ಲೋಕಬಂಧು ನ್ಯೂಸ್ | ಉಡುಪಿ, ಏ.18
ಮಣಿಪಾಲ- ಪೆರಂಪಳ್ಳಿ ರಸ್ತೆಯಲ್ಲಿರುವ ಸಾಯಿರಾಧಾ ಟೌನ್ ಶಿಪ್ ನಾಗಬನದ ಶ್ರೀ ನಾಗದೇವರ ಸಾನ್ನಿಧ್ಯದಲ್ಲಿ ನಾಗಪಾತ್ರಿ ವೇ|ಮೂ| ಕಕ್ಕುಂಜೆ ನಾಗಾನಂದ ವಾಸುದೇವ ಆಚಾರ್ಯ ನೇತೃತ್ವದಲ್ಲಿ ಶನಿವಾರ ಹಮ್ಮಿಕೊಳ್ಳಲಾದ ಅಷ್ಟಪವಿತ್ರ ಶ್ರೀಮನ್ನಾಗಮಂಡಲೋತ್ಸವ' ವೈಭವದಿಂದ ನಡೆಯಿತು.
ಆ ಪ್ರಯುಕ್ತ ಮಧ್ಯಾಹ್ನ ಪ್ರಸನ್ನ ಪೂಜೆ, ಪಲ್ಲಪೂಜೆ ನಡೆದು ಮಹಾಅನ್ನಸಂತರ್ಪಣೆ ನೆರವೇರಿತು.
ಬೆಳಗ್ಗೆ ವಿವಿಧ ಧಾರ್ಮಿಕ ಪ್ರಕ್ರಿಯೆಗಳೊಂದಿಗೆ ಶ್ರೀದೇವತಾ ಪ್ರಾರ್ಥನೆ, ಗೋಪೂಜೆ, ಪ್ರಧಾನ ಪ್ರಾಯಶ್ಚಿತ್ತಾದಿ ಹೋಮಗಳು, ಕಲಶಾಭಿಷೇಕ, ತನು-ತಂಬಿಲ ಸೇವೆ, ಸಾನ್ನಿಧ್ಯದ ಪಂಜುರ್ಲಿ ದೈವಕ್ಕೆ ವಿಶೇಷ ಪೂಜೆ, ಮಹಾಪೂಜೆ, ವಟು ಬ್ರಾಹ್ಮಣ ಸುವಾಸಿನಿ ಆರಾಧನೆ, ನಾಗದರ್ಶನ, ಮಧ್ಯಾಹ್ನ ಪ್ರಸನ್ನಪೂಜೆ, ಪಲ್ಲಪೂಜೆ, ತೀರ್ಥಪ್ರಸಾದ ವಿತರಣೆ ನಡೆಯಿತು.
ಮಧ್ಯಾಹ್ನ 12 ಗಂಟೆಯಿಂದ ಆರಂಭಗೊಂಡ ಅನ್ನಸಂತರ್ಪಣೆ ರಾತ್ರಿ 12ರ ತನಕ ನಡೆದಿದ್ದು, ಸುಮಾರು 10 ಸಾವಿರಕ್ಕೂ ಹೆಚ್ಚು ಭಕ್ತರು ಅನ್ನ ಪ್ರಸಾದ ಸ್ವೀಕರಿಸಿದರು. ಅನ್ನಪ್ರಸಾದ ವ್ಯವಸ್ಥೆಯ ನೇತೃತ್ವವನ್ನು ಮಂಜುನಾಥ ಹೆಬ್ಟಾರ್ ವಹಿಸಿದ್ದರು.
ನಾಗಮಂಡಲ ಚಪ್ಪರದ ವೇದಿಕೆಯಲ್ಲಿ ಮಧ್ಯಾಹ್ನ 12ರಿಂದ 2 ಗಂಟೆ ವರೆಗೆ ಸಂಗೀತ ಕಾರ್ಯಕ್ರಮದಂಗವಾಗಿ ಮಧೂರು ನಾರಾಯಣ ಸರಳಾಯ ಮತ್ತು ಬಳಗದವರಿಂದ ಭಕ್ತಿ ಸಂಗೀತ ಕಾರ್ಯಕ್ರಮ ಜರಗಿತು. ಗಾಯಕರಾಗಿ ಮಧೂರು ನಾರಾಯಣ ಸರಳಾಯ, ಕಾವ್ಯಾ ಸೀತಾರಾಮ, ವಯೊಲಿನ್' )ನಲ್ಲಿ ಶರ್ಮಿಳಾ ರಾವ್, ಕೀಬೋರ್ಡ್'ನಲ್ಲಿ ಮುರಳೀಧರ ಕೆ., ಮೃದಂಗದಲ್ಲಿ ಬಾಲಚಂದ್ರ ಭಾಗವತ್, ತಬಲಾದಲ್ಲಿ ಮಾಧವ ಆಚಾರ್ಯ ಸಹಕರಿಸಿದ್ದರು.
ನಾಗಮಂಡಲೋತ್ಸವ ನೆರವೇರುವ ಭವ್ಯ ವೇದಿಕೆಯನ್ನು ಹೂ, ಹಣ್ಣುಗಳಿಂದ ವಿಶೇಷವಾಗಿ ಅಲಂಕರಿಸಲಾಗಿತ್ತು.
ಸೇವಾಕರ್ತರಾದ ಮನೋಹರ ಎಸ್. ಶೆಟ್ಟಿ, ರವಿ ಎಸ್. ಶೆಟ್ಟಿ ಕುಟುಂಬಸ್ಥರು, ಗಣ್ಯರು, ಪ್ರಮುಖರು, ಅಪಾರ ಸಂಖ್ಯೆಯ ಭಕ್ತರು ಭಾಗವಹಿಸಿದ್ದರು.
ರಾತ್ರಿ ನಾಗಮಂಡಲೋತ್ಸವ ನಡೆಯಿತು.