ಲೋಕಬಂಧು ನ್ಯೂಸ್ | ಉಡುಪಿ, ಏ.15
ಉಡುಪಿ ಕ್ರೈಸ್ತ ಧರ್ಮಕ್ಷೇತ್ರದ ದ್ವಿತೀಯ ಧರ್ಮಾಧ್ಯಕ್ಷ (ಬಿಷಪ್)ರಾಗಿ ಆಯ್ಕೆಯಾಗಿರುವ ವಂ.ಡಾ.ಲೆಸ್ಲಿ ಕ್ಲಿಫರ್ಡ್ ಡಿ'ಸೋಜಾ ಅವರ ಪೀಠಾರೋಹಣ ಮತ್ತು ಪಟ್ಟಾಭಿಷೇಕ ಮಹೋತ್ಸವ ಏ.20ರಂದು ಬೆಳಗ್ಗೆ 9 ಗಂಟೆಗೆ ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜು ಮೈದಾನದಲ್ಲಿ ನೆರವೇರಲಿದೆ ಎಂದು ಉಡುಪಿ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ವಂ.ಡೆನಿಸ್ ಡೆಸಾ ತಿಳಿಸಿದ್ದಾರೆ.
ಬುಧವಾರ ನಗರದ ಶೋಕಮಾತಾ ಚರ್ಚಿನ ಆವೆ ಮರಿಯಾ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗೋವಾ ಮತ್ತು ದಮನ್ ಮಹಾಧರ್ಮಪ್ರಾಂತ್ಯದ ಮಹಾಧರ್ಮಾಧ್ಯಕ್ಷ ಹಾಗೂ ಎಫ್ಎಬಿಸಿ ಮತ್ತು ಸಿಸಿಬಿಐ ಅಧ್ಯಕ್ಷ ಕಾರ್ಡಿನಲ್ ಫಿಲಿಪ್ ನೆರಿ ಫೆರಾವೊ ನೇತೃತ್ವದಲ್ಲಿ ಪವಿತ್ರ ಬಲಿಪೂಜೆ ಸಂದರ್ಭದಲ್ಲಿ ನೂತನ ಧರ್ಮಾಧ್ಯಕ್ಷರಿಗೆ ಪಟ್ಟಾಭಿಭಿಷೇಕ ನಡೆಯಲಿದೆ. ಬೆಂಗಳೂರು ಮಹಾಧರ್ಮಾಧ್ಯಕ್ಷ ಡಾ.ಪೀಟರ್ ಮಚಾದೊ ಹಾಗೂ ಉಡುಪಿ ಧರ್ಮಕ್ಷೇತ್ರದ ಪ್ರೇಷಿತ ಆಡಳಿತಾಧಿಕಾರಿ ಡಾ.ಜೆರಾಲ್ಡ್ ಐಸಾಕ್ ಲೋಬೊ ಸಹ ಅಭಿಷೇಕಕಾರರಾಗಿ ಭಾಗವಹಿಸಲಿದ್ದಾರೆ.
5 ಸಾವಿರಕ್ಕೂ ಅಧಿಕ ಮಂದಿ ಭಾಗಿ
ಈ ಐತಿಹಾಸಿಕ ಸಮಾರಂಭದಲ್ಲಿ ಭಾರತ ಮತ್ತು ನೇಪಾಳದ ಅಪೊಸ್ತೊಲಿಕ್ ನುನ್ಸಿಯೋ (ಪೋಪ್ ಅವರ ವ್ಯಾಟಿಕನ್ ರಾಯಭಾರಿ) ಡಾ.ಲಿಯೋಪೋಲ್ಡೊ ಗಿರೆಲ್ಲಿ, ವಿವಿಧ ಮಹಾಧರ್ಮಾಧ್ಯಕ್ಷರು, ಧರ್ಮಾಧ್ಯಕ್ಷರು, ಧರ್ಮಗುರುಗಳು, ಧಾರ್ಮಿಕ ಸಹೋದರ- ಸಹೋದರಿಯರು, ರಾಜಕೀಯ ನಾಯಕರು, ವಿವಿಧ ಸಮುದಾಯಗಳ ಗಣ್ಯರು ಹಾಗೂ ಸಾವಿರಾರು ಭಕ್ತರು ಸೇರಿದಂತೆ ಸುಮಾರು 5 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆ ಇದೆ.
ಪೌರಸಂಮಾನ
ಧಾರ್ಮಿಕ ವಿಧಿ- ವಿಧಾನಗಳ ನಂತರ ನೂತನ ಧರ್ಮಾಧ್ಯಕ್ಷರಿಗೆ ಪೌರ ಸಂಮಾನ ಕಾರ್ಯಕ್ರಮ ನಡೆಯಲಿದ್ದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಉಡುಪಿ ಶಾಸಕ ಯಶಪಾಲ್ ಸುವರ್ಣ ಸೇರಿದಂತೆ ವಿವಿಧ ಗಣ್ಯರು ಜಿಲ್ಲೆಯ ನಾಗರಿಕರ ಪರವಾಗಿ ಅಭಿನಂದನೆ ಸಲ್ಲಿಸಲಿದ್ದಾರೆ ಎಂದರು.
ಮಹತ್ವದ ಉಡುಪಿ ಕ್ರೈಸ್ತ ಧರ್ಮಕ್ಷೇತ್ರ
ಉಡುಪಿ ಕ್ರೈಸ್ತ ಧರ್ಮಕ್ಷೇತ್ರವನ್ನು 2012ರ ಜು. 16ರಂದು ಪೋಪ್ ಬೆನೆಡಿಕ್ಟ್ 14 ಅವರು ಘೋಷಣೆ ಮಾಡಿದ್ದರು. ಅಂದು ಶಿವಮೊಗ್ಗ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾಗಿದ್ದ ಡಾ. ಜೆರಾಲ್ಡ್ ಐಸಾಕ್ ಲೋಬೊ ಅವರನ್ನು ಮೊದಲ ಧರ್ಮಾಧ್ಯಕ್ಷರನ್ನಾಗಿ ನೇಮಿಸಲಾಯಿತು.
ಕಾರ್ಕಳ, ಕುಂದಾಪುರ, ಕಾಪು, ಬೈಂದೂರು, ಹೆಬ್ರಿ, ಬ್ರಹ್ಮಾವರ ಹಾಗೂ ಉಡುಪಿ ತಾಲೂಕುಗಳನ್ನು ಈ ಕ್ರೈಸ್ತ ಧರ್ಮಕ್ಷೇತ್ರ ಒಳಗೊಂಡಿದೆ. ಬೆಂಗಳೂರು ಮಹಾಧರ್ಮಪ್ರಾಂತ್ಯದ ಅಧೀನದಲ್ಲಿರುವ ಈ ಧರ್ಮಕ್ಷೇತ್ರದ ಪ್ರಧಾನ ಇಗರ್ಜಿ ಕಲ್ಯಾಣಪುರದ ಮಿಲಾಗ್ರಿಸ್ ಕ್ಯಾಥೆಡ್ರಲ್ ಆಗಿದೆ.
ಸುಮಾರು 5,924 ಚದರ ಕಿ.ಮೀ. ವ್ಯಾಪ್ತಿಯ ಈ ಧರ್ಮಕ್ಷೇತ್ರದಲ್ಲಿ 60,338 ಕ್ಯಾಥೋಲಿಕ್ ಭಕ್ತರು ವಾಸಿಸುತ್ತಿದ್ದಾರೆ. 51 ಚರ್ಚುಗಳು, ಒಂದು ಬಸಿಲಿಕಾ, ಮೂರು ತೀರ್ಥಕ್ಷೇತ್ರಗಳು ಹಾಗೂ ಏಳು ಉಪಕೇಂದ್ರಗಳನ್ನು ಒಳಗೊಂಡಿದೆ.
ಶಿಕ್ಷಣ ಕ್ಷೇತ್ರದಲ್ಲಿ ನರ್ಸರಿ ಶಾಲೆಗಳು, ಪ್ರಾಥಮಿಕ ಮತ್ತು ಪ್ರೌಢಶಾಲೆ, ಕಾಲೇಜುಗಳು ಸೇರಿದಂತೆ ಅನೇಕ ಶಿಕ್ಷಣ ಸಂಸ್ಥೆಗಳನ್ನು ನಿರ್ವಹಿಸುತ್ತಿದ್ದು, ಸಮಾಜಸೇವೆ ಕ್ಷೇತ್ರದಲ್ಲಿಯೂ ವೃದ್ಧಾಶ್ರಮಗಳು, ಆಸ್ಪತ್ರೆಗಳು, ಅನಾಥಾಶ್ರಮಗಳು ಹಾಗೂ ಪುನರ್ವಸತಿ ಕೇಂದ್ರಗಳನ್ನು ನಡೆಸುವ ಮೂಲಕ ಮಹತ್ವದ ಸೇವೆ ಸಲ್ಲಿಸುತ್ತಿದೆ.
ಧಾರ್ಮಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಉಡುಪಿ ಧರ್ಮಕ್ಷೇತ್ರ ಮಹತ್ವದ ಪಾತ್ರ ವಹಿಸಿದೆ ಎಂದು ಫಾ.ಡೇಸಾ ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಉಡುಪಿ ಧರ್ಮಪ್ರಾಂತ್ಯದ ಪ್ರೇಷಿತ ಆಡಳಿತಾಧಿಕಾರಿ ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ, ಕಾರ್ಯಕ್ರಮ ಸಂಚಾಲಕ ಹಾಗೂ ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್ ಧರ್ಮಗುರು ವಂ.ಫರ್ಡಿನಾಂಡ್ ಗೊನ್ಸಾಲ್ವಿಸ್, ಧರ್ಮಪ್ರಾಂತ್ಯದ ಕುಲಪತಿ ವಂ.ಸ್ಟೀವನ್ ಡಿ'ಸೋಜಾ, ಮಾಧ್ಯಮ ಸಂಯೋಜಕ ಮೈಕಲ್ ರೊಡ್ರಿಗಸ್ ಇದ್ದರು.
ಡಾ.ಲೆಸ್ಲಿ ಡಿ'ಸೋಜಾ ನೂತನ ಬಿಷಪ್
ಪೋಪ್ ಲಿಯೋ 14 ಅವರು ಕಳೆದ ಜ. 31ರಂದು ಡಾ.ಲೆಸ್ಲಿ ಸಿ. ಡಿ'ಸೋಜಾ ಅವರನ್ನು ಉಡುಪಿ ಧರ್ಮಕ್ಷೇತ್ರದ ನೂತನ ಧರ್ಮಾಧ್ಯಕ್ಷರನ್ನಾಗಿ ನೇಮಿಸಿದ್ದಾರೆ. ಅವರು ಉಡುಪಿ ಜಿಲ್ಲೆಯ ದ್ವಿತೀಯ ಬಿಷಪ್.
1962ರ ಆ. 19ರಂದು ಎರ್ಮಾಳಿನಲ್ಲಿ ಜನಿಸಿದ ಅವರು ಮೈಸೂರು ವಿಶ್ವವಿದ್ಯಾಲಯದಿಂದ ಕಲಾ ಪದವಿ ಪಡೆದಿದ್ದಾರೆ. ಮಂಗಳೂರು ಸೈಂಟ್ ಜೋಸೆಫ್ ಇಂಟರ್ ಡಯೋಸಿಸನ್ ಗುರುಮಠದಲ್ಲಿ ತತ್ವಶಾಸ್ತ್ರ ಹಾಗೂ ಧರ್ಮಶಾಸ್ತ್ರ ಅಧ್ಯಯನ ನಡೆಸಿ, ಬೆಲ್ಜಿಯಂನ ಲೂವನ್ ಕ್ಯಾಥೋಲಿಕ್ ವಿಶ್ವವಿದ್ಯಾಲಯದಿಂದ ನೈತಿಕ ಧರ್ಮಶಾಸ್ತ್ರದಲ್ಲಿ ಡಾಕ್ಟರೇಟ್ ಪಡೆದಿದ್ದಾರೆ.
1990ರ ಮೇ 10ರಂದು ಧರ್ಮಗುರುಗಳಾಗಿ ನೇಮಕಗೊಂಡ ಅವರು ಮಂಗಳೂರು ಹಾಗೂ ಉಡುಪಿ ಧರ್ಮಕ್ಷೇತ್ರಗಳಲ್ಲಿ ಸಹಾಯಕ ಧರ್ಮಗುರುಗಳಾಗಿ, ಪ್ರಾಧ್ಯಾಪಕ ಹಾಗೂ ವಿವಿಧ ಚರ್ಚುಗಳಲ್ಲಿ ಧರ್ಮಗುರುಗಳಾಗಿ ಸೇವೆ ಸಲ್ಲಿಸಿದ್ದಾರೆ.
ಧರ್ಮ ಸಮನ್ವಯತೆಗೆ ಡಾ.ಲೋಬೊ ಕೊಡುಗೆ
ನಿವೃತ್ತ ಬಿಷಪ್ ಡಾ.ಜೆರಾಲ್ಡ್ ಐಸಾಕ್ ಲೋಬೊ 2012ರಿಂದ 2026ರ ವರೆಗೆ 13 ವರ್ಷ ಕಾಲ ಉಡುಪಿ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾಗಿ ಸೇವೆ ಸಲ್ಲಿಸಿ ಇದೀಗ ನಿವೃತ್ತರಾಗಿದ್ದಾರೆ.
ತಮ್ಮ ಸೇವಾವಧಿಯಲ್ಲಿ ಯುವಕರು, ಬಡವರು ಮತ್ತು ಹಿಂದುಳಿದವರ ಬಗ್ಗೆ ವಿಶೇಷ ಕಾಳಜಿ ತೋರಿದ ಅವರು ಸರಳತೆ, ವಿನಯ ಹಾಗೂ ಸೌಮ್ಯ ಸ್ವಭಾವದಿಂದ ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ.
ಜಿಲ್ಲೆಯಲ್ಲಿ ಎಲ್ಲಾ ಧರ್ಮಗಳೊಂದಿಗೆ ಅತ್ಯುತ್ತಮ ಸಂಬಂಧ ಹೊಂದಿ ಸರ್ವ ಧರ್ಮ ಸಮನ್ವಯತೆಗೆ ವಿಶೇಷ ಕೊಡುಗೆ ನೀಡಿದ್ದಾರೆ.
.jpg)
.jpg)
.jpg)