-->
ಕೊರಗರಿಗೆ ಉದ್ಯೋಗ ನೀಡದೆ ಸರ್ಕಾರ ವಂಚನೆ

ಕೊರಗರಿಗೆ ಉದ್ಯೋಗ ನೀಡದೆ ಸರ್ಕಾರ ವಂಚನೆ

ಕೊರಗರಿಗೆ ಉದ್ಯೋಗ ನೀಡದೆ ಸರ್ಕಾರ ವಂಚನೆ

ಲೋಕಬಂಧುನ್ಯೂಸ್ ಡೆಸ್ಕ್, ಉಡುಪಿ

ತೀರಾ ಹಿಂದುಳಿದಿರುವ ಮತ್ತು ಅಳವಿನಂಚಿನಲ್ಲಿರುವ ಕೊರಗ ಸಮುದಾಯದವರಿಗೆ ಸರ್ಕಸರ ಶೇ. 100ರಷ್ಟು ಉದ್ಯೋಗ ಭದ್ರತೆ ಮತ್ತು ಕೃಷಿ ಭೂಮಿ ಹಕ್ಕು ಪತ್ರ ಮಂಜೂರು ಮಾಡುವ ಭರವಸೆ ಈಡೇರಿಸದೆ ಅನ್ಯಾಯವೆಸಗಿದೆ ಎಂದು ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ಕರ್ನಾಟಕ- ಕೇರಳ ಅಧ್ಯಕ್ಷೆ ಸುಶೀಲ ನಾಡ ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರದ ನಿರ್ಲಕ್ಷ್ಯ ಖಂಡಿಸಿ ಜುಲೈ 22ರಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದರು.


ರಾಷ್ಟ್ರಪತಿ ದೌಪದಿ ಮುರ್ಮು ಅವರು ರಾಜ್ಯಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಪಿವಿಟಿ ಯೋಜನೆಯಡಿ ಕೊರಗ ಮತ್ತು ಜೇನು ಕುರುಬ ಸಮುದಾಯದ ಯುವಜನರಿಗೆ ಶೇ. 100ರಷ್ಟು ಉದ್ಯೋಗ ಭದ್ರತೆ ಕಲ್ಪಿಸುವ ನಿಟ್ಟಿನಲ್ಲಿ ಕ್ರಿಯಾ ಯೋಜನೆ ರೂಪಿಸಿ, ಕಾರ್ಯರೂಪಕ್ಕೆ ತರುವಂತೆ ಸೂಚಿಸಿದ್ದರು


ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಬುಡಕಟ್ಟು ಕಲ್ಯಾಣ ಸಚಿವರ ನಿರ್ದೇಶನದಂತೆ ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮಣಿವಣ್ಣನ್ ಕ್ರಿಯಾ ಯೋಜನೆ ರೂಪಿಸಿದ್ದರು.


ಅದರಂತೆ ಕೊರಗ ಸಮುದಾಯದವರಿಗೆ ಶೇ. 10ರಷ್ಟು ಸರ್ಕಾರಿ ಉದ್ಯೋಗ, ಶೇ. 30ರಷ್ಟು ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗ ಮತ್ತು ಶೇ. 60ರಷ್ಟು ಸ್ವಉದ್ಯೋಗ ಕಲ್ಪಿಸುವ ಯೋಜನೆ ರೂಪಿಸಲಾಗಿತ್ತು.


ಆದರೆ, ಇದು ಕಾರ್ಯಗತಗೊಂಡಿಲ್ಲ ಎಂದು ವಿಷಾದಿಸಿದರು.


ಈ ನಿಟ್ಟಿನಲ್ಲಿ ಉಡುಪಿ ಜಿಲ್ಲಾಡಳಿತ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ, ಬ್ರಹ್ಮಾವರ ರುಡ್ ಸೆಟ್ ಸಂಸ್ಥೆ ಸಹಕಾರದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಕೊರಗ ಸಮುದಾಯದ 18 ವರ್ಷ ಮೇಲ್ಪಟ್ಟ 40 ವರ್ಷದೊಳಗಿನ 200 ಮಂದಿ ಭಾಗವಹಿಸಿದ್ದರು. ವಿವಿಧ ದಾಖಲೆಗಳನ್ನು ನೀಡಿ ನೋಂದಣಿಯನ್ನೂ ಮಾಡಿದ್ದರು.


ಆದರೆ, ಈ ಯೋಜನೆಯ ಅನುಷ್ಠಾನ ಪ್ರಕ್ರಿಯೆ ಸ್ಥಗಿತಗೊಂಡಿದೆ ಎಂದರು.


ಸರ್ಕಾರ ಈ ಯೋಜನೆ ಅನುಷ್ಠಾನವನ್ನು ಸಂಪೂರ್ಣವಾಗಿ ಕಡೆಗಣಿಸಿದೆ. ಆ ಬಗ್ಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸುಶೀಲ ದೂರಿದರು.


ಸ್ವಉದ್ಯೋಗಕ್ಕೂ ತೊಡಕು
ಹೋರಾಟದ ಫಲವಾಗಿ ಈಚಿನ ದಿನಗಳಲ್ಲಿ ಕೊರಗ ಸಮುದಾಯ, ಸಮಾಜದ ಮುಖ್ಯವಾಹಿನಿಗೆ ಬರುತ್ತಿದೆ. ಆದರೆ, ಈ ಸಮುದಾಯದಲ್ಲಿ ಉನ್ನತ ಶಿಕ್ಷಣ ಪಡೆದವರಿಗೆ ಸರ್ಕಾರಿ ಉದ್ಯೋಗ ಸಿಗುತ್ತಿಲ್ಲ. ಕೊರಗ ಸಮುದಾಯದ 400 ಮಂದಿ ಪದವಿ ಶಿಕ್ಷಣ ಪೂರೈಸಿದ್ದಾರೆ. 100 ಮಂದಿ ಸ್ನಾತಕೋತ್ತರ ಪದವೀಧರರಿದ್ದಾರೆ. 5 ಮಂದಿ ಪಿಎಚ್.ಡಿ. ಮಾಡಿದ್ದಾರೆ. ಆದರೆ, ಅವರಲ್ಲಿ ಯಾರಿಗೂ ಸರ್ಕಾರಿ ನೌಕರಿ ಸಿಕ್ಕಿಲ್ಲ.


ಕೇವಲ ಪುರಸಭೆಗಳಲ್ಲಿ ಸ್ವಚ್ಛತೆ ಕೆಲಸಕ್ಕಷ್ಟೇ ಸಮುದಾಯದವರನ್ನು ನೇಮಿಸಿಕೊಳ್ಳಲಾಗುತ್ತಿದೆ.


ಅಸ್ಪೃಶ್ಯತೆ ಕಾರಣದಿಂದ ನಮ್ಮ ಸಮುದಾಯದವರಿಗೆ ಸ್ವಉದ್ಯೋಗ ಮಾಡಲಾಗುತ್ತಿಲ್ಲ. ಇಸ್ತ್ರಿ ಅಂಗಡಿ, ಟೈಲರಿಂಗ್ ಅಂಗಡಿ ಇಟ್ಟುಕೊಂಡರೆ ಬಟ್ಟೆ ಕೊಡುವವರೇ ಇಲ್ಲ ಎಂದು ಸುಶೀಲ ಅಳಲು ತೋಡಿಕೊಂಡರು.


ಅವಿಭಜಿತ ದ.ಕ. ಜಿಲ್ಲೆಗಳಲ್ಲಿ 5 ಸಾವಿರ ಕೊರಗರ ಕುಟುಂಬಗಳಿದ್ದು, ಆ ಪೈಕಿ 400 ಕುಟುಂಬಗಳು ಭೂಮಿ ಹಕ್ಕಿಗಾಗಿ ಹೋರಾಟ ಮಾಡುತ್ತಿವೆ ಎಂದರು.


ಒಕ್ಕೂಟದ ಸಂಯೋಜಕ ಕೆ. ಪುತ್ರನ್, ಕಾರ್ಯದರ್ಶಿ ವಿನಯಾ ಅಡ್ವೆ, ಕೋಶಾಧಿಕಾರಿ ದಿವಾಕರ ಇದ್ದರು.

Ads on article

Advertise in articles 1

advertising articles 2

Advertise under the article