ಎಸ್.ಪಿ.ಯೊಂದಿಗೆ ಶಾಸಕರ ವರ್ತನೆ ನಾಚಿಗೆಗೇಡು
Saturday, November 25, 2023
ಉಡುಪಿ, ನ.25 (ಲೋಕಬಂಧು ವಾರ್ತೆ): ಜಿಲ್ಲೆಯ ಅಭಿವೃದ್ದಿ ಬಗ್ಗೆ ಗಂಭೀರ ಚರ್ಚೆ ಮಾಡಬೇಕಾದ ಕೆ.ಡಿ.ಪಿ ಸಭೆಯಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿರುವ ಕಾರ್ಕಳ ಶಾಸಕ ಸುನಿಲ್ ಕುಮಾರ್, ಪೊಲೀಸ್ ಅಧಿಕಾರಿ ಜೊತೆ ನಡೆದುಕೊಂಡಿರುವ ವರ್ತನೆಯಿಂದ ಜಿಲ್ಲೆಯ ಜನ ತಲೆತಗ್ಗಿಸುವಂತಾಗಿದೆ. ಹಿರಿಯ ಪೊಲೀಸ್ ಅಧಿಕಾರಿಯೊಂದಿಗೆ ದುರವರ್ತನೆ ತೋರಿದ ಶಾಸಕರ ನಡೆ ನಾಚೀಕೆಗೇಡು ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಮೇಶ್ ಕಾಂಚನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಉನ್ನತ ಅಧಿಕಾರಿಗಳು ಸೇರಿರುವ ಕೆ.ಡಿ.ಪಿ ಸಭೆಯಲ್ಲಿ ತನ್ನನ್ನು ಗೆಲ್ಲಿಸಿರುವ ಕ್ಷೇತ್ರದ ಅಭಿವೃದ್ದಿ ಬಗ್ಗೆ ಮಾತನಾಡುವ ಬದಲಿಗೆ ತಾನೊಬ್ಬ ಜವಾಬ್ದಾರಿಯುತ ಜನಪ್ರತಿನಿಧಿ ಎನ್ನುವುದನ್ನು ಮರೆತು ಅನಾಗರಿಕನಂತೆ ವರ್ತಿಸಿರುವುದು ಖಂಡನೀಯ.
ಕಾರ್ಕಳದಲ್ಲಿ ಪರಶುರಾಮ ಥೀಮ್ ಪಾರ್ಕ್ ಮಾಡುವಾಗ ಅಧಿಕಾರಿಗಳು ಇವರ ತಾಳಕ್ಕೆ ಕುಣಿಯಲಿಲ್ಲ ಎಂದಾಗ ಅವರನ್ನು ಹೀನಾಯವಾಗಿ ಬೈದು, ಬೆದರಿಸಿ ಬೋಗಸ್ ಪ್ರತಿಮೆ ಸ್ಥಾಪಿಸಿದರು. ಅದೇ ರೀತಿ ಕಾಂಗ್ರೆಸ್ ಸರ್ಕಾರದಲ್ಲೂ ಜಿಲ್ಲೆಯಲ್ಲಿನ ಪ್ರಾಮಾಣಿಕ ಅಧಿಕಾರಿಗಳು ಇವರ ಕಾನೂನು ಬಾಹಿರ ಚಟುವಟಿಕೆಗಳಿಗೆ ಸಹಕರಿಸುತ್ತಿಲ್ಲ ಎಂದು ಪ್ರಾಮಾಣಿಕ ಅಧಿಕಾರಿಗಳನ್ನು ಕೆ.ಡಿಪಿ.ಯಂಥ ಅಭಿವೃದ್ಧಿ ಪರ ಚಿಂತನೆ ಮಾಡಬೇಕಾದ ಸಭೆಗಳಲ್ಲಿ ಅನಗತ್ಯವಾಗಿ ಅಧಿಕಾರಿಗಳನ್ನು ಟಾರ್ಗೆಟ್ ಮಾಡಿ ಹೆದರಿಸಿ ಬೆದರಿಸುವ ತಂತ್ರಕ್ಕೆ ಮೊರೆಹೋಗಿರುವುದು ಶಾಸಕರ ಘನತೆಗೆ ಸರಿಯಾದುದಲ್ಲ ಎಂದು ಕಾಂಚನ್ ತಿಳಿಸಿದ್ದಾರೆ.