
Udupi: ಸತತ 170 ಗಂಟೆ ನೃತ್ಯ ದಾಖಲೆ ಮುರಿದ ದೀಕ್ಷಾ
Thursday, August 28, 2025
ಲೋಕಬಂಧು ನ್ಯೂಸ್, ಉಡುಪಿ
ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಪುಟ ಸೇರಲು 216 ಗಂಟೆಗಳ ಭರತನಾಟ್ಯ ಪ್ರದರ್ಶನದ ಗುರಿ ಹೊಂದಿದ ಬ್ರಹ್ಮಾವರ ಕರ್ಜೆಯ ವಿದುಷಿ ದೀಕ್ಷಾ ಗುರುವಾರ ಮಂಗಳೂರಿನ ರೆಮೋನಾ ದಾಖಲೆಯನ್ನು ಮುರಿದಿದ್ದಾರೆ.
ಈ ಹಿಂದಿದ್ದ 127 ಗಂಟೆಗಳ ವರ್ಲ್ಡ್ ರೆಕಾರ್ಡನ್ನು ರೆಮೋನಾ ಮುರಿದು 170 ಗಂಟೆಗಳ ದಾಖಲೆ ಮಾಡಿದ್ದರು. ಗುರುವಾರ ದೀಕ್ಷಾ 170 ಗಂಟೆಗಳ ದಾಖಲೆಯನ್ನೂ ಮುರಿದು ಹೊಸ ದಾಖಲೆ ಸೃಷ್ಟಿಗಾಗಿ ಆ.30ರ ಮಧ್ಯಾಹ್ನ 3.30ರ ತನಕ ನೃತ್ಯ ಮಾಡಲಿದ್ದಾರೆ.
ಪುಷ್ಪವೃಷ್ಟಿ ಮೂಲಕ ಅಭಿನಂದನೆ
ದೀಕ್ಷಾ ಅವರಿಗೆ ಅಜ್ಜರಕಾಡು ಡಾ.ಜಿ.ಶಂಕರ್ ಮಹಿಳಾ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸ್ನಾತಕೋತ್ತರ ಕೇಂದ್ರದ ಸಭಾಂಗಣದಲ್ಲಿ ಪುಷ್ಪವೃಷ್ಟಿ ಮೂಲಕ ಹೃದಯ ಸ್ಪರ್ಶಿ ಅಭಿನಂದನೆ ಸಲ್ಲಿಸಲಾಯಿತು.
ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಏಷ್ಯಾ ಹೆಡ್ ಮನೀಶ್ ಬಿಷ್ಟೋಮ್ ಅವರು ರೆಮೋನಾ ದಾಖಲೆಯನ್ನು ದೀಕ್ಷಾ ಮುರಿದಿರುವುದಾಗಿ ಘೋಷಿಸಿದರು.
ವಿದುಷಿ ದೀಕ್ಷಾ ಆ.21ರಂದು ಪ್ರತೀ ಮೂರು ಗಂಟೆಗೆ 15 ನಿಮಿಷಗಳ ವಿರಾಮ ನಿಯಮಕ್ಕನುಗುಣವಾಗಿ ಭರತನಾಟ್ಯ ಪ್ರದರ್ಶನ ಆರಂಭಿಸಿದ್ದರು. ಬ್ರಹ್ಮಾವರ ತಾಲೂಕು ಮುಂಡ್ಕಿನಜೆಡ್ಡಿನ ದೀಕ್ಷಾ ಇನ್ನೆರಡು ದಿನಗಳ ಕಾಲ ಭರತನಾಟ್ಯ ಮಾಡುವ ಉತ್ಸಾಹ, ಹುಮ್ಮಸ್ಸು ಹೊಂದಿದ್ದಾರೆ. ನೃತ್ಯ ಮಾಡುತ್ತಾ ಒಂಬತ್ತು ದಿನಗಳು ಸಂದರೂ ದೀಕ್ಷಾ ಮೊಗದಲ್ಲಿ ದಣಿವಿನ ಬದಲು ಗುರಿಯತ್ತ ಲಕ್ಷ್ಯವಿತ್ತು.
ಕೃಷ್ಣಮಠದ ಪ್ರಸಾದ
ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಶುಭ ಹಾರೈಸಿ ಕೃಷ್ಣ ಪ್ರಸಾದ ನೀಡಿದ್ದು, ಮಠದ ದಿವಾನ ನಾಗರಾಜ ಆಚಾರ್ಯ ಹಾಗೂ ಕಾರ್ಯದರ್ಶಿ ಪ್ರಸನ್ನಾಚಾರ್ಯ ಶ್ರೀಕೃಷ್ಣ ಪ್ರಸಾದ ನೀಡಿ ಅಭಿನಂದಿಸಿದರು.
ನಾಡೋಜ ಡಾ.ಜಿ.ಶಂಕರ್, ಮಾಜಿ ಶಾಸಕ ಕೆ.ರಘುಪತಿ ಭಟ್, ಮಹೇಶ್ ಠಾಕೂರ್, ಗೀತಾಂಜಲಿ ಸುವರ್ಣ, ತಂದೆ ವಿಠಲ ಪೂಜಾರಿ, ತಾಯಿ ಶುಭಾ, ಪತಿ ರಾಹುಲ್, ವಿದುಷಿ ಉಷಾ ಹೆಬ್ಬಾರ್ ಇದ್ದರು.