Udupi: ರಾತ್ರಿ 11 ಗಂಟೆ ವರೆಗೂ ಅಂಗಡಿ, ಹೋಟೆಲ್ ತೆರೆದಿರಲಿ
Friday, August 29, 2025
ಲೋಕಬಂಧು ನ್ಯೂಸ್, ಉಡುಪಿ
ಆರ್ಥಿಕತೆ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ಉಡುಪಿ ಹಾಗೂ ಮಣಿಪಾಲಗಳಲ್ಲಿ ಹೊಟೇಲ್, ಅಂಗಡಿಗಳು ರಾತ್ರಿ 11 ಗಂಟೆಯ ವರೆಗೆ ತೆರೆದಿಡಲು ಅವಕಾಶ ಕಲ್ಪಿಸುವ ಕುರಿತು ಶುಕ್ರವಾರ ನಡೆದ ಉಡುಪಿ ನಗರಸಭೆಯ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.ನಗರಸಭಾಧ್ಯಕ್ಷ ಪ್ರಭಾಕರ ಪೂಜಾರಿ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಶಾಸಕ ಯಶ್‌ಪಾಲ್ ಸುವರ್ಣ, ಕಾನೂನು ಸುವ್ಯವಸ್ಥೆ ನೆಪವೊಡ್ಡಿ ಪ್ರಸ್ತುತ ಉಡುಪಿ, ಮಣಿಪಾಲದಲ್ಲಿ ರಾತ್ರಿ 10 ಗಂಟೆಗೇ ಅಂಗಡಿ, ಹೊಟೇಲ್‌ಗಳನ್ನು ಬಂದ್ ಮಾಡಲಾಗುತ್ತಿದೆ. ಅದರಿಂದ ಜಿಲ್ಲೆಯ ಆರ್ಥಿಕತೆಗೆ ಪೆಟ್ಟು ಬೀಳುತ್ತಿದೆ. ಅದೇ ರೀತಿ ಪ್ರವಾಸಿಗರು, ರೋಗಿಗಳ ಸಂಬಂಧಿಕರು, ವಿದಾರ್ಥಿಗಳಿಗೆ ರಾತ್ರಿ ಊಟ ಹಾಗೂ ವಸ್ತುಗಳನ್ನು ಕೊಂಡುಕೊಳ್ಳಲು ತುಂಬಾ ತೊಂದರೆ ಆಗುತ್ತಿದೆ.
ಆದ್ದರಿಂದ ಜಿಲ್ಲೆಯ ಆರ್ಥಿಕ ಹಿತದೃಷ್ಟಿ ಹಾಗೂ ಜನಸಾಮಾನ್ಯರಿಗೆ ಅನುಕೂಲವಾಗುವ ರೀತಿಯಲ್ಲಿ ಉಡುಪಿ ಹಾಗೂ ಮಣಿಪಾಲದಲ್ಲಿ ರಾತ್ರಿ 11 ಗಂಟೆಯ ವರೆಗೆ ಅಂಗಡಿ, ಹೊಟೇಲ್‌ಗಳನ್ನು ತೆರೆದಿಡುವಂತೆ ನಿರ್ಣಯ ಮಾಡಬೇಕು ಮತ್ತು ಅದನ್ನು ಜಿಲ್ಲಾಧಿಕಾರಿಗೆ ಸಲ್ಲಿಸಬೇಕು ಎಂದು ಶಾಸಕರು ಸಭೆಗೆ ತಿಳಿಸಿದರು.
ಅದಕ್ಕೆ ಎಲ್ಲ ಸದಸ್ಯರು ಒಪ್ಪಿಗೆ ಸೂಚಿಸಿದರು.