-->
Bengaluru: ಬಾನು ಮುಷ್ತಾಕ್ ದಸರಾ ಉದ್ಘಾಟನೆ ಪ್ರಶ್ನಿಸಿದ್ದ ಎಲ್ಲಾ ಪಿಐಎಲ್ ವಜಾ

Bengaluru: ಬಾನು ಮುಷ್ತಾಕ್ ದಸರಾ ಉದ್ಘಾಟನೆ ಪ್ರಶ್ನಿಸಿದ್ದ ಎಲ್ಲಾ ಪಿಐಎಲ್ ವಜಾ

ಲೋಕಬಂಧು ನ್ಯೂಸ್, ಬೆಂಗಳೂರು
ನಾಡಹಬ್ಬ ದಸರಾ ಉತ್ಸವದ ಉದ್ಘಾಟನೆಗೆ ಬಾನು ಮುಷ್ತಾಕ್ ಅವರನ್ನು ಆಹ್ವಾನಿಸಿರುವ ರಾಜ್ಯ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಮೈಸೂರಿನ ಮಾಜಿ ಸಂಸದ ಪ್ರತಾಪಸಿಂಹ ಮತ್ತಿತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್)ಗಳನ್ನು ಹೈಕೋರ್ಟ್ ವಜಾಗೊಳಿಸಿದೆ.
ಬಾನು ಮುಷ್ತಾಕ್ ಅವರಿಗೆ ನೀಡಿರುವ ಆಹ್ವಾ ಹಿಂಪಡೆಯಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಪ್ರತಾಪಸಿಂಹ ಸೇರಿದಂತೆ ನಗರದ ಉದ್ಯಮಿ ಟಿ.ಗಿರೀಶ್ ಕುಮಾರ್ ಹಾಗೂ ‘ಅಭಿನವ ಭಾರತ್ ಪಾರ್ಟಿ‘ ರಾಷ್ಟ್ರೀಯ ಉಪಾಧ್ಯಕ್ಷೆ ಆರ್.ಸೌಮ್ಯಾ ಸಲ್ಲಿಸಿದ್ದ ಮೂರು ಪ್ರತ್ಯೇಕ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ನೇತೃತ್ವದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.


ವಿಚಾರಣೆ ವೇಳೆ ಪ್ರತಾಪಸಿಂಹ ಪರ ಹೈಕೋರ್ಟ್ ವಕೀಲ ಎಸ್‌.ಸುದರ್ಶನ್‌ 'ಬಾನು ಮುಷ್ತಾಕ್‌ ಹಿಂದೂ ಸಂಪ್ರದಾಯ ವಿರೋಧಿ ಮತ್ತು ಕನ್ನಡ ವಿರೋಧಿ ಹೇಳಿಕೆ ನೀಡಿದ್ದಾರೆ. ದಸರಾ ಉದ್ಘಾಟನೆಗೆ ಆಯ್ಕೆಯಾದವರು ಚಾಮುಂಡೇಶ್ವರಿ ದೇವಾಲಯಕ್ಕೆ ಭೇಟಿ ನೀಡುವುದು ಶಿಷ್ಟಾಚಾರ. ಆದರೆ, ಅವರು ಅದನ್ನು ಪಾಲನೆ ಮಾಡಿಲ್ಲ. ಬಾನು ಮುಷ್ತಾಕ್‌ ಅವರಿಗೆ ಅರಿಶಿಣ-ಕುಂಕುಮದ ಮೇಲೆ ನಂಬಿಕೆ ಇಲ್ಲ. ದಸರಾ ಹಿಂದೂ ಹಬ್ಬವಾಗಿದ್ದು, ಜಾತ್ಯತೀತ ಹಬ್ಬವಲ್ಲ' ಎಂದು ಪ್ರತಿಪಾದಿಸಿದರು.


ರಾಜ್ಯ ಸರ್ಕಾರದ ಪರ ಅಡ್ವೊಕೇಟ್ ಜನರಲ್ ಕೆ.ಶಶಿಕಿರಣ್ ಶೆಟ್ಟಿ ಆಕ್ಷೇಪ ವ್ಯಕ್ತಪಡಿಸಿ, 'ಇದು ರಾಜ್ಯದ ಹಬ್ಬ. ಸರ್ಕಾರದ ನಿರ್ಧಾರ ಸಂವಿಧಾನದ 15ನೇ ವಿಧಿಗೆ ಪೂರಕವಾಗಿದೆ. ಪ್ರತಾಪಸಿಂಹ ಸಂಸದರಾಗಿದ್ದಾಗ ಸಾಹಿತಿ ಕೆ‌.ಎಸ್.ನಿಸಾರ್‌ ಅಹ್ಮದ್‌ ಅವರನ್ನು ದಸರಾ ಉದ್ಘಾಟನೆಗೆ ಆಹ್ವಾನಿಸಿ ಅವರಿಂದ ಉದ್ಘಾಟನೆ ಮಾಡಿಸಲಾಗಿತ್ತು. ಪ್ರತಾಪಸಿಂಹ ಆಗ ಆಕ್ಷೇಪ ವ್ಯಕ್ತಪಡಿಸಿರಲಿಲ್ಲ. ಆ ವಿಚಾರವನ್ನು ಅವರು ಈಗ ಮುಚ್ಚಿಟ್ಟಿದ್ದಾರೆ.


ಬಾನು ಮುಷ್ತಾಕ್‌ ಬುಕರ್‌ ಪ್ರಶಸ್ತಿ ಪುರಸ್ಕೃತರು. ಹಾಗಾಗಿಯೇ ಅವರನ್ನು ದಸರಾ ಉದ್ಘಾಟನೆಗೆ ಆಹ್ವಾನಿಸಲಾಗಿದೆ. ಆದ್ದರಿಂದ, ಅರ್ಜಿಯನ್ನು ವಜಾ ಮಾಡಿ ಅರ್ಜಿದಾರ ಪ್ರತಾಪಸಿಂಹ ಅವರಿಗೆ ದಂಡ ವಿಧಿಸಬೇಕು’ ಎಂದು ಕೋರಿದರು.


ಲೇಖಕಿಯನ್ನು ಹಿಂದೂ ವಿರೋಧಿ ಎನ್ನುವುದು ಸರಿಯಲ್ಲ. ಧರ್ಮದ ಆಧಾರದಲ್ಲಿ ತಾರತಮ್ಯಕ್ಕೆ ಅವಕಾಶ ನೀಡಬಾರದು’ ಎಂದು ಮನವಿ ಮಾಡಿದರು.


ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ಕಾರ್ಯಕ್ರಮದಲ್ಲಿ ಅನ್ಯಧರ್ಮದ ವ್ಯಕ್ತಿ ಭಾಗಿಯಾಗುವುದರಿಂದ ಅರ್ಜಿದಾರರ ಯಾವುದೇ ಕಾನೂನಾತ್ಮಕ ಅಥವಾ ಸಾಂವಿಧಾನಿಕ ಹಕ್ಕುಗಳನ್ನು ಉಲ್ಲಂಘಿಸಿದಂತಾಗುತ್ತದೆ ಮತ್ತು ಸಾಂವಿಧಾನಿಕ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂಬುದನ್ನು ಸಾಬೀತುಪಡಿಸುವಲ್ಲಿ ಅರ್ಜಿದಾರರು ವಿಫಲವಾಗಿದ್ದಾರೆ’ ಎಂಬ ಕಾರಣ ನೀಡಿ ಎಲ್ಲ ಅರ್ಜಿಗಳನ್ನು ವಜಾಗೊಳಿಸಿ ಆದೇಶಿಸಿತು.


ಅರ್ಜಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಧಾನ ಕಾರ್ಯದರ್ಶಿಯನ್ನು ಪ್ರತಿವಾದಿಯನ್ನಾಗಿ ಮಾಡಲಾಗಿತ್ತು.


ಪ್ರತಾಪ ಸಿಂಹ ಪರ ಹೈಕೋರ್ಟ್ ವಕೀಲರಾದ ಸುದರ್ಶನ ಸುರೇಶ್, ಡಿ.ಎಂ.ಸಾಯಿನಾಥ, ನೇಹಾ ವೆಂಕಟೇಶ್ ಮತ್ತು ಡಿ.ಎಸ್.ಸೌಮ್ಯ ವಕಾಲತ್ತು ವಹಿಸಿದ್ದರು.


ಅರ್ಜಿಯಲ್ಲಿ ಏನಿತ್ತು?
ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್‌ ಅವರಿಗೆ ಆಹ್ವಾನ ನೀಡಿರುವುದು ತಪ್ಪು. ಬಾನು ಅವರ ಧಾರ್ಮಿಕ ನಂಬಿಕೆ ಮತ್ತು ಆಚರಣೆಗಳು ಮೂಲಭೂತವಾಗಿ ವಿಭಿನ್ನವಾಗಿವೆ. ಅವರು ಈ ಹಿಂದೆ ಹಿಂದೂ ಮತ್ತು ಕನ್ನಡ ವಿರೋಧಿ ಹೇಳಿಕೆ ನೀಡಿದ್ದು, ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಘಾಸಿ ಉಂಟುಮಾಡಿದ್ದಾರೆ. ಅವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಿರುವ ರಾಜ್ಯ ಸರ್ಕಾರದ ನಿಲುವು ಸಂವಿಧಾನದ 25 ಮತ್ತು 26ನೇ ವಿಧಿಯಡಿ ಧಾರ್ಮಿಕ ಸ್ವಾತಂತ್ರ್ಯದ ಮೂಲಭೂತ ಹಕ್ಕಿನ ಉಲ್ಲಂಘನೆ. ಆದ್ದರಿಂದ, ಅವರಿಗೆ ನೀಡಲಾಗಿರುವ ಆಹ್ವಾನವನ್ನು ಹಿಂಪಡೆಯಲು ಸರ್ಕಾರಕ್ಕೆ ನಿರ್ದೇಶಿಸಬೇಕು’ ಎಂದು ಅರ್ಜಿದಾರರು ಕೋರಿದ್ದರು.

Ads on article

Advertise in articles 1

advertising articles 2

Advertise under the article