-->
Udupi: ಕೃಷಿ ಭೂಮಿ 11ಇ  ನಕ್ಷೆ ವಿಂಗಡನೆಗೆ ಅವಕಾಶ ನೀಡುವಂತೆ ಮನವಿ

Udupi: ಕೃಷಿ ಭೂಮಿ 11ಇ ನಕ್ಷೆ ವಿಂಗಡನೆಗೆ ಅವಕಾಶ ನೀಡುವಂತೆ ಮನವಿ

ಲೋಕಬಂಧು ನ್ಯೂಸ್, ಉಡುಪಿ
ಕೃಷಿ ಭೂಮಿಯನ್ನು 11ಇ ನಕ್ಷೆ ಮೂಲಕ ವಿಂಗಡನೆಗೆ ಅವಕಾಶ, ಮಳೆ ಹಾನಿ ಪರಿಹಾರ ಹಾಗೂ ವಸತಿ ಯೋಜನೆಯಡಿ ಮಂಜೂರಾದ ಬಾಕಿ ಅನುದಾನ ಬಿಡುಗಡೆ ಬಗ್ಗೆ ಉಡುಪಿ ಜಿಲ್ಲೆಗೆ ಭೇಟಿ ನೀಡಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ  ಅವರಿಗೆ ಉಡುಪಿ ಶಾಸಕ ಯಶಪಾಲ್ ಸುವರ್ಣ ಮನವಿ ಮಾಡಿದ್ದಾರೆ.
ಉಡುಪಿ ಜಿಲ್ಲೆ ಭೌಗೋಳಿಕವಾಗಿ ಇತರ ಜಿಲ್ಲೆಗಳಿಗಿಂತ ಭಿನ್ನವಾಗಿ ಸಣ್ಣ ಹಾಗೂ ಅತಿ ಸಣ್ಣ ಹಿಡುವಳಿದಾರರಿಂದ ಕೂಡಿದ ಭೂ ಪ್ರದೇಶವಾಗಿದೆ. ಹಿಂದಿನಿಂದಲೂ ಕಂದಾಯ ನಿಯಮ ರೂಪಿಸುವಾಗ ಉಡುಪಿ ಜಿಲ್ಲೆಯೂ ಸೇರಿದಂತೆ ಅವಿಭಜಿತ ದ.ಕ ಜಿಲ್ಲೆಗೆ ರಿಯಾಯಿತಿ ನೀಡಿ ಬರಲಾಗುತ್ತಿದೆ.


ಪ್ರಸ್ತುತ ಸರಕಾರದ ಆದೇಶದಂತೆ ಮನೆ ನಿರ್ಮಾಣಕ್ಕೆ ಭೂ ಪರಿವರ್ತನೆ ಪೂರ್ವದಲ್ಲಿ ಕೃಷಿ ಭೂಮಿಯನ್ನು ವಿಂಗಡಿಸಲು ಕನಿಷ್ಠ 50 ಸೆಂಟ್ಸ್ ಮಿತಿ ನಿಗದಿಪಡಿಸಲಾಗಿದೆ. ಜಿಲ್ಲೆಯಲ್ಲಿ 50 ಸೆಂಟ್ಸ್'ಗಿಂತ ಕಡಿಮೆ ಜಾಗ ಹೊಂದಿರುವ ಅನೇಕ ಮಂದಿ ರೈತರಿದ್ದು, ಹಲವು ಕಾರಣಗಳಿಗಾಗಿ 11ಇ ನಕ್ಷೆ ಆಧಾರದಲ್ಲಿ ಜಾಗ ವಿಂಗಡನೆ ಅನಿವಾರ್ಯವಾಗಿರುತ್ತದೆ.


ಉದಾಹರಣೆಗೆ ಕೃಷಿ ಭೂಮಿ ಹೊಂದಿರುವ ಕುಟುಂಬಗಳು ವಿವಿಧ ಉದ್ದೇಶಗಳಾದ ಕುಟುಂಬ ಸದಸ್ಯರ ಮದುವೆ, ಮನೆ ನಿರ್ಮಾಣಕ್ಕೆ ಹಣಕಾಸು, ವೈದ್ಯಕೀಯ ವೆಚ್ಚ, ಮತ್ತಿತರ ಅನಿವಾರ್ಯ ಕಾರಣಗಳಿಗಾಗಿ ಅಗತ್ಯ ಕನಿಷ್ಠ ಜಾಗ ಮಾರಾಟ ಮಾಡುವ ಪ್ರಕ್ರಿಯೆ ಜಿಲ್ಲೆಯಲ್ಲಿ ಚಾಲ್ತಿಯಲ್ಲಿದೆ.


ನಗರ ವ್ಯಾಪ್ತಿಯೂ ಸೇರಿದಂತೆ ಗ್ರಾಮೀಣ ಭಾಗದ ಪ್ರತೀ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನೂರಾರು ಕುಟುಂಬಗಳು ನಿವೇಶನಕ್ಕಾಗಿ ಗ್ರಾಮ ಪಂಚಾಯತ್'ಗೆ ಅರ್ಜಿ ಸಲ್ಲಿಸಿದ್ದು, ಸರಕಾರಿ ಜಾಗದ ಲಭ್ಯತೆ ಇಲ್ಲದೆ ಹಲವಾರು ವರ್ಷಗಳಿಂದ ಸ್ವಂತ ನಿವೇಶನದ ನಿರೀಕ್ಷೆಯಲ್ಲಿದ್ದಾರೆ. 


ಈ ಆದೇಶದಿಂದ ಕಡಿಮೆ ದರದಲ್ಲಿ ಸಣ್ಣ ಜಾಗ ಖರೀದಿಸಿ ಮನೆ ನಿರ್ಮಿಸುವ ಉದ್ದೇಶ ಈಡೇರುವುದಿಲ್ಲ. ಸಣ್ಣ ನಿವೇಶನಗಳ ದರ ದುಪ್ಪಟ್ಟಾಗುವುದರೊಂದಿಗೆ ನಿರ್ಮಾಣ ಸಂಬಂಧಿ ಕಟ್ಟಡ ಕಾರ್ಮಿಕರಿಗೆ, ಕಟ್ಟಡ ಸಾಮಾಗ್ರಿ ಪೂರೈಕೆದಾರರಿಗೆ ತೊಂದರೆಯಾಗುವುದರೊಂದಿಗೆ ಪೂರಕ ವಾಣಿಜ್ಯ ಚಟುವಟಿಕೆಗಳಿಗೆ ತೀವ್ರ ಹೊಡೆತ ಬೀಳಲಿದೆ.

ಆದ್ಧರಿಂದ ಉಡುಪಿ ಜಿಲ್ಲೆಗೆ ಮಾತ್ರ ಅನ್ವಯಿಸಿ ಆದೇಶಿಸಲಾಗಿರುವ ಈ ನಿಯಮವನ್ನು ಹಿಂಪಡೆದು ಹಿಂದಿನಂತೆ 50 ಸೆಂಟ್ಸ್ ಮಿತಿಗೆ ಬದಲಾಗಿ 7.5 ಸೆಂಟ್ಸ್ ಮಿತಿಗೆ ಮರು ಆದೇಶ ಹೊರಡಿಸುವಂತೆ ಸಚಿವರಿಗೆ ಶಾಸಕ ಯಶಪಾಲ್ ಮನವಿ ಮಾಡಿದ್ದಾರೆ.


ಉಡುಪಿ ತಾಲೂಕಿನಲ್ಲಿ ನೆರೆ ಸಂತ್ರಸ್ತರ ಪುನರ್ವಸತಿ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ರಾಜೀವ ಗಾಂಧಿ ವಸತಿ ನಿಗಮದಿಂದ ಅನುದಾನ ಮಂಜೂರಾಗಿ ವರ್ಷಗಳೇ ಕಳೆದರೂ ಈವರೆಗೆ ಮಂಜೂರಾದ ಸಂಪೂರ್ಣ ಅನುದಾನ ಬಿಡುಗಡೆಯಾಗಿಲ್ಲ. ಅದರಿಂದ ಮನೆ ನಿರ್ಮಾಣ ಪೂರ್ಣಗೊಳಿಸಲಾಗದೆ  ಅನನುಕೂಲವಾಗಿದೆ. ಆದ್ದರಿಂದ ಉಡುಪಿ ತಾಲೂಕಿನ ನೆರೆ ಸಂತ್ರಸ್ಥರ ಪುನರ್ವಸತಿ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ರಾಜೀವ ಗಾಂಧಿ ವಸತಿ ನಿಗಮದಿಂದ ಮಂಜೂರಾಗಿರುವ ಅನುದಾನವನ್ನು ತುರ್ತಾಗಿ ಬಿಡುಗಡೆಗೊಳಿಸಲು ಕ್ರಮ ವಹಿಸಬೇಕು.


ನಿರಂತರ ಮಳೆಯಿಂದಾಗಿ ಜಿಲ್ಲೆಯ ಹಲವು ಪ್ರದೇಶಗಳು ಜಲಾವೃತವಾಗಿದ್ದು ರಕ್ಷಣಾ ಕಾರ್ಯ, ಪುನರ್ವಸತಿ ಕೆಲಸ ಇತ್ಯಾದಿ ಚುರುಕಾಗಿ ನಡೆಯುತ್ತಿದೆ. ಸಮುದ್ರ ತೀರದಲ್ಲಿ ಕಡಲು ಕೊರೆತದ ಸಮಸ್ಯೆ ಹಲವೆಡೆ ಕಾಣಿಸಿಕೊಂಡಿದೆ. ಸುಂಟರಗಾಳಿ ಮತ್ತು ವಿಪರೀತ ಮಳೆಯಿಂದಾಗಿ ನೂರಾರು ಮರಗಳು ಬಿದ್ದು, ವಿದ್ಯುತ್ ಕಂಬಗಳಿಗೆ, ಮನೆಗಳಿಗೆ ಹಾನಿಯಾಗಿದ್ದು, ರಸ್ತೆ, ಮೋರಿ, ಶಾಲಾ ಕಟ್ಟಡಗಳು, ಕಾಲುಸಂಕಗಳು ಹಾಗೂ ಸೇತುವೆಗಳು ಅಪಾಯದಲ್ಲಿವೆ.


ಪ್ರಾಕೃತಿಕ ವಿಕೋಪದಡಿ ಅನುದಾನ ಬಿಡುಗಡೆಯಾಗದೆ, ಗ್ರಾಮೀಣ ರಸ್ತೆಗಳ ನಿರ್ವಹಣೆಯಿಲ್ಲದೆ ಸಂಚಾರ ದುಸ್ತರವಾಗಿದೆ. ಆದ್ದರಿಂದ, ಸಂತ್ರಸ್ತರಿಗೆ ಪರಿಹಾರ ಮತ್ತು ಸಾರ್ವಜನಿಕ ಆಸ್ತಿಪಾಸ್ತಿ ರಕ್ಷಣೆ ಹಾಗೂ ದುರಸ್ತಿಗೆ ಸಾಕಷ್ಟು ಅನುದಾನದ ಅಗತ್ಯವಿದ್ದು, ಈ ಬಗ್ಗೆ ವಿಶೇಷ ಅನುದಾನವನ್ನು ಪ್ರಾಕೃತಿಕ ವಿಕೋಪದಡಿ ಉಡುಪಿ ಜಿಲ್ಲೆಗೆ ಸರಕಾರದಿಂದ ಮಂಜೂರು ಮಾಡುವಂತೆ ಸಚಿವರಿಗೆ ಮನವಿಯಲ್ಲಿ ಆಗ್ರಹಿಸಿದ್ದಾರೆ.

Ads on article

Advertise in articles 1

advertising articles 2

Advertise under the article