-->
Kumaravyasa: ಕನ್ನಡದ ವ್ಯಾಸ ಗದುಗಿನ ನಾರ್ಣಪ್ಪ

Kumaravyasa: ಕನ್ನಡದ ವ್ಯಾಸ ಗದುಗಿನ ನಾರ್ಣಪ್ಪ

ಪಂಪ ಭಾರತದಲ್ಲಿ ಶ್ರೀಕೃಷ್ಣನ ಮಾನ್ಯತೆಯ ಕೊರತೆ ನಿವಾರಿಸಲು ಕೃಷ್ಣಕಥೆಯಾದ ಮಹಾಭಾರತವನ್ನು ಕನ್ನಡದಲ್ಲಿ ಉಣಬಡಿಸಿದ ಕನ್ನಡದ ವ್ಯಾಸ ಎಂದೇ ಪರಿಗಣಿತನಾದ ಕುಮಾರವ್ಯಾಸ, ಗದುಗಿನ ನಾರ್ಣಪ್ಪ.ಕುಮಾರ ವ್ಯಾಸನು ಹಾಡಿದನೆಂದರೆ
ಕಲಿಯುಗ ದ್ವಾಪರವಾಗುವುದು
ಭಾರತ ಕಣ್ಣಲಿ ಕುಣಿಯುವುದು 
ಮೈಯಲಿ ಮಿಂಚಿನ ಹೊಳೆ ತುಳುಕಾಡುವುದು
ಎಂಬುದಾಗಿ ಕನ್ನಡದ ಅಗ್ರಮಾನ್ಯ ಕವಿ ಕುವೆಂಪು,
ಕುಮಾರವ್ಯಾಸನ ಅಸಾಧಾರಣ ಪ್ರತಿಭೆಗೆ ಕನ್ನಡಿ ಹಿಡಿದಂತೆ ಚಿತ್ರಿಸಿದ್ದಾರೆ.


ಕುವೆಂಪು ಬರೆದ ಈ ಸಾಲುಗಳು ಕುಮಾರವ್ಯಾಸನ ಅದ್ವಿತೀಯ ಕಾವ್ಯಶಕ್ತಿಯನ್ನು ಬೆಳಗಿಸುತ್ತದೆ.


ಹುಬ್ಬಳ್ಳಿ ಸಮೀಪದ ಕೋಳಿವಾಡ ಎಂಬ ಗ್ರಾಮದಲ್ಲಿ ಜನಿಸಿದ್ದ ಕುಮಾರವ್ಯಾಸನ ಮೂಲ ಹೆಸರು ಗದುಗಿನ ನಾರ್ಣಪ್ಪ. ಆತ ಗದಗಿನ ಶ್ರೀ ವೀರನಾರಾಯಣಸ್ವಾಮಿಯ ಅನನ್ಯ ಭಕ್ತ.


ಕರ್ಣಾಟಕ ಭಾರತ ಕಥಾಮಂಜರಿ  ಕುಮಾರವ್ಯಾಸನ ಪ್ರಸಿದ್ಧ ಕೃತಿ. ಅದನ್ನು ಗದುಗಿನ ಭಾರತ, ಕನ್ನಡ ಭಾರತ, ಕುಮಾರವ್ಯಾಸ ಭಾರತ ಎಂದೂ ಕರೆಯಲಾಗುತ್ತದೆ.


ಮಹಾಕವಿ ವ್ಯಾಸರ ಸಂಸ್ಕೃತ ಮಹಾಭಾರತದ ಕನ್ನಡಾನುವಾದ ಎನ್ನಬಹುದಾದರೂ ಕುಮಾರವ್ಯಾಸ, ತನ್ನ ಕಾವ್ಯ ಸಾಮರ್ಥ್ಯವನ್ನು ಈ ಕೃತಿಯಲ್ಲಿ ಸಂಪೂರ್ಣವಾಗಿ ಧಾರೆಯೆರೆದಿದ್ದಾನೆ.


ಕನ್ನಡ ಸಾಹಿತ್ಯದಲ್ಲಿ ಮೇರುಕೃತಿಯಾಗಿರುವ, ನಡುಗನ್ನಡ ಭಾಷೆಯಲ್ಲಿ ರಚಿಸಲಾಗಿರುವ ಕುಮಾರವ್ಯಾಸ ಭಾರತ, ಸಂಸ್ಕೃತ ಮಹಾಭಾರತದ ಮೊದಲ ಹತ್ತು ಪರ್ವಗಳು,152 ಸಂಧಿ, 8,244 ಪದ್ಯಗಳನ್ನು ಒಳಗೊಂಡಿದೆ. ಸಂಪೂರ್ಣ ಕಾವ್ಯ ಭಾಮಿನೀ ಷಟ್ಪದಿ ಛಂದಸ್ಸಿನಲ್ಲಿ ರಚಿತವಾಗಿದ್ದು ಕುಮಾರವ್ಯಾಸನ ಅಪಾರವಾದ ಕಾವ್ಯ ಪ್ರತಿಭೆ ಅಭಿವ್ಯಕ್ತಿಗೊಂಡಿವೆ.


ಕುಮಾರವ್ಯಾಸನ ರೂಪಕಗಳ ವೈವಿಧ್ಯತೆ ಮತ್ತು ಆಳ ಅಪಾರವಾಗಿದ್ದು ಆ ಕಾರಣದಿಂದಾಗಿ  ರೂಪಕ ಸಾಮ್ರಾಜ್ಯ ಚಕ್ರವರ್ತಿ ಎಂದು ಕುಮಾರವ್ಯಾಸ ಖ್ಯಾತನಾಗಿದ್ದಾನೆ.


ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ  ಬಹಳಷ್ಟು ಪ್ರಭಾವ ಬೀರಿರುವ ಕುಮಾರವ್ಯಾಸ ಭಾರತವನ್ನು ಗಮಕ ಎಂಬ ವಿಶಿಷ್ಟ ಶೈಲಿಯಲ್ಲಿ ಹಾಡಿ ವ್ಯಾಖ್ಯಾನ ಮಾಡಲಾಗುತ್ತದೆ. ಅದರಿಂದ ಗಮಕ ಕಲೆಯೂ ಪ್ರಸಿದ್ಧಿ ಪಡೆದಿದೆ.


ಪ್ರತೀ ವರ್ಷ ಕರ್ನಾಟಕ ಸರ್ಕಾರ ಗಮಕ ವಾಚನ, ವ್ಯಾಖ್ಯಾನ ಹಾಗೂ ಕಥಾ ಕೀರ್ತನ ಕ್ಷೇತ್ರದಲ್ಲಿ ಅನನ್ಯ ಸೇವೆ ಸಲ್ಲಿಸಿರುವವರಿಗೆ ಕುಮಾರವ್ಯಾಸ ಪ್ರಶಸ್ತಿ ನೀಡಿ ಗೌರವಿಸುವ ಮೂಲಕ ಅಪ್ರತಿಮ ಕವಿ ಕುಮಾರವ್ಯಾಸನನ್ನು ಅಭಿಮಾನದಿಂದ ಸ್ಮರಿಸಿಕೊಳ್ಳುತ್ತಿದೆ.


ಕುಮಾರವ್ಯಾಸನ ಇನ್ನೊಂದು ಕೃತಿ ಐರಾವತ. ಆತನು ಮುಂಡಿಗೆಗಳು ಅಥವಾ ಒಗಟಿನ ಪದ್ಯಗಳನ್ನು ರಚಿಸುವಲ್ಲಿಯೂ ನಿಷ್ಣಾತನಾಗಿದ್ದ. ಪಂಡಿತರ ಸಹಾಯವಿಲ್ಲದೆ ಅಂಥ ಮುಂಡಿಗೆಗಳು ಜನಸಾಮಾನ್ಯರಿಗೆ ಅರ್ಥೈಸಿಕೊಳ್ಳುವುದು ಕಷ್ಟಕರ.


ಅತ್ಯಂತ ಪ್ರಚಲಿತದಲ್ಲಿರುವ ಒಂದು ಮುಂಡಿಗೆ ಹೀಗಿದೆ....
 ವೇದ ಪುರುಷನ ಸುತನ ಸುತನ ಸಹೋದರನ ಹೆಮ್ಮಗನ ಮಗನ ತಳೋದರಿಯ ಮಾತುಳನ ರೂಪನತುಳ ಭುಜ ಬಲದಿ |
ಕಾದಿ ಗೆಲಿದನಣ್ಣನವ್ವೆಯ
ನಾದಿನಿಯ ಜಠರದಲಿ ಜನಿಸಿದನಾದಿ ಮೂರುತಿ ಸಲಹೊ ಗದುಗಿನ ವೀರನಾರಯಣ ||


ಕನ್ನಡ ಸಾಹಿತ್ಯದ ಸಂವರ್ಧನೆಗೆ ಕುಮಾರವ್ಯಾಸನ ಕೊಡುಗೆ  ವಿಶಿಷ್ಟವಾದುದು.

-✍️ಸುಬ್ರಹ್ಮಣ್ಯ ಬಾಸ್ರಿ, ಉಡುಪಿ

Ads on article

Advertise in articles 1

advertising articles 2

Advertise under the article