ಇಂದಿರಾ ತತ್ವ ಸಿದ್ಧಾಂತ ಜನತೆಗೆ ತಿಳಿಸುವುದು ಅಗತ್ಯ
Sunday, November 19, 2023
ಉಡುಪಿ, ನ.19 (ಲೋಕಬಂಧು ವಾರ್ತೆ): ಧರ್ಮಾಧಾರಿತ ರಾಜಕೀಯ ಮಾಡಿದವರು ಜನಪ್ರತಿನಿಧಿಗಳಾಗಿ ಆಯ್ಕೆಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆ. ಇಂದಿರಾ ತತ್ವ ಸಿದ್ಧಾಂತ ಬಡವರಿಗೆ ತಿಳಿಸುವ ಕೆಲಸ ಮಾಡಬೇಕು.
ಪಕ್ಷದ ಬೇರು ಗಟ್ಟಿಗೊಳಿಸುವ ಕಾರ್ಯ ನಡೆಯಬೇಕು. ಅವಿಭಜಿತ ದ.ಕ. ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಬಲಿಷ್ಠವಾಗಬೇಕು ಎಂದು ಅಬಕಾರಿ ಸಚಿವ ಆರ್. ಬಿ. ತಿಮ್ಮಾಪುರ ಹೇಳಿದರು.
ಭಾನುವಾರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಹಿಳಾ ಕಾಂಗ್ರೆಸ್ ವತಿಯಿಂದ ನಡೆದ ಇಂದಿರಾ ಗಾಂಧಿ ಜನ್ಮ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಇಂದಿರಾ ಗಾಂಧಿ ಬ್ಯಾಂಕ್ ರಾಷ್ಟ್ರೀಕರಣ ಮಾಡದಿದ್ದರೆ ಬಡವರಿಗೆ ಬ್ಯಾಂಕಿಂಗ್ ಸೇವೆ ಸಿಗುತ್ತಿರಲಿಲ್ಲ. ಭೂ ಸುಧಾರಣೆ ಕಾಯ್ದೆಯಿಂದ ಬಡವರಿಗೆ ಮನೆ ಕಟ್ಟಿಕೊಳ್ಳಲು ಸಾಧ್ಯವಾಯಿತು.
ದೇಶದಲ್ಲಿ ಆಂತರಿಕ ಪ್ರಜಾಪ್ರಭುತ್ವ ಹಾಳಾಗಿದೆ. ಸರ್ವ ಜನಾಂಗದ ಶಾಂತಿಯ ತೋಟ ಕಾಂಗ್ರೆಸ್ ಗುರಿ. ಜಾತಿ ಭೇದವಿಲ್ಲದೆ ಎಲ್ಲಾ ಬಡವರಿಗೆ ಸೌಲಭ್ಯ ಕೊಡುತ್ತಿದ್ದೇವೆ ಎಂದರು.
ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಮಾತನಾಡಿ, ಇಂದಿರಾಗಾಂಧಿ ಹೆಸರೇ ನಮಗೆ ಶಕ್ತಿ ತುಂಬಿಸುತ್ತದೆ. ಅವರು ಹಾಕಿಕೊಟ್ಟ ಹಲವಾರು ಜನಪರ ಕಾರ್ಯಕ್ರಮಗಳು ಇಂದಿಗೂ ಅವರ ಹೆಸರನ್ನು ಚಿರಸ್ಥಾಯಿಯಾಗಿಸಿದೆ ಎಂದರು.
ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶ್ರೀ ಅಶೋಕ್ ಕುಮಾರ್ ಕೊಡವೂರು, ಮಹಿಳಾ ಕಾಂಗ್ರೆಸ್ ಹಮ್ಮಿಕೊಂಡ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಬಳಿಕ ನಗರದ ಕೂಸಮ್ಮ ಶಂಭು ಶೆಟ್ಟಿ ಸರಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ತೆರಳಿ ಆಸ್ಪತ್ರೆಯ ಹೆರಿಗೆ ಮತ್ತು ಮಕ್ಕಳ ವಾರ್ಡ್ ಗಳಿಗೆ 10 ಗೋಡೆ ಗಡಿಯಾರಗಳನ್ನು ಮಹಿಳಾ ಕಾಂಗ್ರೆಸ್ ವತಿಯಿಂದ ಕೊಡುಗೆಯಾಗಿ ನೀಡಲಾಯಿತು.
ಮಧ್ಯಾಹ್ನ ನಡೆದ ಕಾರ್ಯಕ್ರಮದಲ್ಲಿ ಕಾರ್ಕಳದ ಸಮಾಜ ಸೇವಕಿ, ಸುರಕ್ಷಾ ಸೇವಾಶ್ರಮದ ಸ್ಥಾಪಕಿ ಆಯಿಷಾ ಬಾನು ಅವರಿಗೆ ಇಂದಿರಾ ಪ್ರಿಯದರ್ಶಿನಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ವಾಗ್ಳೆ ಸ್ವಾಗತಿಸಿದರು. ನಗರಸಭೆ ಮಾಜಿ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ ಸನ್ಮಾನಿತರನ್ನು ಪರಿಚಯಿಸಿದರು. ಉಡುಪಿ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮಮತಾ ಶೆಟ್ಟಿ ವಂದಿಸಿದರು.ಜ್ಯೋತಿ ಹೆಬ್ಬಾರ್ ನಿರೂಪಿಸಿದರು.
ಈ ಸಂದರ್ಭದಲ್ಲಿ ಪಕ್ಷ ವರಿಷ್ಠರಾದ ಸರಸು ಡಿ. ಬಂಗೇರ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ. ಎ. ಗಫೂರ್, ನರಸಿಂಹಮೂರ್ತಿ, ನಾಗೇಶ್ ಕುಮಾರ್ ಉದ್ಯಾವರ, ಪ್ರಸಾದ್ ರಾಜ್ ಕಾಂಚನ್, ದಿನೇಶ್ ಹೆಗ್ಡೆ ಮೊಳಹಳ್ಳಿ,ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್, ಬ್ರಹ್ಮಾವರ ಬ್ಲಾಕ್ ಅಧ್ಯಕ್ಷ ದಿನಕರ್ ಹೇರೂರು, ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲ್, ಇಂಟಕ್ ಅಧ್ಯಕ್ಷ ಕಿರಣ್ ಹೆಗ್ಡೆ, ಸಾಮಾಜಿಕ ಜಾಲತಾಣ ಜಿಲ್ಲಾಧ್ಯಕ್ಷ ರೋಶನ್ ಶೆಟ್ಟಿ, ಆರ್.ಜಿಪಿಆರ್.ಎಸ್ ಜಿಲ್ಲಾ ಸಂಯೋಜಕಿ ರೋಶನಿ ಒಲಿವರ್, ಡಾ. ಸುನೀತಾ ಶೆಟ್ಟಿ, ಚಂದ್ರಿಕಾ ಶೆಟ್ಟಿ, ನಗರಸಭಾ ಸದಸ್ಯೆ ಅಮೃತಾ ಕೃಷ್ಣಮೂರ್ತಿ, ತಾಲೂಕು ಪಂಚಾಯತ್‌ಮಾಜಿ ಸದಸ್ಯೆ ಸುಲೋಚನಾ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಐಡಾ ಗಿಬ್ಬ ಡಿ'ಸೋಜಾ, ಶಾಲಿನಿ ಪುರಂದರ್, ಸುಕನ್ಯಾ ಪೂಜಾರಿ ಕಡೆಕಾರ್, ಸಂಧ್ಯಾ ತಿಲಕ್ ರಾಜ್, ಅರ್ಚನಾ ದೇವಾಡಿಗ, ಪ್ರಮೀಳಾ ಜತ್ತನ್ನ, ಗೀತಾ ಸತೀಶ್, ಸತೀಶ್ ಕೊಡವೂರು, ಸುರೇಂದ್ರ ಆಚಾರ್ಯ, ಜಿಲ್ಲಾ ಪರಿಶಿಷ್ಟ ಘಟಕ ಅಧ್ಯಕ್ಷ ಜಯಕುಮಾರ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ದೀಪಕ್ ಕೋಟ್ಯಾನ್, ವಿದ್ಯಾರ್ಥಿ ಸಂಘಟನೆಯ ಸೌರಭ್ ಬಳ್ಳಾಲ್, ಮಹಾಬಲ ಕುಂದರ್, ಲಕ್ಷ್ಮೀ ಭಟ್, ಶಾಂತಿ ಪಿರೇರ, ನಳಿನಾಕ್ಷಿ ಬಂಗೇರ, ಶ್ರೀಮತಿ ಪ್ರಮೀಳಾ,ಆಶಾ ಚಂದ್ರಶೇಖರ್, ಜಾನಕಿ ನಾಯ್ಕ್, ಕುಮುದ, ವಜ್ರಾಕ್ಷಿ, ದೇವಕಿ ಕೋಟ್ಯಾನ್, ಜಯಶ್ರೀ ಶೇಟ್, ಸುಮನಾ ಸುರೇಂದ್ರ ಮುಂತಾದವರಿದ್ದರು.