Kollur: ಬೆಂಗಳೂರು ಮೂಲದ ವಿವಾಹಿತೆ ನಾಪತ್ತೆ
Saturday, August 30, 2025
ಲೋಕಬಂಧು ನ್ಯೂಸ್, ಕೊಲ್ಲೂರು
ಬೆಂಗಳೂರು ಮೂಲದ ವಿವಾಹಿತೆಯೋರ್ವರು ಕಳೆದ 2 ದಿನಗಳ ಹಿಂದೆ ಕೊಲ್ಲೂರಿಗೆ ಆಗಮಿಸಿದ್ದು, ಏಕಾಏಕಿ ನಾಪತ್ತೆಯಾಗಿದ್ದಾರೆ. ಆಕೆಯ ನಿಗೂಢ ಕಣ್ಮರೆ ವಿವಿಧ ಊಹಾಪೋಹಗಳಿಗೆ ಹೇತುವಾಗಿದೆ.
ಬೆಂಗಳೂರು ತ್ಯಾಗರಾಜ ನಗರ ನಿವಾಸಿ ಸಿ. ಆರ್. ಗೋವಿಂದರಾಜು ಪುತ್ರಿ ವಸುಧಾ ಚಕ್ರವರ್ತಿ (46) ಆ. 28ರಂದು ಕೊಲ್ಲೂರಿಗೆ ಆಗಮಿಸಿದ್ದು, ಖಾಸಗಿ ವಸತಿಗೃಹದ ಬಳಿ ಕಾರು ನಿಲ್ಲಿಸಿ ದೇವಾಲಯಕ್ಕೆ ತೆರಳಿ ಆಂಜನೇಯ ಗರ್ಭಗುಡಿಯಲ್ಲಿ ಕೆಲ ಕಾಲ ಕಳೆದು ವಿವಿಧೆಡೆಗೆ ಸಾಗಿ ಸೌಪರ್ಣಿಕಾ ನದಿಯತ್ತ ತೆರಳಿ ನಾಪತ್ತೆಯಾಗಿದ್ದರು.
ಪೊಲೀಸರು ಹಾಗೂ ಗ್ರಾಮಸ್ಥರು ಸೌಪರ್ಣಿಕಾ ನದಿ ಸಹಿತ ವಿವಿಧೆಡೆ ಹುಡುಕಾಟ ನಡೆಸಿದರೂ ಆಕೆಯ ಪತ್ತೆಯಾಗಿಲ್ಲ.
ಕಾರಿನಲ್ಲಿ ಮೊಬೈಲ್ ಇನ್ನಿತರ ವಸ್ತುಗಳು ಕಂಡುಬಂದ ಹಿನ್ನೆಲೆಯಲ್ಲಿ ಮೊಬೈಲ್ ಮೂಲಕ ಸಂಪರ್ಕಿಸಿದಾಗ ಆಕೆಯ ವಿಳಾಸ ಪತ್ತೆಯಾಯಿತು. ಈ ಬಗ್ಗೆ ಸಂಬಂಧಪಟ್ಟವರನ್ನು ಸಂಪರ್ಕಿಸಿ ಮಾಹಿತಿ ನೀಡಲಾಗಿದೆ.
ಸೌಪರ್ಣಿಕಾ ನದಿಯಲ್ಲಿ ಆಕೆ ಈಜುತ್ತಿರುವುದು ನದಿ ಬಳಿ ಅಳವಡಿಸಲಾದ ಸಿ.ಸಿ. ಕೆಮರಾದಲ್ಲಿ ಸೆರೆಯಾಗಿದೆ. ಉತ್ತಮ ಈಜುಗಾರ್ತಿಯಾಗಿರುವ ವಸುಧಾ, ಬಹುದೂರ ಈಜಿ ದಡ ಸೇರಿದರೇ ಅಥವಾ ಉಕ್ಕಿ ಹರಿಯುತ್ತಿರುವ ಸೌಪರ್ಣಿಕಾ ನದಿಯಲ್ಲಿ ಕೊಚ್ಚಿಹೋದರೇ ಎನ್ನವುದು ಪ್ರಶ್ನಾರ್ಥಕವಾಗಿದೆ.