Udupi: ಬದುಕುವ ಸ್ವಾತಂತ್ರ್ಯ ಉಳಿದಲ್ಲಿ ಪ್ರಜಾಪ್ರಭುತ್ವದ ಉಳಿವು
Friday, September 19, 2025
ಲೋಕಬಂಧು ನ್ಯೂಸ್, ಉಡುಪಿ
ಬದುಕುವ ಸ್ವಾತಂತ್ರ್ಯ ಉಳಿದಾಗ ಮಾತ್ರ ಪ್ರಜಾಪ್ರಭುತ್ವದ ಉಳಿವು ಸಾಧ್ಯ ಎಂದು ಚಿಂತಕ ಬರಗೂರು ಡಾ. ರಾಮಚಂದ್ರಪ್ಪ ಹೇಳಿದರು.ಅಜ್ಜರಕಾಡು ಡಾ. ಜಿ.ಶಂಕರ್ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ವತಿಯಿಂದ ಕಾಲೇಜಿನ ಪಿ.ಜಿ.ಎ.ವಿ. ಸಭಾಂಗಣದಲ್ಲಿ ಶುಕ್ರವಾರ ನಡೆದ ರಾಜ್ಯಶಾಸ್ತ್ರ ಸಂಘದ ಉದ್ಘಾಟನೆ ಮತ್ತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಪ್ರಜಾಪ್ರಭುತ್ವ ಮತ್ತು ಸ್ವಾತಂತ್ರ್ಯ' ವಿಷಯದಲ್ಲಿ ಮಾತನಾಡಿದರು.
ಪ್ರಶ್ನಿಸುವ ಹಕ್ಕನ್ನು ಪ್ರಜಾಪ್ರಭುತ್ವ ನಮಗೆ ನೀಡಿದೆ. ಆದರೆ, ಇಂದು ಪ್ರಶ್ನೆಗಳಿಗೆ ಉತ್ತರ ಸಿಗುತ್ತಿದೆಯೇ ಎಂದು ಕೇಳಿದ ಅವರು, ಮನಸ್ಸನ್ನು ಮಾರುಕಟ್ಟೆ ಮಾಡಿದರೆ ಸಾಲದು ಅದನ್ನು ಮೌಲ್ಯಕಟ್ಟೆ ಮಾಡಬೇಕು.
ದೇಶದಲ್ಲಿ ಇಂದು ತಾಂತ್ರಿಕ ಪ್ರಜಾಪ್ರಭುತ್ವವಿದೆ. ತಾತ್ವಿಕವಾದ ಪ್ರಜಾಪ್ರಭುತ್ವಕ್ಕೆ ಹಿನ್ನಡೆಯಾಗಿದೆ. ರಾಜಕೀಯ, ಆರ್ಥಿಕ, ಸಾಮಾಜಿಕ ಸರ್ವಾಧಿಕಾರವನ್ನು ತೊಡೆದುಹಾಕುವುದೇ ನಿಜವಾದ ಪ್ರಜಾಪ್ರಭುತ್ವ.
ಇಂದು ರಾಜಕಾರಣಿಗಳಲ್ಲಿ ನುಡಿ ನೈತಿಕತೆಯೇ ಇಲ್ಲವಾಗಿದೆ. ಪ್ರಜಾಪ್ರಭುತ್ವದ ಸಂಸದೀಯ ಪರಿಭಾಷೆಗೆ ಧಕ್ಕೆಯಾಗುತ್ತಿದೆ ಎಂದವರು ವಿಷಾದಿಸಿದರು.
ಇಂದು ದೇಶದಲ್ಲಿ ಸಂವಾದಕ್ಕಿಂತ ಉನ್ಮಾದ ಹೆಚ್ಚಾಗಿದೆ, ವಿವೇಕದ ಬದಲಿಗೆ ಅವಿವೇಕ ಜಾಸ್ತಿಯಾಗಿದೆ. ಪ್ರೀತಿಯ ಜಾಗದಲ್ಲಿ ದ್ವೇಷ ಆವರಿಸಿಕೊಂಡಿದೆ. ಸತ್ಯಕ್ಕೆ ಸಾಕ್ಷಿ ಕೇಳುವ ಕಾಲದಲ್ಲಿ ನಾವಿದ್ದೇವೆ ಎಂದೂ ಹೇಳಿದರು.
ಕಾಲೇಜಿನ ಪ್ರಾಂಶುಪಾಲ ಸೋಜನ್ ಕೆ.ಜಿ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿ ಕ್ಷೇಮ ಪಾಲಕಿ ಡಾ. ನಿಕೇತನ, ಸಹ ಪ್ರಾಧ್ಯಾಪಕಿ ಸುಚಿತ್ರಾ ಟಿ. ಉಪಸ್ಥಿತರಿದ್ದರು.
ಸೌಮ್ಯಶ್ರೀ ಭಾವಗೀತೆ ಹಾಡಿದರು. ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಮುಂಜುನಾಥ ಸ್ವಾಗತಿಸಿದರು.