
Modi: ಕೇಂದ್ರದಲ್ಲಿ ಮೋದಿ ಸರ್ಕಾರ ಅಧಿಕಾರಕ್ಕೆ ಬಾರದು
Monday, November 20, 2023
ಉಡುಪಿ, ನ.20 (ಲೋಕಬಂಧು ವಾರ್ತೆ): ಮುಂಬರುವ ಚುನಾವಣೆಯಲ್ಲಿ ಕೇಂದ್ರದಲ್ಲಿ ಮೋದಿ ಸರ್ಕಾರ ಅಧಿಕಾರಕ್ಕೆ ಬರುವುದಿಲ್ಲ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಭವಿಷ್ಯ ನುಡಿದಿದ್ದಾರೆ.ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು. ಕೇಂದ್ರ ಸರ್ಕಾರದ ಬಗ್ಗೆ ಜನತೆ ಭ್ರಮನಿರಸಗೊಂಡಿದ್ದಾರೆ. ವಿವಾದಾತ್ಮಕ ವಿಚಾರಗಳನ್ನು ಹೊರತುಪಡಿಸಿ ಆಡಳಿತಾತ್ಮಕ ವಿಚಾರಗಳನ್ನು ಮುಂದಿಟ್ಟುಕೊಂಡು ಈ ಬಗ್ಗೆ ತಾನು ಚರ್ಚೆಗೆ ಸಿದ್ಧ ಎಂದು ಬಿಜೆಪಿ ನಾಯಕರಿಗೆ ಸವಾಲೆಸೆದರು.
2024ರ ಲೋಕಸಭಾ ಚುನಾವಣೆಯಲ್ಲಿ ಕೇಂದ್ರದಲ್ಲಿ ಮೋದಿ ಸರ್ಕಾರ ಇರುವುದಿಲ್ಲ. ಕೇಂದ್ರ ಸರ್ಕಾರ ಆಡಳಿತಾತ್ಮವಾಗಿ ಸೋತಿದೆ. ಅಭಿವೃದ್ಧಿ, ಜಿಡಿಪಿ, ನೋಟು ಅಮಾನ್ಯೀಕರಣ, ಸ್ಮಾರ್ಟ್ ಸಿಟಿ, ಬುಲೆಟ್ ಟ್ರೈನ್, ಎಲ್ಲರಿಗೂ ಮನೆ ಇತ್ಯಾದಿ ಕೇಂದ್ರ ಯೋಜನೆಗಳ ಅನುಷ್ಠಾನದ ವಿಫಲವಾಗಿವೆ. ಆ ಬಗ್ಗೆ ಚರ್ಚೆಗೆ ಸಿದ್ಧ ಎಂದರು.
ಇಡೀ ದೇಶದಲ್ಲೇ ಬಿಜೆಪಿ ಸೋಲುತ್ತದೆ. ಹಾಗಾಗಿ ಕರ್ನಾಟಕದಲ್ಲಿ ಕಾಂಗ್ರೆಸ್ ಹೆಚ್ಚಿನ ಸ್ಥಾನ ಗೆಲ್ಲಲೇಬೇಕು. ದಕ್ಷಿಣ ಕರ್ನಾಟಕದಲ್ಲಿ ಹೆಚ್ಚೆಂದರೆ 10 ಸೀಟು ಬಿಜೆಪಿಗೆ ಬರಬಹುದು ಎಂದು ಸಚಿವ ಲಾಡ್ ಹೇಳಿದರು.
ಉತ್ತರ ಕರ್ನಾಟಕ ಭಾಗದಲ್ಲಿ ಅನೇಕ ಮಂದಿ ಬಿಜೆಪಿಯವರು ಕಾಂಗ್ರೆಸ್ ಸೇರ್ಪಡೆಗೆ ಸಿದ್ಧರಾಗಿದ್ದಾರೆ. ಅವರಲ್ಲಿ ಮಾಜಿ ಸಚಿವರೂ ಇದ್ದಾರೆ ಎಂದು ಸಚಿವ ಸಂತೋಷ್ ಲಾಡ್ ಹೇಳಿದರು.