-->
Udupi: ಸಂಭ್ರಮದ ಜೊತೆಗೆ ಭಗವತ್ ಚಿಂತನೆ ಅಗತ್ಯ

Udupi: ಸಂಭ್ರಮದ ಜೊತೆಗೆ ಭಗವತ್ ಚಿಂತನೆ ಅಗತ್ಯ

ಲೋಕಬಂಧು ನ್ಯೂಸ್, ಉಡುಪಿ
ಸಂಭ್ರಮಾಚರಣೆಯ ಜೊತೆ ಜೊತೆಗೇ ಭಗವತ್ ಚಿಂತನೆಯನ್ನೂ ಮೈಗೂಡಿಸಿಕೊಳ್ಳಬೇಕು ಎಂದು ಭಾವಿ ಪರ್ಯಾಯ ಶೀರೂರು ಶ್ರೀ ವೇದವರ್ಧನತೀರ್ಥ ಶ್ರೀಪಾದರು ಹೇಳಿದರು.
ವಿಟ್ಲಪಿಂಡಿ ಮಹೋತ್ಸವ ಅಂಗವಾಗಿ ಇಲ್ಲಿನ ರಥಬೀದಿಯ ಶೀರೂರು ಮಠದ ಮುಂಭಾಗ ನಿರ್ಮಿಸಲಾಗಿದ್ದ ಅನ್ನವಿಠಲ ವೇದಿಕೆಯಲ್ಲಿ ಸೋಮವಾರ ನಡೆದ ಹುಲಿಕುಣಿತ ಮತ್ತು ಸಂಗೀತ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಶೀರೂರು ಮಠದ ರಕ್ಷಾದೈವವಾದ ಪಿಲಿಚಾಮುಂಡಿ ಪ್ರೀತ್ಯರ್ಥವಾಗಿ ಹಾಗೂ ದೈವರಕ್ಷೆಗಾಗಿ ಶೀರೂರು ಮಠದಲ್ಲಿ ಅಷ್ಟಮಿ ಸಂದರ್ಭ ಹುಲಿವೇಷ ಸೇವೆ ನಡೆಸಲಾಗುತ್ತಿದೆ ಎಂದರು.


ಮಠದ ದಿವಾನ ಡಾ.ಉದಯ ಸರಳತ್ತಾಯ ಮಾತನಾಡಿ, ಕೃಷ್ಣಾವತಾರದಿಂದ ಭೀತಿ ಕಳೆದ ಸಂತಸದಿಂದ ಗೋಪಾಲಕರು ಭೀತಿಯ ಪ್ರತಿರೂಪವಾದ ಹುಲಿಯ ಬೇಟೆಯಾಡುವ ದೃಶ್ಯಾವಳಿಯನ್ನು ಸಂಭ್ರಮಾಚರಣೆಯ ಪ್ರತೀಕವಾಗಿ ಆಚರಿಸಿರುವುದು‌ ಜನ್ಮಾಷ್ಟಮಿ ಸಂದರ್ಭದಲ್ಲಿ ಹುಲಿವೇಷ ಪರಿಕಲ್ಪನೆಯ ಹಿಂದಿನ ರಹಸ್ಯ ಎಂದರು. ಅದರ ಸಾಕಾರಕ್ಕಾಗಿ ಶ್ರೀ ಲಕ್ಷ್ಮೀವರತೀರ್ಥ ಶ್ರೀಪಾದರು ಕಲ್ಪಿಸಿಕೊಟ್ಟಿರುವ ವೇದಿಕೆಯನ್ನು ಬಳಸುತ್ತಿರುವುದಾಗಿ ತಿಳಿಸಿದರು. 


ಮುಂದಿನ ಶೀರೂರು ಪರ್ಯಾಯ ಸಂದರ್ಭದಲ್ಲಿ ಸರ್ವರ ಸಹಕಾರ ಬಯಸಿದರು.


ಪರ್ಯಾಯ ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ಮಟ್ಟಾರು ರತ್ನಾಕರ ಹೆಗ್ಡೆ, ಕಾರ್ಯಾಧ್ಯಕ್ಷ ಮೋಹನ ಭಟ್ ಮೊದಲಾದವರಿದ್ದರು. ಉಪನ್ಯಾಸಕ ಅಶ್ವತ್ಥ ಭಾರದ್ವಾಜ ಸ್ವಾಗತಿಸಿ, ನಿರೂಪಿಸಿದರು.
ಬಳಿಕ ಓಂತಿಬೆಟ್ಟು ಸ್ವರ ತಂಡದಿಂದ ಸಂಗೀತ, ಹುಲಿವೇಷ ಪ್ರದರ್ಶನ ನಡೆಯಿತು.

Ads on article

Advertise in articles 1

advertising articles 2

Advertise under the article