Ujire: ಭಜನೆಯಿಂದ ಸಂಸ್ಕಾರಯುಕ್ತ ಆರೋಗ್ಯಪೂರ್ಣ ಸಮಾಜ ನಿರ್ಮಾಣ
Monday, September 15, 2025
ಲೋಕಬಂಧು ನ್ಯೂಸ್, ಉಜಿರೆ
ಪಂಚೇಂದ್ರಿಯಗಳ ನಿಯಂತ್ರಣದೊಂದಿಗೆ ಪರಿಶುದ್ಧ ದೇಹ ಮತ್ತು ಮನಸ್ಸಿನಿಂದ ರಾಗ, ತಾಳ, ಲಯಬದ್ಧ ಭಜನೆಯಿಂದ ಉತ್ತಮ ಸಂಸ್ಕಾರಯುಕ್ತ ಆರೋಗ್ಯಪೂರ್ಣ ಸಮಾಜ ನಿರ್ಮಾಣ ಸಾಧ್ಯ ಎಂದು ಮೂಡುಬಿದಿರೆ ಆಳ್ವಾಸ್ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಹೇಳಿದರು.
ಧರ್ಮಸ್ಥಳದ ಮಹೋತ್ಸವ ಸಭಾಭವನದಲ್ಲಿ ಭಾನುವಾರ 27ನೇ ವರ್ಷದ ಭಜನಾ ಕಮ್ಮಟ ಉದ್ಘಾಟಿಸಿ ಮಾತನಾಡಿದರು.
ಭಜನೆಯಿಂದ ಸುಲಭದಲ್ಲಿ ದೇವರ ಅನುಗ್ರಹಕ್ಕೆ ಪಾತ್ರರಾಗಬಹುದು. ಭಜನೆಯಿಂದ ಜನಜಾಗೃತಿ ಉಂಟಾಗಿ ಎಲ್ಲರೂ ಸಮಾನರಾಗಿ, ಗುರು ಹಿರಿಯರಿಂದ ಮಾರ್ಗದರ್ಶನ, ಪ್ರೇರಣೆ ಪಡೆದು ದೃಢಭಕ್ತಿ ಮತ್ತು ಪರಿಶುದ್ಧ ಮನಸ್ಸಿನಿಂದ ಭಜನೆ ಮಾಡಿದಾಗ ಮಾನಸಿಕ ಶಾಂತಿ, ನೆಮ್ಮದಿ ಸಿಗುತ್ತದೆ. ದಾಸರ ಪದಗಳು ಮೊದಲಾದ ಕೀರ್ತನೆಗಳು ನಮಗೆ ಸಾರ್ಥಕ ಜೀವನದ ಪಾಠ ಕಲಿಸುತ್ತವೆ ಎಂದು ಡಾ. ಮೋಹನ ಆಳ್ವ ಹೇಳಿದರು.
ಮಾಣಿಲ ಶ್ರೀ ಮೋಹನದಾಸ ಸ್ವಾಮೀಜಿ ಶುಭಶಂಸನೆಗೈದು, ಭಜನಾ ತರಬೇತಿ ಪಡೆದವರು ತಮ್ಮ ಮಕ್ಕಳಿಗೂ ಭಜನೆಯ ಮೂಲಕ ಉತ್ತಮ ಸಂಸ್ಕಾರ ನೀಡಬೇಕು. ಭಜನೆ ಮಾಡುವಾಗ ನಿತ್ಯವೂ ಶಿವಪಂಚಾಕ್ಷರಿ ಪಠಣ ಮಾಡಬೇಕು ಎಂದು ಸಲಹೆ ನೀಡಿದರು.
ಪ್ರಗತಿಯ ರೂವಾರಿಗಳಾಗಿ
ಅಧ್ಯಕ್ಷತೆ ವಹಿಸಿದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ, ಭಜನಾ ತರಬೇತಿ ಪಡೆದವರು ಶಿಸ್ತು, ಸಮಯ ಪಾಲನೆ, ಸ್ವಚ್ಛತೆಯೊಂದಿಗೆ ನಾಯಕತ್ವ ಗುಣವನ್ನೂ ಬೆಳೆಸಿಕೊಂಡು ಪ್ರಗತಿಯ ರೂವಾರಿಗಳಾಗಬೇಕು.
ಸಂಸ್ಕೃತಿ ಪ್ರಸಾರದ ರಾಯಭಾರಿಗಳಾಗಿ ಎಲ್ಲರನ್ನೂ ನಮ್ಮವರೇ ಎಂದು ಭಾವಿಸಿ ವಿಶ್ವ ಮಾನವರಾಗಿ ಸಮಾಜ ಸೇವೆ ಮಾಡಬೇಕು. ನೃತ್ಯ ಭಜನೆಗೂ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.
ಹೇಮಾವತಿ ವೀ. ಹೆಗ್ಗಡೆ ಮತ್ತು ಡಿ. ಹಷೇಂದ್ರ ಕುಮಾರ್ ಉಪಸ್ಥಿತರಿದ್ದರು. ಭಜನಾ ಕಮ್ಮಟದ ಕಾಯದರ್ಶಿ ಎ.ವಿ. ಶೆಟ್ಟಿ ವರದಿ ಮಂಡಿಸಿದರು.
ಭಜನಾ ಕಮ್ಮಟದ ಸಂಚಾಲಕ ಸುಬ್ರಹ್ಮಣ್ಯ ಪ್ರಸಾದ್ ಸ್ವಾಗತಿಸಿ, ನಿವೃತ್ತ ಮುಖ್ಯ ಶಿಕ್ಷಕ ಪದ್ಮರಾಜ್ ವಂದಿಸಿದರು. ಧರ್ಮಸ್ಥಳದ ಎಸ್.ಡಿ.ಎಂ. ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕಿ ಪದ್ಮಶ್ರೀ ಕಾರ್ಯಕ್ರಮ ನಿರ್ವಹಿಸಿದರು.
111 ಮಂದಿ ಪುರುಷರು ಹಾಗೂ 72 ಮಹಿಳೆಯರು ಸೇರಿದಂತೆ ಒಟ್ಟು 182 ಮಂದಿ ಶಿಬಿರಾರ್ಥಿಗಳು ಕಮ್ಮಟದಲ್ಲಿ ಭಾಗವಹಿಸುತ್ತಿದ್ದಾರೆ.