CPI(M): ನೇಜಾರು ಕೊಲೆ ಪ್ರಕರಣ: ಆರೋಪಿಯ ಕೂಲಂಕಷ ತನಿಖೆಯಾಗಲಿ
Friday, November 17, 2023
ಉಡುಪಿ, ನ.17 (ಲೋಕಬಂಧು ವಾರ್ತೆ): ಜಿಲ್ಲೆಯ ಜನತೆಯನ್ನು ಬೆಚ್ಚಿಬೀಳಿಸಿದ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣದ ಆರೋಪಿಯ ಹಿನ್ನೆಲೆ ಬಗ್ಗೆ ಕೂಲಂಕಷ ತನಿಖೆ ನಡೆಯಬೇಕು ಎಂದು ಸಿಪಿಐ (ಎಂ) ಆಗ್ರಹಿಸಿದೆ.ಪ್ರಕರಣದ ಆರೋಪಿಯನ್ನು ಶೀಘ್ರ ಪತ್ತೆಹಚ್ಚಿದ ಉಡುಪಿ ಜಿಲ್ಲಾ ಪೋಲೀಸ್ ಇಲಾಖೆಯ ಎಲ್ಲರನ್ನೂ ಸಿಪಿಐ (ಎಂ) ಉಡುಪಿ ಜಿಲ್ಲಾ ಸಮಿತಿ ಅಭಿನಂದಿಸುವುದಾಗಿ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಏರ್ ಇಂಡಿಯಾ ಸಿಬ್ಬಂದಿಯೂ ಆಗಿರುವ ಆರೋಪಿ, ಸಹೋದ್ಯೋಗಿಯಾಗಿರುವ ಐನಾಝ್ ಮೇಲಿನ ಅಸೂಯೆ ಮತ್ತು ದ್ವೇಷವೇ ಘಟನೆಗೆ ಕಾರಣ ಎಂದು ವಿಚಾರಣೆಯಿಂದ ತಿಳಿದುಬರುತ್ತದೆ ಎಂದು ಪೋಲೀಸ್ ಅಧೀಕ್ಷರು ಹೇಳಿರುವುದಾಗಿ ವರದಿಯಾಗಿದೆ.
ವಿಚಾರಣೆಯನ್ನು ಅಷ್ಟಕ್ಕೇ ಸೀಮಿತಗೊಳಿಸಿದಲ್ಲಿ ಭಗ್ನಪ್ರೇಮಿಯ ಮಾನಸಿಕ ಅಸ್ವಸ್ಥತೆ ಕಾರಣ ಎಂದು ತೀರಾ ಸರಳ ನಿರ್ಧಾರಕ್ಕೆ ಬಂದಂತಾಗುತ್ತದೆ.
ಆದ್ದರಿಂದ ಆರೋಪಿಯ ಸಂಪೂರ್ಣ ಹಿನ್ನೆಲೆಯನ್ನು ವಿಚಾರಣೆಗೊಳಪಡಿಸುವ ಅಗತ್ಯ ಇದೆ ಎಂದು ಬಾಲಕೃಷ್ಣ ಶೆಟ್ಟಿ ಪ್ರತಿಪಾದಿಸಿದ್ದಾರೆ.
ಪೊಲೀಸ್ ಇಲಾಖೆಯ ಕರ್ತವ್ಯದಲ್ಲಿ ಮೂಗು ತೂರಿಸುವುದು ಸಿಪಿಐ(ಎಂ)ನ ಉದ್ದೇಶವಲ್ಲ. ಆದರೆ, ವಿವಾಹಿತನೂ ಆಗಿರುವ ಆರೋಪಿ ಇಷ್ಟೊಂದು ಹೀನಾಯ ಭಗ್ನಪ್ರೇಮಿಯಾಗಿ ನಾಲ್ವರ ಹತ್ಯೆಗೆ ಕಾರಣನಾಗುತ್ತಾನೆಯೇ ಎಂಬ ಸಂಶಯ ಸಹಜವಾಗಿಯೇ ಜನರ ಮನಸ್ಸಿನಲ್ಲಿ ಮೂಡುತ್ತದೆ.
ಹತ್ಯೆಯ ವಿರುದ್ದ ಜಿಲ್ಲೆಯ ಜನತೆ ಒಕ್ಕೊರಲಿನಿಂದ ಖಂಡಿಸುತ್ತಿರುವಾಗ, ಇದೊಂದು 'ವಿಶ್ವ ದಾಖಲೆ' ಎಂದು ವಿಜೃಂಬಿಸುವ ಮನಸ್ಸುಗಳು ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ಅಂಥವರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಿಪಿಐ(ಎಂ) ಒತ್ತಾಯಿಸಿದೆ.
ಈ ಸಂದಿಗ್ದ ಪರಿಸ್ಥಿತಿಯಲ್ಲಿ ಐಕ್ಯತೆ ಕಾಪಾಡುತ್ತಾ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಬೇಕು ಎಂದು ಜಿಲ್ಲೆಯ ಜನತೆಯಲ್ಲಿ ಸಿಪಿಐ(ಎಂ) ಮನವಿ ಮಾಡುವುದಾಗಿ ಬಾಲಕೃಷ್ಣ ಶೆಟ್ಟಿ ತಿಳಿಸಿದ್ದಾರೆ.