
Nejaru case: ನೇಜಾರು ಪ್ರಕರಣ: ಪೊಲೀಸರ ಕ್ರಮ ಶ್ಲಾಘನೀಯ
Thursday, November 16, 2023
ಉಡುಪಿ, ನ.16 (ಲೋಕಬಂಧು ವಾರ್ತೆ): ನೇಜಾರು ತೃಪ್ತಿ ಲೇಔಟ್ ನಲ್ಲಿ ಅತ್ಯಂತ ಕ್ರೂರ ರೀತಿಯಲ್ಲಿ ನಡೆದ ಒಂದೇ ಕುಟುಂಬದ ನಾಲ್ಕು ಮಂದಿಯ ಅಮಾನುಷ ಹತ್ಯೆ ನಾಗರಿಕ ಸಮಾಜವನ್ನು ಬೆಚ್ಚಿ ಬೀಳಿಸಿದ್ದ ಘಟನೆಯಾಗಿದ್ದು, ಪೊಲೀಸ್ ಇಲಾಖೆ ಈ ಪ್ರಕರಣವನ್ನು ಸವಾಲಾಗಿ ಸ್ವೀಕರಿಸಿ ಸಿಸಿ ಟಿವಿ ಹಾಗೂ ಇನ್ನಿತರ ಮೂಲಗಳ ಜಾಡು ಹಿಡಿದು ಕೊಲೆ ಆರೋಪಿಯನ್ನು ಬಂಧಿಸಿರುವುದು ಶ್ಲಾಘನೀಯ ಎಂದು ಕೆಪಿಸಿಸಿ ವಕ್ತಾರೆ ವೆರೋನಿಕಾ ಕರ್ನೇಲಿಯೋ ತಿಳಿಸಿದ್ದಾರೆ.
ಇಡೀ ಕರಾವಳಿಯನ್ನು ಬೆಚ್ಚಿಬೀಳಿಸಿದ ಪ್ರಕರಣದಿಂದಾಗಿ ಜನತೆ ಭಯದಲ್ಲಿ ಬದುಕುವ ವಾತಾವರಣ ಸೃಷ್ಠಿಸಿತ್ತು. ಜಿಲ್ಲೆಯ ದಕ್ಷ ಪೋಲಿಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ. ಹಾಗೂ ಅವರ ತಂಡ ಘಟನೆ ನಡೆದ ಮೂರು ದಿನಗಳೊಳಗೆ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸ್ ಸಿಬಂದಿಗಳ ಪಾತ್ರ ಶ್ಲಾಘನೀಯ.
ಪೊಲೀಸರ ಪರಿಣಾಮಕಾರಿ ಕಾರ್ಯಾಚರಣೆಗೆ ಮೆಚ್ಚುಗೆ ಸೂಚಿಸುವ ಜೊತೆಗೆ ಮುಂದಿನ ದಿನಗಳಲ್ಲಿ ಇಂಥ ಭೀಭತ್ಸ ಘಟನೆಗಳು ಶಾoತಿ ಪ್ರಿಯರ ಜಿಲ್ಲೆ ಉಡುಪಿಯಲ್ಲಿ ಮರುಕಳಿಸದಂತೆ ಸಂಬಂಧಪಟ್ಟ ಇಲಾಖೆಗಳು ಕಟ್ಟುನಿಟ್ಟಿನ ಮುಂಜಾಗ್ರತಾ ಕ್ರಮಗಳನ್ನು ರೂಪಿಸುವುದು ಸೂಕ್ತ.
ಆರೋಪಿಯನ್ನು ಪೊಲೀಸರು ಬಂಧಿಸಿದ್ದು ಮುಂದಿನ ವಿಚಾರಣೆ ಪಾರದರ್ಶಕವಾಗಿ ನಡೆಯಲಿ. ಆ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ದೊರೆಯುವಂತಾಗಲಿ. ನೇಜಾರು ಭಾಗದ ಜನರು ಘಟನೆಯಿಂದ ಆತಂಕ ಮತ್ತು ನೋವಿನಿಂದಿದ್ದು, ಅವರ ಭಾವನೆಗಳು ಅರ್ಥವಾಗುತ್ತವೆಯಾದರೂ ಯಾವುದೇ ರೀತಿಯ ಅನುಚಿತ ವರ್ತನೆಗೆ ಕಾರಣವಾಗದೆ ಶಾಂತಿ ಕಾಪಾಡುವಂತೆ ವೆರೊನಿಕಾ ಮನವಿ ಮಾಡಿದ್ದಾರೆ.