.jpg)
Udupi: ಮೃಣ್ಮಯ ಕೃಷ್ಣಮೂರ್ತಿಯ ಚಿನ್ನದ ರಥೋತ್ಸವ
Monday, September 15, 2025
ಲೋಕಬಂಧು ನ್ಯೂಸ್, ಉಡುಪಿ
ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಚತುರ್ಥ ಪರ್ಯಾಯದ ದ್ವಿತೀಯ ಅವಧಿಯ ಶ್ರೀಕೃಷ್ಣ ಜನ್ಮಾಷ್ಟಮಿ ವಿಟ್ಲಪಿಂಡಿ ಮಹೋತ್ಸವ ಸೋಮವಾರ ಸಂಪನ್ನಗೊಂಡಿದ್ದು, ಶ್ರೀಕೃಷ್ಣನ ಮೃಣ್ಮಯ ಮೂರ್ತಿಯ ಚಿನ್ನದ ರಥೋತ್ಸವ ನಡೆದು, ಬಳಿಕ ಮಧ್ವ ಸರೋವರದಲ್ಲಿ ಮೂರ್ತಿಯನ್ನು ಜಲಸ್ತಂಭನಗೊಳಿಸುವ ಮೂಲಕ ಕಳೆದ 48 ದಿನಗಳಿಂದ ನಡೆದ ಕೃಷ್ಣ ಮಂಡಲೋತ್ಸವಕ್ಕೆ ಸಂಭ್ರಮದ ತೆರೆಬಿತ್ತು.
ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಹಾಗೂ ಕಿರಿಯ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಬೆಳಿಗ್ಗೆ ಶ್ರೀಕೃಷ್ಣನಿಗೆ ಮಹಾಪೂಜೆ ನಡೆಸಿ, ಮಡಿಕೆ ಒಡೆಯುವ ಸ್ಪರ್ಧೆ, ಆಲಾರೆ ಗೋವಿಂದ ಇತ್ಯಾದಿಗಳಿಗೆ ಚಾಲನೆ ನೀಡಿದರು.
ಪಲ್ಲಪೂಜೆ ಬಳಿಕ ಸಹಸ್ರಾರು ಮಂದಿ ಭೋಜನ ಪ್ರಸಾದ ಸ್ವೀಕರಿಸಿದರು. ಶ್ರೀಕೃಷ್ಣನಿಗೆ 'ತೊಟ್ಟಿಲಿನಲ್ಲಿಯೇ ಮೊಸರು ಕುಡಿಕೆ ಒಡೆಯುವ ಪೇಟ್ಲಕೃಷ್ಣ'ನ ಅಲಂಕಾರ ಮಾಡಲಾಗಿತ್ತು.
ಚಾತುರ್ಮಾಸ್ಯ ಹಿನ್ನೆಲೆಯಲ್ಲಿ ಕೃಷ್ಣನ ಉತ್ಸವ ಮೂರ್ತಿ ಗರ್ಭಗೃಹದಿಂದ ಹೊರಬರುವಂತಿಲ್ಲವಾದ್ದರಿಂದ ಮಣ್ಣಿನ ಮೂರ್ತಿ ಸಿದ್ಧಪಡಿಸಲಾಗಿದ್ದು, ಅದಕ್ಕೆ ಪರ್ಯಾಯ ಶ್ರೀಪಾದರು ಶೋಡಷೋಪಚಾರ ಪೂಜೆ ನಡೆಸಿದರು. ಅಪರಾಹ್ನ 3 ಗಂಟೆ ವೇಳೆಗೆ ಮೃಣ್ಮಯ ಕೃಷ್ಣನ ಮೂರ್ತಿಯನ್ನು ಚಿನ್ನದ ಪಲ್ಲಕಿಯಲ್ಲಿಟ್ಟು ರಥಬೀದಿಗೆ ತಂದು ಚಿನ್ನದ ರಥದಲ್ಲಿಡಲಾಯಿತು. ಅದಾಗಲೇ ಆಗಮಿಸಿದ್ದ ಶ್ರೀಅನಂತೇಶ್ವರ ಮತ್ತು ಶ್ರೀಚಂದ್ರೇಶ್ವರ ದೇವರ ಉತ್ಸವ ಮೂರ್ತಿಗಳನ್ನು ನವರತ್ನ ರಥದಲ್ಲಿಡಲಾಗಿತ್ತು.
ಪರ್ಯಾಯ ಶ್ರೀಗಳು ಕೃಷ್ಣಮೂರ್ತಿಗೆ ಆರತಿ ಬೆಳಗುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು. ಗೊಲ್ಲವೇಷಧಾರಿ ಶ್ರೀಕೃಷ್ಣಮಠದ ಗೋಪಾಲಕರು ಮೊಸರು ಕುಡಿಕೆಗಳನ್ನು ಒಡೆದು ಸಂಭ್ರಮಿಸಲು ಸಿದ್ಧರಾಗಿದ್ದರು. ಕೃಷ್ಣಮಠದೆದುರಿನ ಗುರ್ಜಿಯಲ್ಲಿಡಲಾಗಿದ್ದ ಮೊಸರು ಕುಡಿಕೆಗಳನ್ನು ಒಡೆದು ಕೇಕೇ ಹಾಕಿ ಸಂಭ್ರಮಿಸಿದರು.
ಹುಲಿವೇಷ ಸಹಿತ ವಿವಿಧ ಜಾನಪದ ವೇಷಧಾರಿಗಳು ಉತ್ಸವದಲ್ಲಿ ಭಾಗವಹಿಸಿದ್ದರು.ಭಕ್ತರತ್ತ ಉಂಡೆ, ಚಕ್ಕುಲಿ ಪ್ರಸಾದ ಎಸೆಯಲಾಯಿತು. ಸಾವಿರಾರು ಮಂದಿ ಭಕ್ತರು ಮಹೋತ್ಸವಕ್ಕೆ ಸಾಕ್ಷಿಗಳಾದರು.
ರಥಬೀದಿಯಲ್ಲಿ ಒಂದು ಸುತ್ತು ರಥೋತ್ಸವ ನಡೆದು ಕಿರಿಯ ಶ್ರೀ ಸುಶ್ರೀಂದ್ರತೀರ್ಥರು ಮೃಣ್ಮಯ ಮೂರ್ತಿಯನ್ನು ರಥದಿಂದಿಳಿಸಿ ಮತ್ತೆ ಪಲ್ಲಕಿಯಲ್ಲಿಟ್ಟರು. ಮೃಣ್ಯಯ ಮೂರ್ತಿಯನ್ನು ಮಧ್ವಸರೋವರದಲ್ಲಿ ದೋಣಿಯಲ್ಲಿ ಕೊಂಡೊಯ್ದು, ಸರೋವರ ಮಂಟಪದಲ್ಲಿ ಉತ್ತರಪೂಜೆ ನಡೆದು ಜಲಸ್ತಂಭನಗೊಳಿಸಲಾಯಿತು.