
Udupi: ಆತ್ಮೋದ್ಧಾರಕ್ಕಾಗಿ ಕೃಷ್ಣಾಷ್ಟಮಿ ಆಚರಣೆ
Saturday, September 13, 2025
ಆತ್ಮೋದ್ಧಾರಕ್ಕಾಗಿ ಕೃಷ್ಣಾಷ್ಟಮಿ ಆಚರಣೆ
ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ ಆಡಂಬರದ ಆಚರಣೆಯಲ್ಲ, ಅದು ನಮ್ಮ ಆತ್ಮೋದ್ಧಾರಕ್ಕೆ ಮೂಲ. ಕೃಷ್ಣ ಜನ್ಮಾಷ್ಟಮಿ ಆಚರಣೆಯೊಂದಿಗೆ ಕೃಷ್ಣನ ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದೂ ಅಗತ್ಯ ಎಂದು ಪರಾಯ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಹೇಳಿದ್ದಾರೆ.
ಶ್ರೀಕೃಷ್ಣ ಜನ್ಮಾಷ್ಟಮಿ ಸಂದೇಶ ನೀಡಿದ ಅವರು, ಉಡುಪಿಯಲ್ಲಿ ಈ ಹಿಂದಿನಿಂದಲೂ ಸೌರಮಾನ ಪದ್ಧತಿಯಂತೆ ಕೃಷ್ಣ ಜನ್ಮಾಷ್ಟಮಿ ಆಚರಿಸಲಾಗುತ್ತಿದೆ. ಕೃಷ್ಣಪೂಜಾ ವಿಧಾನವನ್ನು ಆಚಾರ್ಯ ಮಧ್ವರು ಶ್ರುತಪಡಿಸಿದ್ದಾರೆ.
ಭಗವಂತನ ಪೂಜೆಯೊಂದಿಗೆ ಸತ್ಕಾರ್ಯಗಳನ್ನು ಮಾಡುವ ಮೂಲಕ ಜೀವನವನ್ನು ಸಾರ್ಥಕಪಡಿಸಿಕೊಳ್ಳಬೇಕು. ಭಗವಂತನ ಅನುಗ್ರಹಕ್ಕೆ ಪಾತ್ರರಾಗಲು ಕೃಷ್ಣ ಜನ್ಮಾಷ್ಟಮಿ ಪೂರಕ. ಹಾಗಾಗಿ ಅದು ಕೇವಲ ಆಚರಣೆಗೆ ಸೀಮಿತವಲ್ಲ. ಜನ್ಮಾಷ್ಟಮಿ ಆಚರಣೆಯಿಂದ ಯಾಗ ಮಾಡಿದ ಪುಣ್ಯಫಲ ಲಭಿಸುತ್ತದೆ. ಉಪವಾಸ, ಅರ್ಘ್ಯ ಪ್ರದಾನ, ಆರಾಧನೆ ಮೂಲಕ ಜನ್ಮಾಷ್ಟಮಿ ಆಚರಣೆಯನ್ನು ಆಧ್ಯಾತ್ಮಿಕ ಕರ್ತವ್ಯ ಎಂಬುದಾಗಿ ಆಚರಿಸಬೇಕು. ಏಕಾದಶಿ ಆಚರಣೆಗಿಂತ ಮಿಗಿಲಾದ ಫಲ ನೀಡುವ ವ್ರತ ಇದಾಗಿದೆ ಎಂದು ಶ್ರೀಪಾದರು ತಿಳಿಸಿದ್ದಾರೆ.