ಜನೌಷಧ ಸ್ಥಗಿತ ತಡೆ ಆದೇಶ ಸರ್ಕಾರಕ್ಕೆ ಮುಖಭಂಗ
Thursday, July 10, 2025
ಲೋಕಬಂಧು ನ್ಯೂಸ್, ಉಡುಪಿ
ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿರುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಪ್ರಧಾನ ಮಂತ್ರಿ ಜನೌಷಧ ಕೇಂದ್ರಗಳನ್ನು ಸ್ಥಗಿತಗೊಳಿಸಲು ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡುವ ಮೂಲಕ ರಾಜ್ಯ ಸರಕಾರಕ್ಕೆ ಹಿನ್ನಡೆಯಾಗಿದ್ದು, ಬಡ ವರ್ಗದ ಜನರಿಗೆ ಕೈಗೆಟುಕುವ ದರದಲ್ಲಿ ಜೆನೆರಿಕ್ ಔಷಧ ಲಭಿಸುವಂತೆ ಮಾಡುವ ಜನೌಷಧಿ ಕೇಂದ್ರಗಳ ತೆರವಿಗೆ ಮುಂದಾದ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಮುಖಭಂಗವಾಗಿದೆ ಎಂದು ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಹೇಳಿದ್ದಾರೆ.ಆರೋಗ್ಯ ಇಲಾಖೆ, ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಜನೌಷಧ ಕೇಂದ್ರಗಳನ್ನು ಬಂದ್ ಮಾಡುವಂತೆ ಆದೇಶ ಜಾರಿ ಮಾಡಿತ್ತು. ಆ ಹಿನ್ನೆಲೆಯಲ್ಲಿ ಜಿಲ್ಲೆಯ ವಿವಿಧ ಆಸ್ಪತ್ರೆಗೆ ಸೇರಿದ ಜನೌಷಧ ಕೇಂದ್ರಗಳು ಮುಚ್ಚಲ್ಪಟ್ಟಿದ್ದು, ಬಡರೋಗಿಗಳಿಗೆ ಕಡಿಮೆ ಬೆಲೆಯಲ್ಲಿ ಔಷಧ ದೊರೆಯದೆ ತೀವ್ರ ಸಮಸ್ಯೆ ಉಂಟಾಗಿತ್ತು.
ಜನೌಷಧಿ ಕೇಂದ್ರಗಳ ಸ್ಥಗಿತಕ್ಕೆ ಸಾರ್ವಜನಿಕರು ಮತ್ತು ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಆರೋಗ್ಯ ಇಲಾಖೆ ಈ ನಿರ್ಧಾರವನ್ನು ಹಿಂಪಡೆಯುವಂತೆ ಮನವಿ ಮಾಡಿದ್ದರೂ ಸ್ಪಂದಿಸದ ರಾಜ್ಯ ಸರಕಾರಕ್ಕೆ ನ್ಯಾಯಾಲಯ ತಡೆಯಾಜ್ಞೆ ನೀಡುವ ಮೂಲಕ ಜನ ವಿರೋಧಿ ನೀತಿಗೆ ತಕ್ಕ ಉತ್ತರ ನೀಡಿದೆ.
ಆರ್ಥಿಕವಾಗಿ ತೀವ್ರ ಸಂದಿಗ್ಧ ಸ್ಥಿತಿಯಲ್ಲಿರುವ ರಾಜ್ಯ ಸರ್ಕಾರದ ಅನ್ನಭಾಗ್ಯ ಅಕ್ಕಿಯನ್ನು ಸಾಗಿಸಿದ ಲಾರಿ ಮಾಲೀಕರಿಗೆ ಸಾಗಾಟ ವೆಚ್ಚ ಬಾಕಿ ಹಣ ನೀಡದ ಕಾರಣಕ್ಕೆ ಲಾರಿ ಮಾಲೀಕರಿಂದ ಸರ್ಕಾರದ ವಿರುದ್ಧ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಮಣಿದು 244 ಕೋಟಿ ರೂ. ಬಾಡಿಗೆ ಹಣ ಬಿಡುಗಡೆ ಮಾಡಿದ್ದು, ಮೆಸ್ಕಾಂ ಇಲಾಖೆ ಗ್ರಾಹಕರಿಗೆ ಪ್ರತಿ ಯೂನಿಟ್ ಮೇಲೆ 36 ಪೈಸೆಯನ್ನು ಹೆಚ್ಚುವರಿಯಾಗಿ ವಿಧಿಸಿ ಸಿಬ್ಬಂದಿಗಳ ಪಿಂಚಣಿ ನಿಧಿಗೆ ಸಂಗ್ರಹಿಸುವ ಪರಿಸ್ಥಿತಿ ರಾಜ್ಯದಲ್ಲಿ ನಿರ್ಮಾಣವಾಗಿದ್ದು ಸರ್ಕಾರ ತಕ್ಷಣ ಈ ನಿರ್ಧಾರವನ್ನು ತಕ್ಷಣ ಕೈಬಿಡುವಂತೆ ಯಶಪಾಲ್ ಆಗ್ರಹಿಸಿದ್ದಾರೆ.