Udupi: ಆರ್ಥಿಕ ಶಿಸ್ತಿಗೆ ಸಹಕಾರ ನೀಡಿದಲ್ಲಿ ಪ್ರಗತಿ
Wednesday, September 17, 2025
ಲೋಕಬಂಧು ನ್ಯೂಸ್, ಉಡುಪಿ
ಜನರ ವಿಶ್ವಾಸ ಉಳಿಸಿ, ಆರ್ಥಿಕ ಶಿಸ್ತಿನೊಂದಿಗೆ ಆರ್ಥಿಕತೆಗೆ ಸಹಕಾರ ಸಂಸ್ಥೆಗಳು ಕೊಡುಗೆ ನೀಡಿದರೆ ಪ್ರಗತಿ ಜೊತೆಗೆ ಲಾಭ ಗಳಿಕೆ, ಯಶಸ್ವಿ ಮುನ್ನಡೆ ಸಾಧ್ಯ ಎಂದು ಉಡುಪಿ ಶಾಸಕ ಯಶಪಾಲ್ ಎ. ಸುವರ್ಣ ಹೇಳಿದರು.ಅಜ್ಜರಕಾಡು ಪುರಭವನ ಮಿನಿ ಹಾಲ್ನಲ್ಲಿ ನಡೆದ ಉಡುಪಿ ಜಿಲ್ಲಾ ಸಹಕಾರ ಯೂನಿಯನ್ನ 2024- 25ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು.
ರಾಜ್ಯ ಸರಕಾರ, ಸಹಕಾರ ಸಂಸ್ಥೆಗಳ ಆಡಳಿತ ಮಂಡಳಿಯಲ್ಲಿ ಉದ್ದೇಶಿತ ಮೀಸಲು ವ್ಯವಸ್ಥೆಯ ಸಾಧಕ ಬಾಧಕ ಚರ್ಚೆಯಾಗಬೇಕು. ಮೀಸಲು ನಿಧಿಯ ಗೊಂದಲ ನಿವಾರಣೆಯಾಗಬೇಕು. ಸರಕಾರಿ ಯೋಜನೆಗಳ ಹಣವನ್ನು ಸಹಕಾರ ಬ್ಯಾಂಕುಗಳಲ್ಲಿ ಠೇವಣಿಯಾಗಿಡಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಯೂನಿಯನ್ ಅಧ್ಯಕ್ಷ ಬಿ. ಜಯಕರ ಶೆಟ್ಟಿ ಇಂದ್ರಾಳಿ, ಸಹಕಾರ ಕ್ಷೇತ್ರಕ್ಕೆ ವಿರುದ್ಧವಾದ ಸರಕಾರದ ಯಾವುದೇ ಧೋರಣೆಗಳ ವಿರುದ್ಧ ಮನದಟ್ಟು ಮಾಡಿದರೂ ಪ್ರಯೋಜನವಾಗದಿದ್ದಲ್ಲಿ ನ್ಯಾಯಾಲಯದ ಮೂಲಕ ಹೋರಾಟ ನಡೆಸಲಾಗುವುದು ಎಂದರು.
ರಾಜ್ಯದಲ್ಲೇ ಸಹಕಾರ ಶಿಕ್ಷಣ ನಿಧಿಗೆ ಉಡುಪಿ ಜಿಲ್ಲೆಯಿಂದ ಅತ್ಯಧಿಕ 2.68 ಕೋಟಿ ರೂ. ಸಂಗ್ರಹವಾಗಿದ್ದು ತರಬೇತಿ, ಶಿಕ್ಷಣ, ಪ್ರಚಾರಕ್ಕೆ ಬಳಸಲಾಗುವುದು ಎಂದರು.
ಯೂನಿಯನ್ ಉಪಾಧ್ಯಕ್ಷ ಅಶೋಕ್ ಕುಮಾರ್ ಬಲ್ಲಾಳ್, ನಿರ್ದೇಶಕರಾದ ಎ. ಹರೀಶ್ ಕಿಣಿ, ಸುಧೀರ್ ವೈ., ಅನಿಲ್ ಎಸ್. ಪೂಜಾರಿ, ಪ್ರಸಾದ್ ಎಸ್. ಶೆಟ್ಟಿ, ಎನ್. ಮಂಜಯ್ಯ ಶೆಟ್ಟಿ, ಬಿ. ಪ್ರದೀಪ್ ಯಡಿಯಾಳ, ಅರುಣ್ ಕುಮಾರ್ ಹೆಗ್ಡೆ, ಬಿ. ಕರುಣಾಕರ ಶೆಟ್ಟಿ, ಕೆ. ಸುರೇಶ್ ರಾವ್ ಉಪಸ್ಥಿತರಿದ್ದರು.
ಚರ್ಚಾ ಸ್ಪರ್ಧಾ ವಿಜೇತರಾದ ದೀಕ್ಷಾ ಶೆಟ್ಟಿ, ಸ್ವೀಡಲ್ ಪಿರೇರ, ಲಕ್ಷ್ಮಣ, ದರ್ಶಿಕ್, ಕಾರ್ತಿಕ್ ಮತ್ತು ಪ್ರಾರ್ಥನಾ ಪೈ ಹಾಗೂ ಸಹಕಾರ ಸಾಧನೆಗಾಗಿ ಸಹಕಾರ ಸಂಘಗಳ ಅಧ್ಯಕ್ಷರು, ಸಿಇಒಗಳನ್ನು ಗೌರವಿಸಲಾಯಿತು.
ಜಿಲ್ಲಾ ಸಹಕಾರ ಯೂನಿಯನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನುಷಾ ಕೋಟ್ಯಾನ್ ನಿರೂಪಿಸಿ, ವರದಿ ವಾಚಿಸಿದರು. ನಿರ್ದೇಶಕ ಶ್ರೀಧರ ಪಿ. ಎಸ್. ಸ್ವಾಗತಿಸಿದರು. ಯೂನಿಯನ್ನ ನಿರ್ದೇಶಕ ಎಚ್. ಗಂಗಾಧರ ಶೆಟ್ಟಿ ವಂದಿಸಿದರು.