Fisheries Federation: ದ.ಕ., ಉಡುಪಿ ಮೀನು ಮಾರಾಟ ಫೆಡರೇಶನ್ ಗೆ ರಾಷ್ಟ್ರೀಯ ಸಹಕಾರಿ ಪ್ರಶಸ್ತಿ
Tuesday, November 21, 2023
ಉಡುಪಿ, ನ.21 (ಲೋಕಬಂಧು ವಾರ್ತೆ): ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್, ಕೇಂದ್ರ ಸರ್ಕಾರದ ಮೀನುಗಾರಿಕೆ ಇಲಾಖೆಯ ಮೀನುಗಾರಿಕೆ ಅಭಿವೃದ್ಧಿ ಮಂಡಳಿ ನೀಡುವ 2023ನೇ ಸಾಲಿನ ಮೀನುಗಾರಿಕಾ ಸಹಕಾರಿ ಸಂಘ ವಿಭಾಗದ ರಾಷ್ಟ್ರೀಯ ಅತ್ಯುತ್ತಮ ಮೀನುಗಾರಿಕಾ ಸಹಕಾರಿ ಸಂಸ್ಥೆ ಪ್ರಶಸ್ತಿ ಪಡೆದಿದೆ.
ಗುಜರಾತ್ ನ ಅಹಮದಾಬಾದ್ ನಲ್ಲಿ ವಿಶ್ವ ಮೀನುಗಾರಿಕೆ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಗ್ಲೋಬಲ್ ಫಿಶರೀಸ್ ಕಾನ್ಫರೆನ್ಸ್ ಇಂಡಿಯಾ ಸಮಾರಂಭದಲ್ಲಿ ದ.ಕ. ಮತ್ತು ಉಡುಪಿ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಹಾಗೂ ಉಡುಪಿ ಶಾಸಕ ಯಶಪಾಲ್ ಸುವರ್ಣ ಮಂಗಳವಾರ ಕೇಂದ್ರ ಮೀನುಗಾರಿಕೆ ಮತ್ತು ಪಶುಸಂಗೋಪನೆ ಖಾತೆ ಸಚಿವ ಪರ್ಶೋತ್ತಮ ರೂಪಾಲ ಅವರಿಂದ ಪ್ರಶಸ್ತಿ ಸ್ವೀಕರಿಸಿದರು.
ದ.ಕ. ಮತ್ತು ಉಡುಪಿ ಮೀನು ಮಾರಾಟ ಫೆಡರೇಶನ್, ಉಡುಪಿ ಮತ್ತು ದ.ಕ. ಜಿಲ್ಲೆಯ ಸುಮಾರು 85 ಸಾವಿರ ಸದಸ್ಯರು ಹಾಗೂ 73 ಸದಸ್ಯ ಸಹಕಾರಿ ಸಂಸ್ಥೆಗಳನ್ನು ಒಳಗೊಂಡಿದ್ದು ಸಂಸ್ಥೆ ಮೂಲಕ ನಡೆಸುತ್ತಿರುವ ರಾಜ್ಯ ಹಾಗೂ ಕೇಂದ್ರ ಸರಕಾರದ ಮೀನುಗಾರಿಕೆಗೆ ಸಂಬಂಧಿಸಿದ ಯೋಜನೆಗಳ ಪರಿಣಾಮಕಾರಿ ಅನುಷ್ಠಾನ, ಸದಸ್ಯರ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನಿಟ್ಟಿನಲ್ಲಿ ವಿದ್ಯಾರ್ಥಿ ವೇತನ , ಆರೋಗ್ಯ ವಿಮೆ, ಮೀನುಗಾರಿಕೆ ಚಟುವಟಿಕೆಗಳಿಗೆ ಪ್ರೋತ್ಸಾಹ, ಮತ್ಸ್ಯಮೇಳ ಆಯೋಜನೆ ಮೂಲಕ ಮೀನುಗಾರಿಕೆ ಉತ್ನನ್ನಗಳಿಗೆ ಪ್ರೋತ್ಸಾಹ ಸಹಿತ ಸಮಾಜಮುಖಿ ಕಾರ್ಯಕ್ರಮಗಳನ್ನು ಗುರುತಿಸಿ ಕೇಂದ್ರ ಸರ್ಕಾರ ಈ ಪ್ರಶಸ್ತಿಗೆ ಆಯ್ಕೆ ಮಾಡಿದೆ.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮೀನು ಮಾರಾಟ ಫೆಡರೇಶನ್ ತನ್ನ ಅತ್ಯುತ್ತಮ ಕಾರ್ಯ ಚಟುವಟಿಕೆಗಳಿಗಾಗಿ 2015ರಲ್ಲಿ ಅತ್ಯುತ್ತಮ ಮೀನುಗಾರ ಸಹಕಾರಿ ಸಂಘ ರಾಷ್ಟ್ರ ಪ್ರಶಸ್ತಿ, 2020ನೇ ಸಾಲಿನ ರಾಜ್ಯ ಮಟ್ಟದ ಅತ್ಯುತ್ತಮ ಸಹಕಾರಿ ಮೀನು ಮಾರಾಟ ಮಹಾಮಂಡಳ ಪ್ರಶಸ್ತಿ ಸಹಿತ ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ.
ಸಮಾರಂಭದಲ್ಲಿ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಅರ್. ಪಟೇಲ್, ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಖಾತೆ ರಾಜ್ಯ ಸಚಿವ ಎಲ್. ಮುರುಗನ್, ಡಾ. ಸಂಜೀವ್ ಬಲ್ಯಾನ್, ಮೀನುಗಾರಿಕೆ ಇಲಾಖೆ ಅಧಿಕಾರಿಗಳು ಇದ್ದರು.