-->
ಗ್ರಾಮ ಮಟ್ಟದಲ್ಲಿ ಪಂಚ ಗ್ಯಾರಂಟಿ ಮಾಹಿತಿ

ಗ್ರಾಮ ಮಟ್ಟದಲ್ಲಿ ಪಂಚ ಗ್ಯಾರಂಟಿ ಮಾಹಿತಿ

ಲೋಕಬಂಧು ನ್ಯೂಸ್, ಉಡುಪಿ
ಬಡಜನರ ಜೀವನ ಮಟ್ಟ ಸುಧಾರಣೆಗೆ ರಾಜ್ಯ ಸರಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗಳನ್ನು ಪಂಚಾಯತ್'ಗಳಿಗೆ ತೆರಳಿ ಪ್ರತಿಯೊಬ್ಬ ಅರ್ಹ ಫಲಾನುಭವಿಗೂ ಈ ಯೋಜನೆ ತಲುಪಿಸುವ ಕಾರ್ಯ ಮಾಡಬೇಕು ಎಂದು ಉಡುಪಿ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ರಮೇಶ್ ಕಾಂಚನ್ ಹೇಳಿದರು.
ಉಡುಪಿ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಉಡುಪಿ ತಾಲೂಕು ಪಂಚಾಯತ್'ನ ಐದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ಉಡುಪಿ ತಾಲೂಕು ವ್ಯಾಪ್ತಿಯಲ್ಲಿ ಪಂಚ ಗ್ಯಾರಂಟಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವ ನಿಟ್ಟಿನಲ್ಲಿ ಹಾಗೂ ಯೋಜನೆಗಳ ಮಾಹಿತಿಯನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಿಸುವ ಉದ್ದೇಶದಿಂದ ಪ್ರತೀ ಗ್ರಾಮ ಪಂಚಾಯತ್ ಮಟ್ಟದಲ್ಲಿಯೂ `ನಮ್ಮ ನಡಿಗೆ ಪಂಚಾಯತ್ ಕಡೆಗೆ' ಕಾರ್ಯಕ್ರಮ ಆಯೋಜಿಸಿ ಜನಪ್ರತಿನಿಧಿಗಳು, ತಾಲೂಕು ಮಟ್ಟದ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು ಮೊದಲಾದವರಿಗೆ ಪಂಚ ಗ್ಯಾರಂಟಿ ಯೋಜನೆ ಕುರಿತು ಮಾಹಿತಿ ಕಾರ್ಯಾಗಾರ ಏರ್ಪಡಿಸಲಾಗುವುದು ಎಂದರು.


ಜಿಲ್ಲೆಯಲ್ಲಿ ಗ್ಯಾರಂಟಿ ಯೋಜನೆಗಳನ್ನು ವ್ಯವಸ್ಥಿತವಾಗಿ ಅನುಷ್ಠಾನ ಮಾಡಲಾಗುತ್ತಿದೆ. ತಾಲೂಕು ಮಟ್ಟದಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ಬಡ ಜನರಿಗೆ ಯೋಜನೆಗಳು ತಲುಪುವಂತೆ ನೋಡಿಕೊಳ್ಳಬೇಕು. ಜನಸಾಮಾನ್ಯರು ಯಾವುದೇ ಯೋಜನೆಗಳ ಲಾಭ ಪಡೆಯಲು ಮುಂದೆ ಬಂದಾಗ ಅವರನ್ನು ಸತಾಯಿಸದೇ ಅವರ ಕೆಲಸ ಕಾರ್ಯಗಳನ್ನು ಆದ್ಯತೆಯ ಮೇಲೆ ಮಾಡಿಕೊಡಲು ಕ್ರಮ ವಹಿಸಬೇಕು ಎಂದರು.


ಗೃಹಲಕ್ಷ್ಮೀ ಯೋಜನೆಯಡಿ ಫಲಾನುಭವಿಗಳು ಅರ್ಜಿ ಸಲ್ಲಿಸುವಾಗ ಎದುರಾಗುವ ಸಣ್ಣಪುಟ್ಟ ಸಮಸ್ಯೆಗಳನ್ನು ಸ್ಥಳೀಯ ಮಟ್ಟದಲ್ಲಿ ಬಗೆಹರಿಸಲು ಕ್ರಮ ವಹಿಸಬೇಕು. ಸ್ಥಳೀಯ ಮಟ್ಟದಲ್ಲಿ ಬಗೆಹರಿಸಲು ಸಾಧ್ಯವಿಲ್ಲದ ಅರ್ಜಿಗಳ ಪಟ್ಟಿ ನೀಡಿದಲ್ಲಿ ಅಂಥ ಅರ್ಜಿಗಳನ್ನು ಜಿಲ್ಲಾ ಮಟ್ಟದ ಸಮಿತಿ ಮೂಲಕ ರಾಜ್ಯ ಸಮಿತಿಗೆ ಸಲ್ಲಿಸಲಾಗುವುದು. ಗ್ಯಾರಂಟಿ ಯೋಜನೆಗಳ ಪ್ರಚಾರ ಇನ್ನಷ್ಟು ವ್ಯಾಪಕವಾಗಬೇಕು ಎಂದರು.


ಈ ಹಿಂದೆ ಹೆರ್ಗ ಭಾಗದಲ್ಲಿ ಸಂಚರಿಸುತ್ತಿದ್ದ ಬಸ್ ಕಾರ್ಯಾಚರಣೆ ನಿಲ್ಲಿಸಿರುವ ಬಗ್ಗೆ ಸಾರ್ವಜನಿಕರಿಂದ ದೂರು ಬಂದಿದ್ದು, ಸೋಮವಾರದಿಂದ ಬಸ್ಗಳು ಪುನಃ ಸಂಚಾರ ನಡೆಸುತ್ತಿವೆ. ಬಡಗುಬೆಟ್ಟು ಮತ್ತಿತರ ಕಡೆಗಳಲ್ಲಿ ಸಂಚಾರ ನಿಲ್ಲಿಸಿರುವ ಬಸ್ಸುಗಳು ಮತ್ತೆ ಕಾರ್ಯಾಚರಣೆ ನಡೆಸಲು ಅಧಿಕಾರಿಗಳು ಕ್ರಮ ವಹಿಸಬೇಕು. ಉಡುಪಿ ತಾಲೂಕು ವ್ಯಾಪ್ತಿಯಲ್ಲಿ ಸಂಚರಿಸುತ್ತಿರುವ ನಿಗಮದ ಬಸ್ಸುಗಳ ಮಾಹಿತಿ ನೀಡುವಂತೆ ಸೂಚಿಸಿದರು.


ಜಿಲ್ಲೆಯಲ್ಲಿ ಅನರ್ಹ ಪಡಿತರಚೀಟಿದಾರರ ತನಿಖೆಯನ್ನು ಹಂತ ಹಂತವಾಗಿ ನಡೆಸಿ, ಅನರ್ಹ ಪಡಿತರಚೀಟಿ ರದ್ದುಪಡಿಸಲು ಕ್ರಮ ವಹಿಸಬೇಕು. ಅನ್ನಭಾಗ್ಯ ಯೋಜನೆಯಡಿ ನೀಡಲಾಗುವ ಅಕ್ಕಿ ಕಾಳಸಂತೆಯಲ್ಲಿ ಮಾರಾಟವಾಗದಂತೆ ನೋಡಿಕೊಳ್ಳಬೇಕು. ಪಡಿತರ ಅಂಗಡಿಯಿಂದ ಅಕ್ಕಿ ಪಡೆದು ಅದನ್ನು ಬಳಸದೇ ಇತರರಿಗೆ ಮಾರಾಟ ಮಾಡಿದ್ದಲ್ಲಿ ಪಡಿತರ ವಿತರಿಸಲಾಗುವುದಿಲ್ಲ ಎಂಬ ಎಚ್ಚರಿಕೆಯನ್ನು ಪಡಿತರ ಅಂಗಡಿಯವರು ನೀಡಬೇಕು. ಸೊಸೈಟಿಯ ಸಿಬ್ಬಂದಿಗಳೂ ತಮ್ಮ ಗ್ರಾಹಕರೊಂದಿಗೆ ಸೌಹಾರ್ದಯುತವಾಗಿ ನಡೆದುಕೊಳ್ಳಬೇಕು ಎಂದರು.


ಉಡುಪಿ ತಾಲೂಕಿಗೆ ಸಂಬಂಧಿಸಿದಂತೆ ಯುವನಿಧಿ ಯೋಜನೆಯ ಲಾಭ ಪಡೆಯುತ್ತಿರುವ ಅಭ್ಯರ್ಥಿಗಳ ಸಂಖ್ಯೆ ಕಡಿಮೆ ಇದೆ. ಈ ಬಗ್ಗೆ ವ್ಯಾಪಕ ಪ್ರಚಾರ ಕೈಗೊಂಡು ಯೋಜನೆಯ ಪ್ರಗತಿ ಹೆಚ್ಚಿಸಬೇಕು. ಕಾಲೇಜು ವಿದ್ಯಾರ್ಥಿಗಳು ಈ ಯೋಜನೆಯಡಿ ಹೆಚ್ಚು ಹೆಚ್ಚು ನೋಂದಾಯಿಸಲು ಕಾಲೇಜುಗಳಲ್ಲಿ ಮಾಹಿತಿ ಕಾರ್ಯಾಗಾರ ಏರ್ಪಡಿಸಬೇಕು. ಡಿಪ್ಲೋಮಾ ಅಭ್ಯರ್ಥಿಗಳು ಈ ಯೋಜನೆಯಡಿ ಅರ್ಜಿ ಸಲ್ಲಿಸುವಾಗ ತಾಂತ್ರಿಕ ಸಮಸ್ಯೆ ಎದುರಾಗುತ್ತಿರುವ ಬಗ್ಗೆ ದೂರುಗಳು ಬರುತ್ತಿವೆ. ಅದನ್ನು ಆದ್ಯತೆ ಮೇಲೆ ಇತ್ಯರ್ಥಪಡಿಸಲು ಕ್ರಮ ವಹಿಸಬೇಕು ಎಂದರು.


ಸಭೆಯಲ್ಲಿ ಉಡುಪಿ ತಾಲೂಕು ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರು, ಉಡುಪಿ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ವಿಜಯಾ, ತಾಲೂಕು ಮಟ್ಟದ ಅಧಿಕಾರಿಗಳು ಮೊದಲಾದವರಿದ್ದರು.

Ads on article

Advertise in articles 1

advertising articles 2

Advertise under the article