.jpg)
ಉಡುಪಿಯಲ್ಲಿ ಜು.25ರಿಂದ ಭಂಡಾರಕೇರಿ ಮಠಾಧೀಶರ ಚಾತುರ್ಮಾಸ್ಯ
Monday, July 22, 2024
ಉಡುಪಿಯಲ್ಲಿ ಜು.25ರಿಂದ ಭಂಡಾರಕೇರಿ ಮಠಾಧೀಶರ ಚಾತುರ್ಮಾಸ್ಯ
ಲೋಕಬಂಧುನ್ಯೂಸ್ ಡೆಸ್ಕ್, ಉಡುಪಿ
ಪರ್ಯಾಯ ಪುತ್ತಿಗೆ ಶ್ರೀಗಳ ಸಹಪಾಠಿಯಾಗಿದ್ದ ಭಂಡಾರಕೇರಿ ಮಠಾಧೀಶ ಶ್ರೀ ವಿದ್ಯೇಶತೀರ್ಥ ಶ್ರೀಪಾದರು ಪುತ್ತಿಗೆ ಶ್ರೀಪಾದರ ಅಪೇಕ್ಷೆಯಂತೆ ಜುಲೈ 25ರಿಂದ ಸೆಪ್ಟೆಂಬರ್ 18ರ ವರೆಗೆ ಉಡುಪಿಯಲ್ಲಿ ಚಾತುರ್ಮಾಸ್ಯ ವ್ರತ ಕೈಗೊಳ್ಳಲಿದ್ದಾರೆ.
36 ವರ್ಷಗಳ ಬಳಿಕ ಭಂಡಾರಕೇರಿ ಶ್ರೀಗಳು ಉಡುಪಿಯಲ್ಲಿ ತಮ್ಮ 45ನೇ ಚಾತುರ್ಮಾಸ್ಯ ವ್ರತ ಕೈಗೊಳ್ಳಲಿದ್ದು, ಜು. 24ರಂದು ಅವರನ್ನು ಅದ್ದೂರಿಯಾಗಿ ಸ್ವಾಗತಿಸಿ, ಕೃಷ್ಣಮಠದ ಸಂಸ್ಥಾನ ಗೌರವ ನೀಡಲಾಗುವುದು ಎಂದು ಪರ್ಯಾಯ ಪುತ್ತಿಗೆ ಮಠ ದಿವಾನ ನಾಗರಾಜ ಆಚಾರ್ಯ ತಿಳಿಸಿದರು.
ಸೋಮವಾರ ಸುದ್ದಿಗಾರರಿಗೆ ಕಾರ್ಯಕ್ರಮದ ಮಾಹಿತಿ ನೀಡಿದ ಅವರು, ಶ್ರೀಗಳನ್ನು ಪಟ್ಟದ ದೇವರ ಸಹಿತ ಜು. 24ರ ಸಂಜೆ 4.30 ಗಂಟೆಗೆ ಸಂಸ್ಕೃತ ಕಾಲೇಜು ಬಳಿಯಿಂದ ಗೌರವಪೂರ್ವಕವಾಗಿ ಬರಮಾಡಿಕೊಳ್ಳಲಾಗುವುದು. ಬಳಿಕ 5.30ರಿಂದ ರಾಜಾಂಗಣದಲ್ಲಿ ಧಾರ್ಮಿಕ ಸಭೆ ನಡೆಯಲಿದೆ.
ಜು. 25ರಿಂದ ರಥಬೀದಿಯಲ್ಲಿರುವ ಭಂಡಾರಕೇರಿ ಶಾಖಾ ಮಠದಲ್ಲಿ ಶ್ರೀಗಳು ಚಾತರ್ಮಾಸ್ಯ ವ್ರತ ನಿರತರಾಗುವರು.
ಚಾತುರ್ಮಾಸ್ಯ ಅವಧಿಯಲ್ಲಿ ಬರುವ ಕೃಷ್ಣಾಷ್ಟಮಿ ಸಹಿತ ವಿವಿಧ ಹಬ್ಬ ಹರಿದಿನಗಳಲ್ಲಿ ಪುತ್ತಿಗೆ ಮಠಾಧೀಶರೊಂದಿಗೆ ಭಾಗವಹಿಸುವರು ಎಂದರು.
ಶ್ರೀಮಠದಲ್ಲಿ ದಿನವೂ ನಿತ್ಯಾನುಷ್ಠಾನ, ಸಂಸ್ಥಾನ ದೇವರಾದ ಶ್ರೀ ಲಕ್ಷ್ಮಣ ಹನೂಮತ್ಸಮೇತ ಶ್ರೀ ಸೀತಾ ಕೋದಂಡರಾಮ ದೇವರಿಗೆ ವಿಶೇಷ ಪೂಜೆ, ಭಾಗವತ ಸಹಿತ ವಿವಿಧ ಗ್ರಂಥಗಳ ಪಾಠ ಪ್ರವಚನ, ವಿದ್ವಾಂಸರಿಂದ ಉಪನ್ಯಾಸ ಸರಣಿ, ಸಾಂಸ್ಕೃತಿಕ ಕಾರ್ಯಕ್ರಮ ಇತ್ಯಾದಿ ನಡೆಯಲಿದೆ ಎಂದು ಭಂಡಾರಕೇರಿ ಮಠ ಚಾತುರ್ಮಾಸ್ಯ ಸಮಿತಿ ಸದಸ್ಯ ಜಯರಾಮ ಆಚಾರ್ಯ ವಿವರಿಸಿದರು.
ಪುತ್ತಿಗೆ ಮಠ ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನಾಚಾರ್ಯ, ಚಾತುರ್ಮಾಸ್ಯ ಸಮಿತಿ ಸಂಚಾಲಕ ಚಂದ್ರಶೇಖರ ಆಚಾರ್ಯ, ಸದಸ್ಯ ವಿಷ್ಣುಪ್ರಸಾದ್ ಪಾಡಿಗಾರು, ಭಂಡಾರಕೇರಿ ಮಠ ದಿವಾನ ರಾಜೇಶ್ ಉಪಾಧ್ಯ ಇದ್ದರು.
ನಾಲ್ವರು ಯತಿಗಳ ಚಾತುರ್ಮಾಸ್ಯ
ಪಲಿಮಾರು ಯತಿಗಳಾಗಿದ್ದ ಶ್ರೀ ವಿದ್ಯಾಮಾನ್ಯತೀರ್ಥ ಶ್ರೀಪಾದರ ಶಿಷ್ಯರಾದ ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು, ಅದಮಾರು ಹಿರಿಯ ಯತಿ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಮತ್ತು ಭಂಡಾರಕೇರಿ ಮಠಾಧೀಶ ಶ್ರೀ ವಿದ್ಯೇಶತೀರ್ಥ ಶ್ರೀಪಾದರು ಹಾಗೂ ಪುತ್ತಿಗೆ ಮಠದ ಕಿರಿಯ ಯತಿ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಜುಲೈ 25ರಿಂದ ಚಾತುರ್ಮಾಸ್ಯ ವ್ರತ ಆಚರಿಸುವರು.
ಯತಿಗಳು ಮತ್ತು ಗೃಹಸ್ಥರಿಗೆ ಚಾತುರ್ಮಾಸ್ಯ ಆಚರಣೆಗೆ ವೈದಿಕ ಧರ್ಮದಲ್ಲಿ ವಿಶೇಷ ಪ್ರಾಶಸ್ತ್ಯ ಇದೆ ಎಂದು ಪುತ್ತಿಗೆ ಮಠ ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನಾಚಾರ್ಯ ತಿಳಿಸಿದರು.
ಮನೆ ಮನೆಯಲ್ಲಿ ಭಾಗವತ
ಪುತ್ತಿಗೆ ಶ್ರೀಗಳು ತಮ್ಮ ಪರ್ಯಾಯ ಅವಧಿಯಲ್ಲಿ ಗೀತಾ ಪ್ರಚಾರ ಸಂಕಲ್ಪಿಸಿದಂತೆ ಭಂಡಾರಕೇರಿ ಶ್ರೀಗಳು ವ್ಯಾಸಕೃತ ಭಾಗವತ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದಾರೆ.
ಉಡುಪಿ ಚಾತುರ್ಮಾಸ ಸಂದರ್ಭದಲ್ಲಿ ಮನೆ ಮನೆಗಳಲ್ಲಿ ಭಾಗವತ ಅನುರಣಿಸಬೇಕು ಎಂಬ ಆಶಯ ಹೊಂದಿದ್ದು, ಉಡುಪಿಯ ಅಪೇಕ್ಷಿತರ ಮನೆಗಳಿಗೆ ತೆರಳಿ ಭಾಗವತ ಪ್ರಚಾರ ಕಾರ್ಯ ನಡೆಸಲಿದ್ದಾರೆ.