
Murugha Sri: ಮುರುಘಾಶ್ರೀ ಮರು ಬಂಧನಕ್ಕೆ ತಡೆ
Monday, November 20, 2023
ಬೆಂಗಳೂರು, ನ.20 (ಲೋಕಬಂಧು ವಾರ್ತೆ): ಜಾಮೀನಿನ ಮೇಲೆ ಬಿಡುಗಡೆಯಾಗಿ ನಾಲ್ಕು ದಿನಗಳಲ್ಲಿಯೇ ಮುರುಘಾ ಮಠದ ಡಾl ಶಿವಮೂರ್ತಿ ಮುರುಘಾ ಶರಣರನ್ನು ಸೋಮವಾರ ಪೊಲೀಸರು ಮತ್ತೆ ಬಂಧಿಸಿದ ಕೆಲವೇ ಗಂಟೆಗಳಲ್ಲಿ ಜಾಮೀನು ರಹಿತ ಬಂಧನದ ವಾರಂಟ್‌ಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.ಹೈಕೋರ್ಟ್ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಪೀಠ, ಜಿಲ್ಲಾ ನ್ಯಾಯಾಲಯದ ಆದೇಶ ನೀಡಿರುವುದು ಆರೋಪಿ ಮುರುಘಾ ಶ್ರೀಗೆ ಅನ್ಯಾಯವಾಗಿದ್ದು, ಜಾಮೀನು ರಹಿತ ಬಂಧನದ ವಾರೆಂಟ್ಗೆ ತಡೆ ನೀಡಿ, ಆದೇಶ ಉಲ್ಲಂಘಿಸಿ ಚಿತ್ರದುರ್ಗಕ್ಕೆ ಕರೆತಂದಿರುವುದು ತಪ್ಪಾಗಿದೆ. ಕೂಡಲೇ ಸ್ವಾಮೀಜಿಯನ್ನು ಬಿಡುಗಡೆಗೊಳಿಸುವಂತೆ ಚಿತ್ರದುರ್ಗ ಜಿಲ್ಲಾ ಕಾರಾಗೃಹಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.
ದಾವಣಗೆರೆ ವಿರಕ್ತ ಮಠದಲ್ಲಿದ್ದ ಸ್ವಾಮೀಜಿಯನ್ನು ಚಿತ್ರದುರ್ಗ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿ ಚಿತ್ರದುರ್ಗಕ್ಕೆ ಕರೆತಂದಿದ್ದರು.
ಎರಡನೇ ಪೋಕ್ಸೊ ಪ್ರಕರಣಕ್ಕೆ ಜಿಲ್ಲಾ ನ್ಯಾಯಾಲಯ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿ ಬಂಧನಕ್ಕೆ ಆದೇಶಿಸಿತ್ತು. ಆ ಹಿನ್ನೆಲೆಯಲ್ಲಿ ಪೊಲೀಸರು ಬಂಧಿಸಿದ್ದರು.
ಮುರುಘಾ ಶರಣರಿಗೆ ಡಿಸೆಂಬರ್ 2ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿ ಜಿಲ್ಲಾ ನ್ಯಾಯಾಲಯ ಆದೇಶ ಹೊರಡಿಸಿತ್ತು.