Karkala: ನಾವೀನ್ಯತೆ, ದೀರ್ಘಕಾಲಿಕ ಸ್ನೇಹ ಮತ್ತು ಯಶಸ್ಸು ಗುರಿಯಾಗಿರಬೇಕು
Sunday, August 3, 2025
ಲೋಕಬಂಧು ನ್ಯೂಸ್, ಕಾರ್ಕಳ
ಸೃಜನಶೀಲತೆ, ದೀರ್ಘಕಾಲಿಕ ಬಾಂಧವ್ಯ ಮತ್ತು ಅರ್ಥಪೂರ್ಣ ಸಂಬಂಧಗಳನ್ನು ಜೀವನದಲ್ಲಿ ಸಂಪಾದಿಸಿ ತತ್ವ, ಸಿದ್ದಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮುಂದುವರಿಯಬೇಕು ಎಂದು 99 ಗೇಮ್ಸ್, ರೋಬೋಸಾಫ್ಟ್ ಸಂಸ್ಥೆಗಳ ಸ್ಥಾಪಕ ರೋಹಿತ್ ಭಟ್ ಅಭಿಪ್ರಾಯ ವ್ಯಕ್ತಪಡಿಸಿದರು.ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಶನಿವಾರ ನಡೆದ 2025ನೇ ಸಾಲಿನ ಬಿ.ಇ. ವಿದ್ಯಾರ್ಥಿಗಳ ಪದವಿ ಪ್ರದಾನ ಸಮಾರಂಭದ ಎರಡನೆಯ ಆವೃತ್ತಿಯ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.ಪದವಿ ಪಡೆದ ಆನಂತರ ಸ್ಟಾರ್ಟ್ ಅಪ್'ಗಳನ್ನು ಪ್ರಾರಂಭಿಸಿ ಸವಾಲುಗಳನ್ನು ಎದುರಿಸಲು ಅಗತ್ಯವಿರುವ ತಾಳ್ಮೆ, ನಿರಂತರತೆ ಮತ್ತು ಸ್ಥಿತಿಸ್ಥಾಪಕತ್ವವನ್ನು ಯುವ ಜನತೆ ಮೈಗೂಡಿಸಿಕೊಳ್ಳಬೇಕು.
ಜೀವನ ದೀರ್ಘಕಾಲಿಕ ಮ್ಯಾರಥಾನ್ ಆಗಿದ್ದು 100 ಮೀ. ಓಟವಲ್ಲ ಎಂಬುದನ್ನು ಅರ್ಥೈಸಿಕೊಳ್ಳಬೇಕು. ನಿರಂತರ ಪ್ರಯತ್ನ ಮತ್ತು ಉದ್ದೇಶಪೂರ್ವಕ ಜೀವನದಿಂದ ಪ್ರೇರಿತವಾದ ದೀರ್ಘಕಾಲೀನ ಗುರಿಗಳತ್ತ ಗಮನ ಹರಿಸುವಂತೆ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಮಾಜಿ ಪ್ರಾಂಶುಪಾಲ ಹಾಗೂ ಗವರ್ನಿಂಗ್ ಕೌನ್ಸಿಲ್ ಸದಸ್ಯ ಡಾ.ಎಸ್. ವೈ. ಕುಲಕರ್ಣಿ ಶುಭ ಹಾರೈಸಿದರು.
ಗೌರವ ಅತಿಥಿಯಾಗಿದ್ದ ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ತಾಂತ್ರಿಕ ಶಿಕ್ಷಣ ವಿಭಾಗದ ಉಪಾಧ್ಯಕ್ಷ ಡಾ.ಗೋಪಾಲ ಮುಗೆರಾಯ ಮಾತನಾಡಿ, ಆರ್ಟಿಫೀಶಿಯಲ್ ಇಂಟಲಿಜೆನ್ಸ್'ನಲ್ಲಿ ಪ್ರಾವೀಣ್ಯತೆ ಪಡೆದುಕೊಂಡರೆ ಮುಂದೆ ಉತ್ತಮ ಉದ್ಯೋಗಾವಕಾಶಗಳು ನಿಮ್ಮನ್ನರಸಿ ಬರಲಿವೆ. ವಿದ್ಯಾರ್ಥಿಗಳು ಸವಾಲುಗಳನ್ನು ಎದುರಿಸಿ ಕಷ್ಟಪಟ್ಟು ದುಡಿಯಬೇಕು. ನಿಮಗೆ ಉತ್ತಮ ಭವಿಷ್ಯವಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಹಾಗೂ ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ.ಎನ್. ವಿನಯ ಹೆಗ್ಡೆ, ಹೆತ್ತವರ ಮಾರ್ಗದರ್ಶನವೇ ಇಷ್ಟು ಸಂಸ್ಥೆಗಳನ್ನು ಹುಟ್ಟುಹಾಕಲು ಕಾರಣವಾಗಿದೆ.
ನಾವು ಎಂದಿಗೂ ನಮ್ಮ ಹಿರಿಯರ ತ್ಯಾಗ ಹಾಗೂ ಮಾರ್ಗದರ್ಶನಕ್ಕೆ ಚಿರೃಣಿಗಳಾಗಿರಬೇಕು. ಸಂಸ್ಥೆಗಳನ್ನು ಕಟ್ಟಿ ಬೆಳೆಸುವಲ್ಲಿ ನನಗೆ ಸಾಥ್ ನೀಡಿದ ಹಲವರನ್ನು ನಾನು ಇಂದಿಗೂ ನೆನೆಯುತ್ತೇನೆ. ಯುವ ಜನತೆ ಕಲಿತ ಸಂಸ್ಥೆ ಹಾಗೂ ವಿದ್ಯೆ ಕಲಿಸಿದ ಗುರುಗಳನ್ನು ಸದಾ ಸ್ಮರಿಸಬೇಕು ಎಂದರು.
ಶೈಕ್ಷಣಿಕ ಸಾಧನೆಗೈದ ವಿದ್ಯಾರ್ಥಿಗಳನ್ನು ಚಿನ್ನ ಮತ್ತು ಬೆಳ್ಳಿಯ ಪದಕ ನೀಡುವ ಮೂಲಕ ಗುರುತಿಸಲಾಯಿತು.
2025ನೇ ಸಾಲಿನಲ್ಲಿ ಬಿ.ಇ. ಪದವೀಧರರಾದ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು ಮೆಷಿನ್ ಲರ್ನಿಂಗ್, ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಶನ್ ಎಂಜಿನಿಯರಿಂಗ್, ಇನ್ಫಾರ್ಮೇಶನ್ ಸೈನ್ಸ್ ಮತ್ತು ಎಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳು ಹಾಗೂ ಬಿ.ಎಸ್ಸಿ (ಹಾನರ್ಸ್) ವಿದ್ಯಾರ್ಥಿಗಳ ಪದವಿ ಪ್ರದಾನ ನಡೆಸಲಾಯಿತು.
ವಿಟಿಯು ಸ್ಕೀಮ್ ಪರೀಕ್ಷಾ ನಿಯಂತ್ರಕ ಡಾ.ಶ್ರೀನಿವಾಸ ರಾವ್ ಬಿ.ಆರ್. ಪದವಿ ಪ್ರದಾನ ಸಮಾರಂಭದ ಮೆರವಣಿಗೆಗೆ ಚಾಲನೆ ನೀಡಿದರು.
ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಆಫ್ ಕ್ಯಾಂಪಸ್ ಸೆಂಟರ್' )ನ ಕ್ಯಾಂಪಸ್ ಮೈಂಟೆನೆನ್ಸ್ ಆ್ಯಂಡ್ ಡೆವಲಪ್‌ಮೆಂಟ್ ನಿರ್ದೇಶಕ ಯೋಗೀಶ್ ಹೆಗ್ಡೆ, ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಕರಿಕುಲಂ ಡೆವಲಪ್‌ಮೆಂಟ್ ವಿಭಾಗದ ನಿರ್ದೇಶಕ ಡಾ. ಕೆ.ರಾಜೇಶ್ ಶೆಟ್ಟಿ, ನಿಟ್ಟೆ ತಾಂತ್ರಿಕ ಕಾಲೇಜಿನ ಉಪ ಪ್ರಾಂಶುಪಾಲ ಡಾ. ನಾಗೇಶ್ ಪ್ರಭು, ಆಫ್ ಕ್ಯಾಂಪಸ್ ಉಪ ಕುಲಸಚಿವೆ ಡಾ.ರೇಖಾ ಭಂಡಾರ್ಕರ್, ನಿಟ್ಟೆ ತಾಂತ್ರಿಕ ಕಾಲೇಜಿನ ಇಂಡಸ್ಟ್ರೀ ಇನ್ಸ್ಟಿಟ್ಯೂಟ್ ಇಂಟರ್ಯಾಕ್ಷನ್ ನಿರ್ದೇಶಕ ಡಾ.ಪರಮೇಶ್ವರನ್, ರೆಸಿಡೆಂಟ್ ಇಂಜಿನಿಯರ್ ಡಾ.ಶ್ರೀನಾಥ್ ಶೆಟ್ಟಿ, ವಿವಿಧ ವಿಭಾಗಗಳ ಮುಖ್ಯಸ್ಥರು ಮತ್ತು ವ್ಯವಸ್ಥಾಪಕರು ವೇದಿಕೆಯಲ್ಲಿದ್ದರು.
ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ನಿರಂಜನ್ ಎನ್. ಚಿಪ್ಳೂಣ್ಕರ್ ಸ್ವಾಗತಿಸಿದರು. ಡೀನ್ ಎಕಾಡೆಮಿಕ್ಸ್ ಡಾ.ಐ.ಆರ್ ಮಿತ್ತಂತಾಯ ಚಿನ್ನ ಹಾಗೂ ಬೆಳ್ಳಿಯ ಪದಕ ಗಳಿಸಿದ ವಿದ್ಯಾರ್ಥಿಗಳ ಹೆಸರು ವಾಚಿಸಿದರು. ಡೀನ್ (ಸ್ಟೂಡೆಂಟ್ ವೆಲ್ಫೇರ್) ಡಾ.ನರಸಿಂಹ ಬೈಲ್ಕೇರಿ ಕಾರ್ಯಕ್ರಮ ಸಂಯೋಜಿಸಿದರು. ಸಹಾಯಕ ಪರೀಕ್ಷಾ ನಿಯಂತ್ರಕ ಡಾ. ವೆಂಕಟೇಶ್ ಕಾಮತ್ ವಂದಿಸಿದರು.
ವಿದ್ಯಾರ್ಥಿನಿಯರಾದ ಶ್ರದ್ಧಾ ಶೇಟ್ ಹಾಗೂ ಸ್ನಿಗ್ದಾ ಶೆಟ್ಟಿ ಪ್ರಾರ್ಥಿಸಿದರು. ಇಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯೂನಿಕೇಶನ್ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಅನುಷಾ ಆರ್. ಶರತ್ ಕಾರ್ಯಕ್ರಮ ನಿರೂಪಿಸಿದರು.