Belthangadi: ತಿಮರೋಡಿ ಮನೆಗೆ ಎಸ್ಐಟಿ ದಾಳಿ
Tuesday, August 26, 2025
ಲೋಕಬಂಧು ನ್ಯೂಸ್, ಬೆಳ್ತಂಗಡಿ
ಧರ್ಮಸ್ಥಳ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ಪೊಲೀಸರು ಮಹೇಶ್ ಶೆಟ್ಟಿ ತಿಮರೋಡಿ ಮನೆ ಮೇಲೆ ದಾಳಿ ಮಾಡಿದ್ದಾರೆ. ಧರ್ಮಸ್ಥಳ ಪ್ರಕರಣದ ದೂರುದಾರ ಸಿ.ಎನ್.ಚಿನ್ನಯ್ಯ ಜೊತೆ ಪೊಲೀಸರು ಆಗಮಿಸಿದ್ದಾರೆ. ಮಂಗಳವಾರ ಸರ್ಚ್ ವಾರೆಂಟ್ ಜೊತೆ ಈ ದಾಳಿ ನಡೆಸಲಾಗಿದೆ.ಧರ್ಮಸ್ಥಳದಲ್ಲಿ ನೂರಾರು ಹೆಣಗಳನ್ನು ಹೂಳಿದ್ದೇನೆ ಎಂದು ಹೇಳಿರುವ ಪ್ರಕರಣದ ಆರೋಪಿ ಚಿನ್ನಯ್ಯ ಜೊತೆ ಉಜಿರೆಯಲ್ಲಿರುವ ಮಹೇಶ್ ಶೆಟ್ಟಿ ತಿಮರೋಡಿ ಮನೆಗೆ ಪೊಲೀಸರು ಆಮಿಸಿದ್ದಾರೆ.
ಚಿನ್ನಯ್ಯನನ್ನು ಶನಿವಾರ ಬಂಧಿಸಿದ್ದ ಎಸ್ಐಟಿ ಅಧಿಕಾರಿಗಳು ಕೋರ್ಟ್‌ಗೆ ಹಾಜರುಪಡಿಸಿ 10 ದಿನಗಳ ಕಾಲ ವಶಕ್ಕೆ ಪಡೆದಿದ್ದರು. ಮಂಗಳವಾರ ಸ್ಥಳ ಮಹಜರು ನಡೆಸಲು ಆರೋಪಿಯನ್ನು ಮಹೇಶ್ ಶೆಟ್ಟಿ ತಿಮರೋಡಿ ಮನೆಗೆ ಕರೆದುಕೊಂಡು ಬಂದಿದ್ದಾರೆ.
ಮಹೇಶ್ ಶೆಟ್ಟಿ ತಿಮರೋಡಿ ಮನೆಯಲ್ಲಿ ತಾನು ವಾಸ್ತವ್ಯ ಹೂಡಿದ್ದೆ ಎಂದು ದೂರುದಾರ ಚಿನ್ನಯ್ಯ ಪೊಲೀಸರ ಮುಂದೆ ಹೇಳಿಕೆ ನೀಡಿದ್ದ. ಆದ್ದರಿಂದ ತನಿಖಾಧಿಕಾರಿ ಜಿತೇಂದ್ರ ಕುಮಾರ್ ದಯಾಮ ನೇತೃತ್ವದಲ್ಲಿ ಪೊಲೀಸರು ಮಹೇಶ್ ಶೆಟ್ಟಿ ತಿಮರೋಡಿ ಮನೆ ಮೇಲೆ ದಾಳಿ ಮಾಡಿದ್ದಾರೆ.
ಬೆಳ್ತಂಗಡಿ ಕೋರ್ಟ್‌ಗೆ ಆ. 25ರಂದು ಅರ್ಜಿ ಸಲ್ಲಿಕೆ ಮಾಡಿದ್ದ ಎಸ್‌ಐಟಿ ಪೊಲೀಸರು ಮಹೇಶ್ ಶೆಟ್ಟಿ ತಿಮರೋಡಿ ಮನೆ ಸರ್ಚ್ ಮಾಡಲು ಅನುಮತಿ ಪಡೆದಿದ್ದರು. ಮಂಗಳವಾರ ಬೆಳಗ್ಗೆ ದಾಳಿ ಮಾಡಿದ್ದಾರೆ.
ಎರಡು ತಿಂಗಳ ಕಾಲ ಮಹೇಶ್ ಶೆಟ್ಟಿ ತಿಮರೋಡಿ ಮನೆಯಲ್ಲಿ ಆರೋಪಿ ಚಿನ್ನಯ್ಯಗೆ ಆಶ್ರಯ ನೀಡಲಾಗಿತ್ತು ಎಂಬ ಮಾಹಿತಿ ಇದೆ. ಈ ಹಿನ್ನೆಲೆಯಲ್ಲಿ ಸ್ಥಳ ಮಹಜರು ನಡೆಸಲು ಪೊಲೀಸರು ಆಗಮಿಸಿದ್ದಾರೆ.
ಧರ್ಮಸ್ಥಳ ಪ್ರಕರಣದಲ್ಲಿ ಸಂಚಲನ ಉಂಟು ಮಾಡಿದ್ದ ಯೂಟ್ಯೂಬರ್ ಸಮೀರ್ ಎಂ.ಡಿ.ಯನ್ನು ಪೊಲೀಸರು ಭಾನುವಾರ ಮತ್ತು ಸೋಮವಾರ ವಿಚಾರಣೆ ನಡೆಸಿದ್ದರು. ಜೊತೆಗೆ ಆತನ ಯೂಟ್ಯೂಬ್ ಆದಾಯದ ಮೂಲ, ಹಣಕಾಸು ವ್ಯವಹಾರಗಳ ಮಾಹಿತಿ ಪಡೆದಿದ್ದರು.
ಪೊಲೀಸರ ಮತ್ತೊಂದು ತಂಡ ತಮ್ಮ ವಶದಲ್ಲಿರುವ ದೂರುದಾರ ಚಿನ್ನಯ್ಯ ವಿಚಾರಣೆ ನಡೆಸುತ್ತಿದೆ. ಈ ವಿಚಾರಣೆ ಭಾಗವಾಗಿಯೇ ಮಹೇಶ್ ಶೆಟ್ಟಿ ತಿಮರೋಡಿ ಪರಿಶೀಲನೆ ನಡೆಸಲಾಗುತ್ತಿದೆ.