ಜಿಲ್ಲೆಗಳನ್ನೊಳಗೊಂಡ ಭಾರತೀಯ ಜೀವ ವಿಮಾ ನಿಗಮದ ಉಡುಪಿ ವಿಭಾಗದಲ್ಲಿ ವಿಮಾ ನೌಕರರ ಸಂಘದ ಸದಸ್ಯರು ಮುಷ್ಕರ ನಡೆಸಿದರು.ವಿಭಾಗೀಯ ಕಚೇರಿ ಆವರಣದಲ್ಲಿ ನಡೆದ ಮತ ಪ್ರದರ್ಶನದಲ್ಲಿ ಸಂಘದ ಅಧ್ಯಕ್ಷ ಡೆರಿಕ್ ಎ. ರೆಬೆಲ್ಲೊ ಮಾತನಾಡಿ, ಸಾರ್ವಜನಿಕ ವಲಯದ ವಿಮಾ ಉದ್ಯಮದ ಮೇಲಿನ ದಾಳಿ ನಿರಂತರವಾಗಿ ಮುಂದುವರಿದಿದೆ.
ಸರಕಾರ ಮುಂಬರುವ ಸಂಸತ್ತಿನ ಮಳೆಗಾಲದ ಅಧಿವೇಶನದಲ್ಲಿ ವಿಮಾ ಕಾನೂನು ತಿದ್ದುಪಡಿ ಮಸೂದೆ ಪರಿಚಯಿಸಲು ಮುಂದಾಗಿದೆ. ಈ ಮಸೂದೆ ವಿಮಾ ಕಾಯ್ದೆ 1938, ಜೀವ ವಿಮಾ ನಿಗಮ ಕಾಯ್ದೆ 1956 ಹಾಗೂ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ಕಾಯ್ದೆ 1999ಗಳಿಗೆ ತಿದ್ದುಪಡಿ ತರಲು ಮಂಡಿಸಿದ ಪ್ರಸ್ತಾವನೆಯಾಗಿದೆ.
ಅಲ್ಲದೆ ವಿಮಾ ವಲಯದಲ್ಲಿ ವಿದೇಶಿ ನೇರ ಬಂಡವಾಳದ ಈಗಿರುವ ಶೇ.74ರಿಂದ ಶೇ.100ಕ್ಕೆ ಹೆಚ್ಚಿಸಲು ಉದ್ದೇಶಿಸಿದೆ.
ಪ್ರಸ್ತಾಪಿತ ತಿದ್ದುಪಡಿಗಳಿಂದ ಸಂಯೋಜಿತ ಪರವಾನಿಗೆಗಳ ವ್ಯಾಪ್ತಿಯನ್ನು ಮರುವ್ಯಾಖ್ಯಾನಿಸುವುದು, ವಿಮಾ ಸಂಸ್ಥೆ ಪ್ರಾರಂಭಿಸಲು ಈಗಿರುವ ಕನಿಷ್ಟ ಈಕ್ವಿಟಿ ಬಂಡವಾಳದ ಆವಶ್ಯಕತೆಯನ್ನು ಕಡಿಮೆ ಮಾಡುವುದು, ಸಾಲ್ವೆನ್ಸಿ ಮಾರ್ಜಿನ್ ಆವಶ್ಯಕತೆ ಕಡಿಮೆಗೊಳಿಸುವುದು ಮತ್ತು ವಿಮಾ ನಿಯಂತ್ರಣ ಸಂಸ್ಥೆಗೆ ಹೆಚ್ಚಿನ ಅಧಿಕಾರ ನೀಡುವ ನಿರೀಕ್ಷೆ ಇದೆ. ಜೊತೆಗೆ ವಿದೇಶಿ ಮರುವಿಮಾದಾರರಿಗೆ ನಿವ್ವಳ ಸ್ವಾಮ್ಯದ ನಿಧಿಯ ಅಗತ್ಯವನ್ನು 5 ಸಾವಿರ ಕೋಟಿಯಿಂದ 1000 ಕೋಟಿಗೆ ಇಳಿಸಲು ಉದ್ದೇಶಿಸಲಾಗಿದೆ.
ಸರಕಾರ ಮುಂಬರುವ ತಿಂಗಳಲ್ಲಿ ಎಲ್ಐಸಿಯ ಶೇ. 6.5ರಷ್ಟು ಪಾಲನ್ನು ಆಫರ್ ಫಾರ್ ಸೇಲ್ ಮೂಲಕ ಮತ್ತೆ ಮಾರಾಟ ಮಾಡಲು ಯೋಚಿಸುತ್ತಿದೆ. ಅದೇ ರೀತಿ ಸಾರ್ವಜನಿಕ ವಲಯದ ಸಾಮಾನ್ಯ ವಿಮಾ ಕಂಪೆನಿಗಳ ಖಾಸಗೀಕರಣ ಮಾಡಲು ಸರಕಾರ ಮುಂದಾಗಿದೆ. ಸರಕಾರದ ಈ ಧೋರಣೆಯನ್ನು ಹಿಮ್ಮೆಟ್ಟಿಸಬೇಕಾಗಿದೆ ಎಂದರು.
ಸಂಘದ ಪ್ರಧಾನ ಕಾರ್ಯದರ್ಶಿ ಕೆ.ವಿಶ್ವನಾಥ ಮಾತನಾಡಿ, ಪ್ರಸ್ತುತ ಎಲ್ಐಸಿಯಲ್ಲಿ ಮೂರು ಮತ್ತು ನಾಲ್ಕನೇ ದರ್ಜೆಯ ನೌಕರರ ನೇಮಕಾತಿಗೆ ಸತತ ಹೋರಾಟ ನಡೆಸುತ್ತಿದ್ದು, ನಮ್ಮ ಬೇಡಿಕೆಯನ್ನು ಈ ಹೋರಾಟದೊಂದಿಗೆ ಸಂಯೋಜಿಸಲಾಗಿದೆ.
ಕೇಂದ್ರ ಸರಕಾರ 29 ಕಾರ್ಮಿಕ ಕಾನೂನುಗಳನ್ನು ರದ್ದುಗೊಳಿಸಿ 4 ಕಾರ್ಮಿಕ ಸಂಹಿತೆಗಳಾದ ಕೈಗಾರಿಕೆ ಸಂಬಂಧಗಳ ಸಂಹಿತೆ 2020, ಔದ್ಯೋಗಿಕ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿ ಸಂಹಿತೆ 2020, ಸಾಮಾಜಿಕ ಭದ್ರತಾ ಸಂಹಿತೆ 2020 ಮತ್ತು ವೇತನ ಸಂಹಿತೆ 2019ನ್ನು ಕಾರ್ಮಿಕರ ಮೇಲೆ ಹೇರಿದೆ. ಇದು ಅಪಾಯಕಾರಿ ಎಂದರು.