
ಆಕ್ರೋಶಿತರ ವಿರುದ್ಧ ಕೇಸು ದಾಖಲು
Friday, November 17, 2023
ಉಡುಪಿ, ನ.17 (ಲೋಕಬಂಧು ವಾರ್ತೆ): ನೇಜಾರು ತೃಪ್ತಿ ಲೇಔಟ್ ನಲ್ಲಿ ನಾಲ್ವರನ್ನು ಹತ್ಯೆ ಮಾಡಿದ ಆರೋಪಿ ಪ್ರವೀಣ್ ಅರುಣ್ ಚೌಗಲೆಯನ್ನು ಪೊಲೀಸರು ಗುರುವಾರ ಸ್ಥಳ ಮಹಜರಿಗಾಗಿ ಕೃತ್ಯ ಎಸಗಿದ ನೇಜಾರಿನ ಮನೆಗೆ ಕರೆತಂದ ವೇಳೆ ಸುಮಾರು 30ರಿಂದ 40 ಮಂದಿ ಗುಂಪು ಕಟ್ಟಿಕೊಂಡು ಕರ್ತವ್ಯಕ್ಕೆ ಅಡ್ಡಿಪಡಿಸಿರುವ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.ವಾಪಾಸಾಗುವ ಸಂದರ್ಭ ಭಾರೀ ಸಂಖ್ಯೆಯಲ್ಲಿ ಸೇರಿದ್ದ ಸಾರ್ವಜನಿಕರು ಆರೋಪಿಗೆ ಹಲ್ಲೆ ನಡೆಸಲು ಮುಂದಾದಾಗ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದರು.
ಆರೋಪಿಯನ್ನು ವಾಹನದಿಂದ ಕೆಳಗೆ ಇಳಿಸುತ್ತಿದ್ದಂತೆಯೇ ಜಮಾಯಿಸಿದ್ದ 100ರಿಂದ 200 ಮಂದಿ ಸಾರ್ವಜನಿಕರು ಪ್ರವೀಣ್ ನನ್ನು ಗಲ್ಲಿಗೇರಿಸಿ ಎಂದು ಘೋಷಣೆ ಕೂಗಿದ್ದರು.
ತನಿಖೆ ಪ್ರಕ್ರಿಯೆ ಮುಗಿಸಿ ಆರೋಪಿಯನ್ನು ಇಲಾಖಾ ವಾಹನದಲ್ಲಿ ಕುಳ್ಳಿರಿಸಿ ಹೊರಡುವ ಹೊತ್ತಿಗೆ ಸುಮಾರು 30ರಿಂದ 40 ಮಂದಿ ಆರೋಪಿಯನ್ನು ನಮಗೆ ಕೊಡಿ, ಇಲ್ಲಿಯೇ ಶಿಕ್ಷೆ ನೀಡುತ್ತೇವೆ ಎಂದು ಇಲಾಖಾ ವಾಹನವನ್ನು ಅಡ್ಡ ಹಾಕಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದರು.
ಆ ವೇಳೆ ಕೆಎಸ್ಆರ್.ಪಿ ಕಾನ್ ಸ್ಟೇಬಲ್ ಒಬ್ಬರು ಆಯತಪ್ಪಿ ಚರಂಡಿಗೆ ಬಿದ್ದು ಗಾಯಗೊಂಡಿದ್ದಾರೆ. ಅವರನ್ನು ಕೂಡಲೇ ಆಸ್ಪತ್ರೆಗೆ ಕಳುಹಿಸಿ ಚಿಕಿತ್ಸೆ ನೀಡಲಾಗಿದೆ.
ಗಲಭೆ ನಡೆಸಿದ್ದಕ್ಕಾಗಿ ಎಫ್‌ಐಆರ್ ದಾಖಲಿಸಿದ್ದೇವೆ. ಗಲಭೆಗೆ ಪ್ರೇರೇಪಿಸಿದವರ ವಿರುದ್ಧ ಮಾತ್ರ ಕ್ರಮ ಕೈಗೊಳ್ಳಲಾಗುವುದು. ವೀಕ್ಷಿಸುತ್ತಿದ್ದ ಸ್ಥಳೀಯ ಸಾರ್ವಜನಿಕರ ಮೇಲೆ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾl ಕೆ. ಅರುಣ್ ತಿಳಿಸಿದ್ದಾರೆ.