.jpg)
Udupi: ದ್ವೈತ ಸಿದ್ಧಾಂತ ನೆಲೆಗಟ್ಟಿನಲ್ಲಿ ಜಗತ್ತಿನ ವ್ಯವಹಾರ
Saturday, August 30, 2025
ಲೋಕಬಂಧು ನ್ಯೂಸ್, ಉಡುಪಿ
ಆಚಾರ್ಯತ್ರಯರಲ್ಲಿ ಒಬ್ಬರಾದ ಆಚಾರ್ಯ ಮಧ್ವರು ಪ್ರತಿಪಾದಿಸಿದ ದ್ವೈತ ಸಿದ್ಧಾಂತ ವಾಸ್ತವ ಮತ್ತು ಪ್ರಾಯೋಗಿಕವಾಗಿದ್ದು ಜಗತ್ತಿನ ವ್ಯವಸ್ಥೆಗೆ ಪೂರಕ. ಒಂದರಂತೆ ಮತ್ತೊಂದಿಲ್ಲ ಎಂಬ ಆಚಾರ್ಯ ಮಧ್ವರ ಸಂದೇಶದ ತಳಹದಿಯಲ್ಲಿ ಜಗತ್ತಿನ ವ್ಯವಹಾರ ನಿಂತಿದೆ ಎಂದು ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಅಭಿಪ್ರಾಯ ವ್ಯಕ್ತಪಡಿಸಿದರು.
ಶ್ರೀಪಾದರ 64ನೇ ವರ್ಧಂತಿ ಮಹೋತ್ಸವ ಸಂದರ್ಭದಲ್ಲಿ ಶನಿವಾರ ಪರ್ಯಾಯ ಪುತ್ತಿಗೆ ಶ್ರೀಕೃಷ್ಣಮಠ ಆಶ್ರಯದಲ್ಲಿ ಮಣಿಪಾಲ ಮಾಹೆ ಸಹಯೋಗದೊಂದಿಗೆ ಭಾರತೀಯ ಅಂಚೆ ಇಲಾಖೆ ಹೊರತಂದ ಆಚಾರ್ಯ ಮಧ್ವರ ಅಂಚೆಚೀಟಿ ಬಿಡುಗಡೆ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಮಧ್ವರ ತತ್ವಗಳಿಗೆ ಮನ್ನಣೆ
ಆಚಾರ್ಯ ಮಧ್ವರ ಭಕ್ತಿಗೆ ಮೆಚ್ಚಿ ದ್ವಾರಕೆಯಿಂದ ಉಡುಪಿಗೆ ನೆಲೆನಿಂತ ಶ್ರೀಕೃಷ್ಣನ ಭಕ್ತಿ ಸಿದ್ಧಾಂತ ಪ್ರಚಾರಕರಾದ ಲೋಕಗುರು ಮಧ್ವಾಚಾರ್ಯರ ಅಂಚೆಚೀಟಿ ಹೊರತರುವ ಮೂಲಕ ಸರ್ಕಾರ, ಆಚಾರ್ಯರು ಮತ್ತವರ ತತ್ವಗಳಿಗೆ ಮನ್ನಣೆ ನೀಡಿದೆ ಎಂದರು.
ಹರಿ- ಗುರು ಸೇವೆ
ಹುಟ್ಟುಹಬ್ಬ ಸಂತೋಷದ ಆಚರಣೆಗೆ ಸೀಮಿತವಾಗಿರದೇ ಗುರು ಹಿರಿಯರಿಗೆ ಗೌರವ ಸಮರ್ಪಿಸುವ ಪ್ರತ್ಯರ್ಪಣೆಯ ಸುಸಂದರ್ಭ. ಈ ನಿಟ್ಟಿನಲ್ಲಿ ಗೀತೆಯ ಮೂಲಕ ಜಗತ್ತಿಗೆ ಜ್ಞಾನದ ಬೆಳಕು ನೀಡಿದ ಶ್ರೀಕೃಷ್ಣನಿಗೆ ವಿಶ್ವರೂಪ ದರ್ಶನದ ಚಿನ್ನದ ಕವಚ ಸಮರ್ಪಿಸಿದ್ದು, ಆ ಮೂಲಕ ತಮ್ಮ ಜನ್ಮನಕ್ಷತ್ರವನ್ನು ಹರಿ- ಗುರುಗಳ ಸೇವೆಯ ಮೂಲಕ ಆಚರಿಸುತ್ತಿರುವುದಾಗಿ ಶ್ರೀಪಾದರು ತಿಳಿಸಿದರು.
ವಿಶ್ವಗೀತೆಯಾಗಲಿ
ಅಂಚೆಚೀಟಿ ಬಿಡುಗಡೆಗೊಳಿಸಿದ ಅದಮಾರು ಮಠದ ಹಿರಿಯ ಯತಿ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು, ಮಧ್ವಾಚಾರ್ಯರ ಅಂಚೆಚೀಟಿ ಹೊರತಂದಿರುವ ಅಂಚೆ ಇಲಾಖೆ ಕಾರ್ಯ ಶ್ಲಾಘನೀಯ ಎಂದರು. ವಿದೇಶಗಳಲ್ಲಿ ಕೃಷ್ಣತತ್ವ ಪ್ರಸಾರದ ಮೂಲಕ ಖ್ಯಾತರಾದ ಪುತ್ತಿಗೆ ಶ್ರೀಗಳು ಭಗವದ್ಗೀತೆಗೆ ವಿಶ್ವಮಾನ್ಯತೆ ತಂದಿದ್ದಾರೆ. ಭಗವದ್ಗೀತೆ ವಿಶ್ವಗೀತೆಯಾಗಲಿ ಎಂದು ಆಶಿಸಿದರು.
ಪುತ್ತಿಗೆ ಕಿರಿಯ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಆಶೀರ್ವಚನ ನೀಡಿದರು.
ಪ್ರಾರ್ಥನೆ ವಿಫಲವಾಗದು
ಅಭ್ಯಾಗತರಾಗಿದ್ದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಧರ್ಮಗಳು ಹಲವಿದ್ದರೂ ಅವುಗಳ ಸಾರ ಒಂದೇ. ವಿವಿಧ ಹೆಸರುಗಳಿಂದ ಕರೆಯಲ್ಪಡುವ ದೇವರು ಒಬ್ಬನೇ. ಮಾನವ ಕಲ್ಯಾಣಕ್ಕೆ ಎಲ್ಲವೂ ಪೂರಕ. ಹೋರಾಟಮಯ ಬದುಕಿನಲ್ಲಿ ಕೆಲವೊಮ್ಮೆ ಪ್ರಯತ್ನ ವಿಫಲವಾದರೂ ಪ್ರಾರ್ಥನೆ ಎಂದಿಗೂ ವಿಫಲವಾಗದು ಎಂದರು.
ಶ್ರೀಕೃಷ್ಣನನ್ನು ಮಾರ್ಗದರ್ಶಕನಾಗಿ, ಶಿಕ್ಷಕನಾಗಿ, ದಾರ್ಶನಿಕನಾಗಿ, ಪ್ರೇಮಿಯಾಗಿ, ರಾಜಕಾರಣಿಯಾಗಿ ಕಾಣುತ್ತಿದ್ದರೂ ಆತನ ತಂತ್ರಗಾರಿಕೆಯನ್ನೂ ತಳ್ಳಿಹಾಕಲಾಗದು, ಅದೂ ಮುಖ್ಯ.
ಭಾರತೀಯ ಸಂಸ್ಕೃತಿಯೇ ವಿಸ್ಮಯವಾಗಿದ್ದು, ಬಿದಿರು ಕೃಷ್ಣನ ಕೊಳಲಾಗಿ ನಾದ ಮೂಡಿಸುತ್ತದೆ, ಚರ್ಮ ತಮಟೆಯಾಗುತ್ತದೆ ಎಂದರು.
ಕೃಷ್ಣಸಾನ್ನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ನನ್ನ ಸೌಭಾಗ್ಯ ಎಂದರು.
ಮಣಿಪಾಲ ಮಾಹೆ ಸಹಕುಲಾಧಿಪತಿ ಡಾ.ಎಚ್.ಎಸ್. ಬಲ್ಲಾಳ್, ಕರ್ನಾಟಕ ವೃತ್ತ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಕೆ.ಪ್ರಕಾಶ್, ಆಫ್ರಿಕನ್ ವಿ.ವಿ. ಉಪಕುಲಪತಿ ಡಾ.ಕೆ.ರವಿ ಆಚಾರ್ಯ, ಬೆಂಗಳೂರು ತಥಾಗತ್ ಹಾರ್ಟ್ ಆಸ್ಪತ್ರೆಯ ಡಾ.ಮಹಾಂತೇಶ ಚರಂತಿಮಠ, ಶತಾವಧಾನಿ ಡಾ.ರಾಮನಾಥ ಆಚಾರ್ಯ, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಯಶಪಾಲ್ ಸುವರ್ಣ ಮತ್ತು ಗುರ್ಮೆ ಸುರೇಶ ಶೆಟ್ಟಿ, ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅಭ್ಯಾಗತರಾಗಿದ್ದರು.
ನವದೆಹಲಿ ಕೇಂದ್ರೀಯ ಸಂಸ್ಕೃತ ವಿ.ವಿ. ಕುಲಪತಿ ಡಾ.ಶ್ರೀನಿವಾಸ ವರಖೇಡಿ ಶುಭಾಶಂಸನೆಗೈದರು.
ಬೆಳಗಾವಿ ವಿದ್ವಾನ್ ಗುರುರಾಜಾಚಾರ್ ಜೋಶಿ ಅವರನ್ನು ಗೌರವಿಸಲಾಯಿತು.
ಪರ್ಯಾಯ ಪುತ್ತಿಗೆ ಮಠದ ದಿವಾನ ನಾಗರಾಜ ಆಚಾರ್ಯ ಹಾಗೂ ಕಾರ್ಯದರ್ಶಿ ಪ್ರಸನ್ನಾಚಾರ್ಯ ಇದ್ದರು.
ಮಣಿಪಾಲ ವಿ.ವಿ. ಉಪಕುಲಪತಿ ಡಾ.ಶರತ್ ಕೆ. ರಾವ್ ಸ್ವಾಗತಿಸಿದರು. ಡಾ.ಜಗದೀಶಕುಮಾರ್ ಸನ್ಮಾನಪತ್ರ ವಾಚಿಸಿದರು. ಡಾ.ಗೋಪಾಲಾಚಾರ್ ಮತ್ತು ಪೂರ್ಣಿಮಾ ಜನಾರ್ದನ ಕೊಡವೂರು ನಿರೂಪಿಸಿದರು.
ಗೌರವ ಡಾಕ್ಟರೇಟ್
ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಸಾಗರದಾಚೆಗೆ ನಡೆಸಿರುವ ಶ್ರೀಕೃಷ್ಣ ತತ್ವ ಪ್ರಸಾರ ಹಾಗೂ ಅನಿವಾಸಿ ಭಾರತೀಯರು ಮಾತ್ರವಲ್ಲದೇ ವಿದೇಶಿಯರಲ್ಲಿ ಹಿಂದೂ ಸಂಸ್ಕೃತಿ ಹಾಗೂ ದೈವಿಕ ಪ್ರಜ್ಞೆ ಮೂಡಿಸಿ ಅವರಲ್ಲಿ ಆಧ್ಯಾತ್ಮಿಕ ಜಾಗೃತಿ ಮೂಡಿಸಿದ ಹಿನ್ನೆಲೆಯಲ್ಲಿ ಆಫ್ರಿಕಾದ ಮೈಲ್ಸ್ ಲೀಡರ್'ಶಿಪ್ ಯೂನಿವರ್ಸಿಟಿ ನೀಡಿದ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು.
ಶ್ರೀಗಳ ಸಿದ್ಧಿ ಸಾಧನೆ ಕುರಿತು ಎಲ್ಲೂರು ಸುಬ್ರಹ್ಮಣ್ಯ ರಾವ್ ಮತ್ತು ಓಂಪ್ರಕಾಶ ಭಟ್ ಸಂಪಾದಿತ `ವಿಶ್ವಮಾನ್ಯ ಯತಿಯ ಯಶೋಗಾಥೆ' ಪುಸ್ತಕ ಅನಾವರಣಗೊಳಿಸಲಾಯಿತು.
ಭಕ್ತರು ಹಾಗೂ ಅಭಿಮಾನಿಗಳಿಂದ ಗುರುವಂದನೆ ನಡೆಯಿತು.
ಬಳಿಕ ಸಗ್ರಿ ಹವ್ಯಾಸಿ ಯಕ್ಷ ಕಲಾವಿದರಿಂದ `ಅರ್ತ ತ್ರಾಣ ಪರಾಯಣಮ್' ತೆಂಕುತಿಟ್ಟು ಯಕ್ಷಗಾನ ನಡೆಯಿತು.
ಸಮಸ್ತ ಸತಾತನಿಗಳಿಗೆ ಸಂತಸ
ಆಚಾರ್ಯ ಮಧ್ವರ ಅಂಚೆಚೀಟಿ ಬಿಡುಗಡೆಗೆ ವೀಡಿಯೊ ಸಂದೇಶ ನೀಡಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಮಹಾನ್ ದಾರ್ಶನಿಕ ಆಚಾರ್ಯ ಮಧ್ವರಿಗೆ ಅಂಚೆ ಇಲಾಖೆ ಗೌರವ ಸಲ್ಲಿಸಿದೆ.
ಇದು ಮಾಧ್ವರಿಗೆ ಮಾತ್ರವಲ್ಲದೇ ಸಮಸ್ತ ಸನಾತನಿಗಳಿಗೆ ಸಂತಸ ತಂದಿದೆ ಎಂದರು.