-->
ಕರಾವಳಿ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಹಕ್ಕೊತ್ತಾಯ

ಕರಾವಳಿ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಹಕ್ಕೊತ್ತಾಯ

ಕಾರ್ಕಳ, ನ.16 (ಲೋಕಬಂಧು ವಾರ್ತೆ): ರಾಜ್ಯದ ಪ್ರವಾಸೋದ್ಯಮದಲ್ಲಿ ಕರಾವಳಿ ಕರ್ನಾಟಕದ ಪಾತ್ರ ಮಹತ್ತರ. ಆದರೆ, ದೀಪದ ಕೆಳಗೆ ಕತ್ತಲು ಎಂಬಂತೆ ಕರಾವಳಿ ಜಿಲ್ಲೆಗಳಲ್ಲಿ ಪರಿಣಾಮಕಾರಿ ಅಭಿವೃದ್ಧಿಯಾಗಿಲ್ಲ. ಕರಾವಳಿ ಕರ್ನಾಟಕದ ಉಳ್ಳಾಲದಿಂದ ಕಾರವಾರ ವರೆಗಿನ ಸುಮಾರು 320 ಕಿ.ಮೀ ಸಮುದ್ರ ತೀರ ನಿರಂತರವಾಗಿ ಪ್ರತೀ ವರ್ಷ ಕಡಲ್ಕೊರೆತದ ಹೊಡೆತಕ್ಕೆ ಸಿಲುಕಿದ್ದರೂ ಈವರೆಗೂ ಕಡಲ್ಕೊರೆತ ತಡೆಗಟ್ಟುವ ನಿಟ್ಟಿನಲ್ಲಿ ಪರಿಣಾಮಕಾರಿ ಕ್ರಮಗಳನ್ನು ಕೈಗೊಂಡಿಲ್ಲ. ಅದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸೂಕ್ತ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು ಎಂದು ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಜಿಲ್ಲಾಧ್ಯಕ್ಷ ಡಿ. ಆರ್ ರಾಜು ಒತ್ತಾಯಿಸಿದರು.
ಗುರುವಾರ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಇತರ ಜಿಲ್ಲೆಗಳಿಗೆ ಹೋಲಿಸಿದರೆ ಅಭಿವೃದ್ಧಿ ವಿಚಾರದಲ್ಲಿ ಕರಾವಳಿ ಜಿಲ್ಲೆಗಳು ತೀರಾ ಹಿಂದುಳಿದಿವೆ.

ಪ್ರಮುಖವಾಗಿ ನಮ್ಮ ಜಿಲ್ಲೆಗಳಿಗೆ ಸಂಪರ್ಕ ಕೊಂಡಿಯಾಗಿರುವ ಪಶ್ಚಿಮ ಘಟ್ಟದ ಶ್ರೇಣಿಯ ರಸ್ತೆಗಳ ಅಭಿವೃದ್ಧಿಯಾಗಬೇಕು. ಎಲ್ಲಾ ಪ್ರಮುಖ ಸಂಪರ್ಕ ರಸ್ತೆಗಳು ಚತುಷ್ಪಥ ರಸ್ತೆಗಳಾಗಿ ಬದಲಾದಲ್ಲಿ ಮೂಲಸೌಕರ್ಯ ಅಭಿವೃದ್ಧಿಯಾಗುತ್ತದೆ. ಜೊತೆಗೆ ಪ್ರವಾಸೋದ್ಯಮವೂ ಬೆಳೆಯಲು ಸಾಧ್ಯವಿದೆ ಎಂದರು.
ಕಡಲ್ಕೊರೆತ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸುವ ನಿಟ್ಟಿನಲ್ಲಿ ಸ್ಥಳೀಯ ತಾಂತ್ರಿಕ ಪರಿಣಿತ ತಂತ್ರಜ್ಞರ ಜೊತೆ ಸಭೆ ನಡೆಸಿ, ಸೂಕ್ತ ಪರಿಹಾರ ಕಂಡುಕೊಳ್ಳಬೇಕಿದೆ ಎಂದರು.

ಅಲ್ಲದೇ, ಕರಾವಳಿ ಜಿಲ್ಲೆಗಳ ಯುವಕರಿಗೆ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ಹೊಸ ಕಂಪೆನಿಗಳು ಬರಬೇಕು. ಪ್ರಸ್ತುತ ಇರುವ ಎಂಆರ್‌ಪಿಎಲ್, ಯುಪಿಸಿಎಲ್ ವಿದ್ಯುತ್ ಕಂಪೆನಿಗಳಲ್ಲಿ ಶೇ. 95ರಷ್ಟು ಹೊರ ರಾಜ್ಯದವರೇ ತುಂಬಿದ್ದು, ಸ್ಥಳೀಯರು ಉದ್ಯೋಗದಿಂದ ವಂಚಿತರಾಗುತ್ತಿದ್ದಾರೆ.

ಆದ್ದರಿಂದ ಕರಾವಳಿ ಜಿಲ್ಲೆಗಳಲ್ಲಿ ಕೈಗಾರಿಕೆ ಹಾಗೂ ವಾಣಿಜ್ಯ ಚಟುವಟಿಕೆಗಳು ಬೆಳೆಯಬೇಕಿದೆ ಎಂದು ಡಿ.ಆರ್ ರಾಜು ಅಪೇಕ್ಷಿಸಿದರು.

ಪರಿಸರ ಸಂರಕ್ಷಣೆ, ನೆಲ, ಜಲದ ಸಂರಕ್ಷಣೆಯಲ್ಲಿ ನಮ್ಮ ಸಂಘಟನೆ ನಿರಂತರವಾಗಿ ಹೋರಾಟ ನಡೆಸಿಕೊಂಡು ಬಂದಿದೆ. ಅರಣ್ಯ ನಾಶ ತಡೆಯುವ ನಿಟ್ಟಿನಲ್ಲಿ ರುದ್ರಭೂಮಿಗಳಲ್ಲಿ ವಿದ್ಯುತ್ ಚಿತಾಗಾರ ನಿರ್ಮಿಸಬೇಕೆನ್ನುವುದು ಸರ್ಕಾರಕ್ಕೆ ನಮ್ಮ ಒತ್ತಾಯವಾಗಿದೆ ಎಂದರು.
ಈ ವಿಚಾರವಾಗಿ ನವೆಂಬರ್ 18ರಂದು ಬೆಳಗ್ಗೆ 10.30ಕ್ಕೆ ಉಡುಪಿಯ ಹೊಟೆಲ್ ಕಿದಿಯೂರು ಸಭಾಂಗಣದಲ್ಲಿ ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಉಸ್ತುವಾರಿ ಸಚಿವರು ಹಾಗೂ ಜನಪ್ರತಿನಿಧಿಗಳ ಸಭೆ ಕರೆಯಲಾಗಿದೆ.

ಕಾರ್ಯಕ್ರಮವನ್ನು ಮೀನುಗಾರಿಕೆ ಹಾಗೂ ಬಂದರು ಸಚಿವ ಮಾಂಕಾಳ ವೈದ್ಯ ಉದ್ಘಾಟಿಸಲಿದ್ದು, ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಅಧ್ಯಕ್ಷ ಎಲ್. ವಿ. ಅಮೀನ್ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕೇಂದ್ರ ಪ್ರವಾಸೋದ್ಯಮ ಮತ್ತು ಬಂದರು ಹಾಗೂ ಜಲಸಾರಿಗೆ ಸಚಿವ ಶ್ರೀಪಾದ ನಾಯ್ಕ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಶಾಸಕರಾದ ಯಶಪಾಲ್ ಸುವರ್ಣ ಮತ್ತು ಗುರ್ಮೆ ಸುರೇಶ್ ಶೆಟ್ಟಿ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ಡಿ. ಆರ್. ರಾಜು ವಿವರಿಸಿದರು.
ಸುದ್ಧಿಗೋಷ್ಟಿಯಲ್ಲಿ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಸಂಸ್ಥಾಪಕ ತೋನ್ಸೆ ಜಯಕೃಷ್ಣ ಎ.  ಶೆಟ್ಟಿ,  ಮುಂಡ್ಕೂರು ಸುರೇಂದ್ರ ಸಾಲಿಯಾನ್, ಅರುಣ್ ಶೆಟ್ಟಿ ಮೂಡುಬಿದಿರೆ, ಜಾದೂಗಾರ ಪ್ರೊ.ಶಂಕರ್ ಇದ್ದರು

Ads on article

Advertise in articles 1

advertising articles 2

Advertise under the article