ಭಾರತೀಯ ರತ್ನ ಮತ್ತು ಆಭರಣ ಸಂಸ್ಥೆಯಿಂದ ಗ್ರಾಮೀಣ ಪ್ರತಿಭೆಗಳಿಗೆ ಸ್ವಉದ್ಯೋಗದ ಸುವರ್ಣಾವಕಾಶ

ಲೋಕಬಂಧು ನ್ಯೂಸ್ ಉಡುಪಿ, ಏ.28
2016ರಲ್ಲಿ ಸಣ್ಣ ಆವರಣದಲ್ಲಿ ಹಿಂಜರಿಕೆಯೊಂದಿಗೆ ಆರಂಭವಾದ ಭಾರತೀಯ ರತ್ನ ಮತ್ತು ಆಭರಣ ಸಂಸ್ಥೆ (ಐಐಜಿಜೆ)ಯು ಹತ್ತು ವರ್ಷದಲ್ಲಿ ಹಲವಾರು ಗ್ರಾಮೀಣ ಪ್ರತಿಭೆಗಳಿಗೆ ಉದ್ಯೋಗಾವಕಾಶ ನೀಡಿದೆ ಎಂದು ಭಾರತ ಸರ್ಕಾರದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.ಭಾರತೀಯ ರತ್ನಗಳು ಹಾಗೂ ಆಭರಣ ಸಂಸ್ಥೆಯ ನೂತನ ಕಚೇರಿಯನ್ನು ಉದ್ಘಾಟಿಸಿ, ಅಂಬಲಪಾಡಿ ಶ್ಯಾಮಿಲಿ ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.


ಉದ್ಯಮ ನೇತೃತ್ವದ ಕೌಶಲ್ಯ ಯುವಕರ ಜೀವನವನ್ನು ಹೇಗೆ ಪರಿವರ್ತಿಸುತ್ತದೆ ಮತ್ತು ಅವಕಾಶಗಳನ್ನು ಸೃಷ್ಟಿಸುತ್ತದೆ ಎಂಬುದಕ್ಕೆ ಉಡುಪಿ ಐಐಜಿಜೆ ಉತ್ತಮ ಉದಾಹರಣೆ. ಈ ಸಂಸ್ಥೆ ವಿದ್ಯಾರ್ಥಿಗಳಿಗೆ ಉದ್ಯೋಗಾರ್ಹ ಕೌಶಲ್ಯಗಳು, ಉದ್ಯಮಶೀಲತೆ ಅವಕಾಶಗಳು ಮತ್ತು ಸಮೃದ್ಧಿಯ ಹಾದಿಗಳೊಂದಿಗೆ ಸಬಲೀಕರಣಗೊಳಿಸುತ್ತಿದೆ ಎಂದರು.


ಕಳೆದ ಸಾಲಿನಲ್ಲಿ 600 ವಿದ್ಯಾರ್ಥಿಗಳು ಈ ಸಂಸ್ಥೆಯಲ್ಲಿ ತರಬೇತಿ ಪಡೆದಿದ್ದಾರೆ. ಕರಾವಳಿಯ ರತ್ನಗಿರಿಯಿಂದ ಕೇರಳದ ವರೆಗೆ ರತ್ನ ಮತ್ತು ಆಭರಣ ತಯಾರಿಕೆಯಲ್ಲಿ ಆಸಕ್ತಿ ಇರುವ ಪ್ರತಿಭೆಗಳಿಗೆ ಅದರಲ್ಲೂ ಗ್ರಾಮೀಣ ಭಾಗದವರಿಗೆ ಈ ಸಂಸ್ಥೆಯಿಂದ ಅನುಕೂಲವಾಗುತ್ತಿದೆ ಎಂದ ಅವರು, ಉಡುಪಿ ಐಐಜಿಜೆ ಕೇಂದ್ರ, ಉಡುಪಿ- ಮಂಗಳೂರು ಮಾತ್ರವಲ್ಲದೆ ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳ ವಿದ್ಯಾರ್ಥಿಗಳು ತರಬೇತಿ ಹೊಂದಿ, ತಮ್ಮದೇ ಆದ ಆಭರಣ ತಯಾರಿಕಾ ಅಂಗಡಿಗಳನ್ನು ತೆರೆದು ಸ್ವಉದ್ಯೋಗ ಕಂಡುಕೊಂಡಿದ್ದಾರೆ.


ಸಂಸ್ಥೆಯಲ್ಲಿ ವೃತ್ತಿಪರ ತರಬೇತುದಾರರಿಂದ ತರಬೇತಿ ನೀಡಲಾಗುತ್ತಿದ್ದು, ವಿಶೇಷವಾಗಿ ಮಹಿಳೆಯರು ಈ ಕ್ಷೇತ್ರದಲ್ಲಿ ತೊಡಗಿಕೊಳ್ಳಬೇಕು. ಭಾರತೀಯ ಸಾಂಪ್ರದಾಯಿಕ ಆಭರಣಗಳು ಮಧ್ಯಪ್ರಾಚ್ಯ ಮತ್ತು ಅಮೆರಿಕಾ ದೇಶಗಳಲ್ಲಿ ಹೆಚ್ಚಿನ ಬೇಡಿಕೆ ಹೊಂದಿವೆ. ಜಿಲ್ಲೆಯ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಬೇಕು ಎಂದರು.


ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯಡಿ 8 ಸಾವಿರ ಕುಶಲಕರ್ಮಿಗಳಿಗೆ 80 ಕೋಟಿ ರೂ. ಸಾಲ ನೀಡಲಾಗಿದ್ದು, ಯೋಜನೆ ಅನುಷ್ಠಾನದಲ್ಲಿ ರಾಜ್ಯದಲ್ಲೇ ಉಡುಪಿ ಚಿಕ್ಕಮಗಳೂರು ಪ್ರಥಮ ಸ್ಥಾನದಲ್ಲಿದೆ ಎಂದರು.


ರಾಷ್ಟ್ರೀಕೃತ ಬ್ಯಾಂಕುಗಳು ಜನರ ಮನೆ ಬಾಗಿಲಿಗೆ ತಲುಪಬೇಕು, ದೈನಂದಿನ ಚಟುವಟಿಕೆಯಲ್ಲಿ ಅಧಿಕಾರಿಗಳು ಕನ್ನಡದಲ್ಲಿ ಮಾತನಾಡಬೇಕು ಎಂದ ಅವರು ಕಾಫಿ ಬೆಳೆಗಾರರ ಸಮಸ್ಯೆ ಪರಿಹರಿಸುವಂತೆ ಎಂದು ಸಚಿವರಲ್ಲಿ ಮನವಿ ಮಾಡಿದರು.


ಶಾಸಕ ಯಶಪಾಲ್ ಸುವರ್ಣ ಮಾತನಾಡಿ, ಭಾರತದ ರತ್ನ ಮತ್ತು ಆಭರಣ ತಯಾರಿಕೆ ಉದ್ಯಮ ದೇಶದ ಆರ್ಥಿಕತೆಗೆ ಉತ್ತೇಜನ ನೀಡುವ ಜೊತೆಗೆ ಅಪರಿಮಿತ ಉದ್ಯೋಗಾವಕಾಶ ಕಲ್ಪಿಸುತ್ತಿದೆ. ರತ್ನ ಮತ್ತು ಆಭರಣ ತಯಾರಿಯಲ್ಲಿ ಜಿಲ್ಲೆ ಮುಂಚೂಣಿಯಲ್ಲಿದ್ದು, ಇಲ್ಲಿ ತಯಾರಾದ ಆಭರಣಗಳು ದೇಶದ ಹಲವು ದೇವಸ್ಥಾನಗಳಲ್ಲಿ ಸಮರ್ಪಿಸಲ್ಪಟ್ಟಿದೆ. ಆಭರಣ ತಯಾರಿಕೆ ಬೆಳೆಯುತ್ತಿರುವ ಉದ್ಯಮವಾಗಿದ್ದು ಜಿಲ್ಲೆಯ ಜನರು ಈ ಕ್ಷೇತ್ರದಲ್ಲಿ ಹೆಚ್ಚು ತೊಡಗಿಕೊಳ್ಳಬೇಕು ಎಂದರು.


ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮೊದಲಾದವರಿದ್ದರು.


ಸಂಸ್ಥೆಯಲ್ಲಿ ವಿಶ್ವಕರ್ಮ ಯೋಜನೆಯಡಿ ತರಬೇತಿ ಪೂರೈಸಿದ ಅತ್ಯುತ್ತಮ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.


ಇದೇ ಸಂದರ್ಭದಲ್ಲಿ ಪ್ರಯೋಗಶಾಲೆಯಲ್ಲಿ ತಯಾರಾಗುವ ವಜ್ರೋದ್ಯಮವನ್ನು ಉತ್ತೇಜಿಸಲು ವಿಶೇಷ ಪಠ್ಯಕ್ರಮ ಅಳವಡಿಸಲು ಚೆನ್ನೈನ ಐಐಟಿ ಮದ್ರಾಸ್ ಮತ್ತು ಐಐಜಿಜೆ ನಡುವೆ ಒಡಂಬಡಿಕೆ ಮಾಡಿಕೊಳ್ಳಲಾಯಿತು.


ಜಿಜೆಇಪಿಸಿ ಅಧ್ಯಕ್ಷ ಕಿರೀಟ್ ಬನ್ಸಾಲಿ ಸ್ವಾಗತಿಸಿ, ಉಪಾಧ್ಯಕ್ಷ ಶೌನಕ್ ಪಾರಿಖ್ ವಂದಿಸಿದರು.