-->
Belthangadi: ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು

Belthangadi: ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು

ಲೋಕಬಂಧು ನ್ಯೂಸ್, ಬೆಳ್ತಂಗಡಿ
ಸೌಜನ್ಯ ಪರ ಹೋರಾಟಗಾರ, ಹಿಂದುತ್ವದ ನಾಯಕ ಮಹೇಶ್ ಶೆಟ್ಟಿ ತಿಮರೋಡಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದು, ಪೊಲೀಸರು ತನ್ನ ಮೇಲೆ ತೀವ್ರ ದೌರ್ಜನ್ಯ ಎಸಗುತ್ತಿದ್ದಾರೆ ಮತ್ತು ರಾಜಕೀಯ ಕಾರಣಗಳಿಗಾಗಿ ತನ್ನನ್ನು ಗುರಿಯಾಗಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.ತನಗೆ ಮತ್ತು ತನ್ನ ಬೆಂಬಲಿಗರ ಮೇಲೆ ದಾಖಲಾಗಿರುವ ಎಲ್ಲಾ ಎಫ್‌ಐಆರ್‌ಗಳ ಬಗ್ಗೆ ಸ್ವತಂತ್ರ ತನಿಖೆ ನಡೆಸುವಂತೆ ಅವರು ಕೋರಿದ್ದು, ಪೊಲೀಸರು ರಾಜಕೀಯ ಒತ್ತಡಕ್ಕೆ ಮಣಿದು ಸುಳ್ಳು ಪ್ರಕರಣಗಳನ್ನು ಸೃಷ್ಟಿಸುತ್ತಿದ್ದಾರೆ ಎಂದು ದೂರಿದ್ದಾರೆ.


ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ನ್ಯಾಯಕ್ಕಾಗಿ ಕಳೆದ 13 ವರ್ಷದಿಂದ ಹೋರಾಡುತ್ತಿರುವುದೇ ಈ ಕಿರುಕುಳಕ್ಕೆ ಕಾರಣ. ಜೊತೆಗೆ ಇತ್ತೀಚೆಗೆ ಧರ್ಮಸ್ಥಳದ ದೇವಸ್ಥಾನವೊಂದನ್ನು ಖಾಸಗಿ ವ್ಯಕ್ತಿಗಳಿಗೆ ವರ್ಗಾಯಿಸಿ, ಅದನ್ನು ಜೈನ ಸಂಸ್ಥೆ ಎಂದು ಹೇಳುತ್ತಿರುವುದನ್ನು ತಾನು ಪ್ರಶ್ನಿಸಿದ್ದೇ ಈಗಿನ ಸಮಸ್ಯೆಗಳಿಗೆ ಮೂಲ ಕಾರಣ. ಬಿಜೆಪಿ ನಾಯಕರ ಬೆಂಬಲದಿಂದ ಹೀಗೆ ಮಾಡಲಾಗುತ್ತಿದೆ ಎಂದು ತಾನು ನೀಡಿದ ಹೇಳಿಕೆಯನ್ನೇ ಮುಂದಿಟ್ಟುಕೊಂಡು, ತನ್ನ ಮೇಲೆ ಪ್ರಕರಣಗಳ ಸರಮಾಲೆ ಆರಂಭವಾಯಿತು ಎಂದವರು ವಿವರಿಸಿದ್ದಾರೆ.


ಬಿಜೆಪಿ ನಾಯಕ ಬಿ.ಎಲ್. ಸಂತೋಷ್ ವಿರುದ್ಧ ಮಾತನಾಡಿದ್ದಾರೆ ಎಂದು ತನ್ನ ಮೇಲೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಯಿತು. ವಿಚಾರಣೆಗೆ ಹಾಜರಾಗಲು 15 ದಿನಗಳ ಕಾಲಾವಕಾಶ ಕೇಳಿದ್ದರೂ ಉತ್ತರ ನೀಡದೆ ಆ.21ರಂದು ಏಳು ಪೊಲೀಸ್ ಜೀಪ್‌ಗಳು ಮತ್ತು ಎರಡು ವ್ಯಾನ್‌ಗಳಲ್ಲಿ ಹಿರಿಯ ಅಧಿಕಾರಿಗಳು ತನ್ನ ಮನೆಗೆ ಬಂದಿದ್ದರು. ಇದು ಸಾರ್ವಜನಿಕವಾಗಿ ತನಗೆ ಅವಮಾನ ಮಾಡುವ ಉದ್ದೇಶದಿಂದ ನಡೆಸಿದ ದಾಳಿಯಾಗಿತ್ತು ಎಂದವರು ಆರೋಪಿಸಿದ್ದಾರೆ.

Ads on article

Advertise in articles 1

advertising articles 2

Advertise under the article