
ಶಾಂತಿ ಸೌಹಾರ್ದತೆ ಕೆಡಿಸುವ ಯತ್ನ ಬೇಡ
Friday, July 4, 2025
ಲೋಕಬಂಧು ನ್ಯೂಸ್, ಉಡುಪಿ
ಕುಂಜಾಲು ಗೋವು ರುಂಡ ಪತ್ತೆ ಪ್ರಕರಣದ ಆರೋಪಿಗಳನ್ನು ಪೊಲೀಸರು ಪತ್ತೆ ಮಾಡಿದ್ದು, ಇದೀಗ ವಿಶ್ವ ಹಿಂದೂ ಪರಿಷತ್ ನಾಯಕ ಶರಣ್ ಪಂಪ್'ವೆಲ್ ಸೌಹಾರ್ದ ಕೆಡಿಸುವ ಹೇಳಿಕೆ ನೀಡಿರುವುದನ್ನು ಕಾಂಗ್ರೆಸ್ ನಾಯಕ ಪ್ರಸಾದರಾಜ್ ಕಾಂಚನ್ ತೀವ್ರವಾಗಿ ಖಂಡಿಸಿದ್ದಾರೆ.
ಸಮಾಜದಲ್ಲಿ ಆಶಾಂತಿಯನ್ನೇ ಬಯಸುವ ಕಿಡಿಗೇಡಿಗಳು ಮತ್ತೆ ಮತ್ತೆ ಅದೇ ವಿಚಾರದಲ್ಲಿ ಕೋಮು ಸೌಹಾರ್ದ ಕೆಡಿಸುವ ಕಾರ್ಯಕ್ಕೆ ಕೈಹಾಕಿರುವುದು ಶೋಚನೀಯ.
ಕುಂಜಾಲು ಪ್ರಕರಣದಲ್ಲಿ ಹಲವು ಮಂದಿ ಬಂಧಿತರಾಗಿದ್ದರೂ ಶರಣ್ ಪಂಪ್'ವೆಲ್ ಜಿಲ್ಲೆಯಲ್ಲಿ ಅಶಾಂತಿ ಮೂಡಿಸುವ ನಿಟ್ಟಿನಲ್ಲಿ ಉಡುಪಿಗೆ ಆಗಮಿಸಿ ಅನಗತ್ಯ ಗೊಂದಲ ಹಾಗೂ ಕೋಮು ದ್ವೇಷಿ ಹೇಳಿಕೆ ನೀಡುತ್ತಿರುವುದು ಖಂಡನೀಯ.
ಉಡುಪಿ ಜಿಲ್ಲೆ ಸುರಕ್ಷಿತ ಹಾಗೂ ಪ್ರಜ್ಞಾವಂತರ ಜಿಲ್ಲೆ. ಇಲ್ಲಿನ ಜನ ಶಾಂತಿ, ನೆಮ್ಮದಿಯನ್ನು ಬಯಸುತ್ತಾರೆ. ಆದರೆ, ದಕ್ಷಿಣ ಕನ್ನಡದಲ್ಲಿ ಕೋಮು ದ್ವೇಷ ಹರಡಿ ಶಾಂತಿ ಕದಡಿಸಿದ ಶರಣ್ ಪಂಪ್'ವೆಲ್ ಇದೀಗ ಉಡುಪಿ ಜಿಲ್ಲೆಯಲ್ಲಿ ಕೋಮು ಸೌಹಾರ್ದ ಕೆಡಿಸಲು ತೊಡಗಿದ್ದು, ಅದಕ್ಕೆ ಉಡುಪಿ ಜಿಲ್ಲೆಯ ಜನ ಬೆಂಬಲಿಸುವುದಿಲ್ಲ ಎಂದು ಕಟುಮಾತಿನಲ್ಲಿ ಪ್ರಸಾದರಾಜ್ ಕಾಂಚನ್ ಎಚ್ಚರಿಕೆ ನೀಡಿದ್ದಾರೆ.
ಕೋಮು ದ್ವೇಷ ಹರಡಿಸಿ ದಾಂಧಲೆ ಎಬ್ಬಿಸುವವರ ವಿರುದ್ದ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಕೋಮು ನಿಗ್ರಹ ದಳ, ಶರಣ್ ಪಂಪ್'ವೆಲ್ ವಿರುದ್ದ ಕಠಿಣ ಕಾನೂನು ಕ್ರಮ ಕೈಗೊಂಡು ಜಿಲ್ಲೆಯಲ್ಲಿ ಶಾಂತಿ ಸೌಹಾರ್ದತೆಗೆ ಧಕ್ಕೆಯಾಗದಂತೆ ನೋಡಿಕೊಳ್ಳುವಂತೆ ಪ್ರಸಾದರಾಜ್ ಕಾಂಚನ್ ಆಗ್ರಹಿಸಿದ್ದಾರೆ.