.jpg)
ಪರಿಸರ ಪೂರಕ ಗಿಡ ನೆಡುವುದು ಸೂಕ್ತ
Monday, July 7, 2025
ಲೋಕಬಂಧು ನ್ಯೂಸ್, ಉಡುಪಿ
ಪರಿಸರಕ್ಕೆ ಪೂರಕ ಮತ್ತು ಸೂಕ್ತವಾದ ಹೂ- ಹಣ್ಣುಗಳ ಗಿಡಗಳನ್ನು ಹೆಚ್ಚು ನೆಡಬೇಕು. ಅದರಿಂದ ಪರಿಸರವೂ ಸುಂದರವಾಗುತ್ತದೆ, ಪಶು ಪಕ್ಷಿಗಳಿಗೂ ಆಶ್ರಯವಾಗುತ್ತದೆ ಎಂದು ಮಣಿಪಾಲ ಕೆಎಂಸಿ ವೈದ್ಯ ಡಾ.ಕಿರಣ್ ಆಚಾರ್ಯ ಹೇಳಿದರು.
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಉಡುಪಿ ಜಿಲ್ಲಾ ಸಹಕಾರ ಯೂನಿಯನ್, ಬಡಗಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ಜಿಲ್ಲಾ ಸಂಸ್ಥೆ ಉಡುಪಿ ಹಾಗೂ ಉಡುಪಿ ಜಿಲ್ಲಾ ಸಹಕಾರ ಇಲಾಖೆ ಸಹಯೋಗದೊಂದಿಗೆ ಮಾಜಿ ಸಚಿವ ದಿ.ಡಾ. ವಿ.ಎಸ್. ಆಚಾರ್ಯ ಜನ್ಮದಿನ ಪ್ರಯುಕ್ತ ಮಣಿಪಾಲ ಪ್ರಗತಿ ನಗರದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ತರಬೇತಿ ಕೇಂದ್ರದಲ್ಲಿ ನಡೆದ ಅಂತಾರಾಷ್ಟ್ರೀಯ ಸಹಕಾರ ವರ್ಷಾಚರಣೆ `ಏಕ್ ಪೇಡ್ ಮಾ ಕೆ ನಾಮ್' ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪರಿಸರ ಮಾರಕವಾದ ಅಕೇಶಿಯಾದಂಥ ಗಿಡ ನೆಡಕೂಡದು ಎಂದು ಸಲಹೆ ನೀಡಿದರು.
ಪರಿಸರ ಪ್ರೇಮಿಯಾಗಿದ್ದ ಆಚಾರ್ಯ
ವೈದ್ಯಕೀಯ ಶಿಕ್ಷಣ ಸಚಿವರಾಗಿ ದೇಶದಲ್ಲಿ ಪ್ರಥಮ ಬಾರಿಗೆ ಆರು ಮೆಡಿಕಲ್ ಕಾಲೇಜುಗಳನ್ನು ಒಂದೇ ವರ್ಷದಲ್ಲಿ ಆರಂಭಿಸಿದ್ದ ಹೆಗ್ಗಳಿಕೆ ವಿ.ಎಸ್.ಆಚಾರ್ಯ ಅವರಿಗೆ ಸಲ್ಲುತ್ತದೆ. ಅವರು ಪರಿಸರ ಪ್ರೇಮಿಯೂ ಆಗಿದ್ದರು. ರಸ್ತೆ ಅಗಲಗೊಳಿಸುವ ಸಂದರ್ಭ ಒಂದು ಮರ ಕಡಿದರೆ ಹತ್ತು ಗಿಡ ನೆಡುವ ಸಂಕಲ್ಪ ಮಾಡಬೇಕೆಂದು ಹೇಳುತ್ತಿದ್ದರು. ಅದರಿಂದ ಅಭಿವೃದ್ಧಿಯೂ ಆಗುತ್ತದೆ, ಪರಿಸರವೂ ಉಳಿಯುತ್ತದೆ ಎಂಬುವುದು ಅವರ ಚಿಂತನೆಯಾಗಿತ್ತು ಎಂದು ಡಾ.ಕಿರಣ್ ಆಚಾರ್ಯ ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಬಡಗಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಮಾತನಾಡಿ, ಉಡುಪಿ ಜಿಲ್ಲೆಯಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್'ನಲ್ಲಿ 48 ಸಾವಿರ ವಿದ್ಯಾರ್ಥಿಗಳು ತರಬೇತಿ ಪಡೆಯುತ್ತಿದ್ದಾರೆ. ಮಕ್ಕಳಲ್ಲಿ ಎಳವೆಯಲ್ಲಿಯೇ ಸಂಸ್ಕಾರ, ಶಿಸ್ತು, ಸೇವಾ ಮನೋಭಾವನೆ ಬೆಳೆಸಲು ಸ್ಕೌಟ್ಸ್ ಮತ್ತು ಗೈಡ್ಸ್ ಸಹಕಾರಿ ಎಂದರು.
ಜಿಲ್ಲೆಯಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಬೆಳವಣಿಗೆಯಲ್ಲಿ ವಿ.ಎಸ್. ಆಚಾರ್ಯ ಕೊಡುಗೆ ಅಪಾರ. ಅವರು ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಗೆ 23 ಎಕರೆ ಜಾಗವನ್ನು ಮಂಜೂರು ಮಾಡಿಕೊಟ್ಟಿದ್ದಾರೆ. ಅಲ್ಲದೆ ಸಂಸ್ಥೆಗೆ ಬೇಕಾದ ಮೂಲಭೂತ ಸೌಕರ್ಯ ಕಲ್ಪಿಸಿಕೊಟ್ಟಿದ್ದಾರೆ. ಅವರ ಜನ್ಮದಿನವನ್ನು ಗಿಡ ನೆಡುವ ಮೂಲಕ ಆಚರಿಸಲಾಗುತ್ತಿದೆ ಎಂದರು.
ಅಲೆವೂರು ಗ್ರಾ.ಪಂ. ಅಧ್ಯಕ್ಷ ಯತೀಶ್ ಕುಮಾರ್, ಜಿಲ್ಲಾ ಸ್ಕೌಟ್ ಆಯುಕ್ತ ಜನಾರ್ದನ ಕೊಡವೂರು, ಗೈಡ್ಸ್ ಆಯುಕ್ತೆ ಜ್ಯೋತಿ ಪೈ, ಕೆನರಾ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಮೋಹನ ಉಪಾಧ್ಯ, ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿ ಅಧ್ಯಕ್ಷ ವೈ.ಸುಧೀರ್ ಕುಮಾರ್, ಉಡುಪಿ ಇಂಡಸ್ಟ್ರಿಯಲ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ, ಕೊಡವೂರು ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷ ನಾರಾಯಣ ಬಲ್ಲಾಳ್, ಉಡುಪಿ ಟಿಎಪಿಸಿಎಂಎಸ್ ಲಿಮಿಟೆಡ್ ಅಧ್ಯಕ್ಷ ಅಶೋಕ್ ಶೆಟ್ಟಿ ಮೈರ್ಮಾಡಿ, ಗುರು ನಿತ್ಯಾನಂದ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಸುರೇಶ್ ಶೆಟ್ಟಿ, ಬಡಗಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಪ್ರಧಾನ ವ್ಯವಸ್ಥಾಪಕ ರಾಜೇಶ್ ವಿ. ಶೇರಿಗಾರ್, ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ಹರೀಶ್ ಕಿಣಿ ಅಲೆವೂರು ಮುಖ್ಯ ಅತಿಥಿಗಳಾಗಿದ್ದರು.
ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನುಷಾ ಕೋಟ್ಯಾನ್ ಸ್ವಾಗತಿಸಿ, ವಂದಿಸಿದರು. ತೇಜಸ್ ನಿರೂಪಿಸಿದರು.