.jpg)
ಜಿಲ್ಲೆಯ ಪ್ರವಾಸಿ ತಾಣಗಳನ್ನು ಜನಾಕರ್ಷಣೆಗೊಳಿಸಿ
Thursday, July 18, 2024
ಜಿಲ್ಲೆಯ ಪ್ರವಾಸಿ ತಾಣಗಳನ್ನು ಜನಾಕರ್ಷಣೆಗೊಳಿಸಿ
ಲೋಕಬಂಧುನ್ಯೂಸ್ ಡೆಸ್ಕ್, ಉಡುಪಿ
ಜಿಲ್ಲೆಯ ಸುಂದರ ನಿಸರ್ಗ ಸೌಂದರ್ಯ, ಕಡಲ ತೀರ, ಧಾರ್ಮಿಕ ಕೇಂದ್ರಗಳು, ಸ್ಥಳೀಯ ಸಂಸ್ಕೃತಿ, ಸಂಪ್ರದಾಯ, ಜಾನಪದ ಕಲೆ, ಧಾರ್ಮಿಕ ಉತ್ಸವ ಇತ್ಯಾದಿಗಳ ಬಗ್ಗೆ ದೇಶ ವಿದೇಶದ ಜನರಿಗೆ ಪ್ರಚುರಪಡಿಸುವುದರೊಂದಿಗೆ ಪ್ರವಾಸಿಗರನ್ನು ಆಕರ್ಷಿಸಿ, ಪ್ರವಾಸೋದ್ಯಮ ಹೆಚ್ಚಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಉಡುಪಿ ಹಾಗೂ ಜಸ್ಟ್ ರೋಲ್ ಫಿಲ್ಮ್ಸ್ ಸಹಯೋಗದೊಂದಿಗೆ ಜಿಲ್ಲೆಯ ಪ್ರವಾಸಿ ತಾಣಗಳನ್ನೊಳಗೊಂಡ ಸುಮಧುರ ಹಾಡಿನೊಂದಿಗೆ ರಚಿಸಿರುವ ಉಡುಪಿ ಆ್ಯಂಥಮ್ ವೀಡಿಯೊ ಚಿತ್ರ ಬಿಡುಗಡೆಗೊಳಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಸ್ವಾಭಾವಿಕ ಪ್ರಕೃತಿ ಸೌಂದರ್ಯ, ಬೋರ್ಗರೆಯುವ ಕಡಲು, ಹಳ್ಳ ಕೊಳ್ಳ, ತೊರೆ ನದಿಗಳು, ಪಶ್ಚಿಮ ಘಟ್ಟದ ಶ್ರೇಣಿಗಳು ಹಾಗೂ ಧಾರ್ಮಿಕ ಪ್ರವಾಸಿ ಕೇಂದ್ರಗಳು ಒಳಗೊಂಡಂತೆ 48 ಪ್ರವಾಸಿ ತಾಣಗಳ ಜೊತೆಗೆ 32 ಪ್ರವಾಸಿ ತಾಣಗಳನ್ನು ಹೊಸದಾಗಿ ಗುರುತಿಸುವುದರೊಂದಿಗೆ ಬರುವ ಪ್ರವಾಸಿಗರಿಗೆ ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸಲು ಜಿಲ್ಲಾಡಳಿತ ಅನೇಕ ಅಭಿವೃದ್ಧಿ ಕಾರ್ಯ ಕೈಗೊಳ್ಳುತ್ತಿದೆ.
ಜಿಲ್ಲೆಯ ಪ್ರವಾಸೋದ್ಯಮ ಉತ್ತೇಜಿಸಲು ಆಧುನಿಕ ತಂತ್ರಜ್ಞಾನ ಬಳಕೆಯೊಂದಿಗೆ ಹೆಚ್ಚು ಜನರನ್ನು ತಲುಪಿಸುವ ಕೆಲಸವಾಗಬೇಕಿದೆ ಎಂದರು.
ವೆಬ್ ಸೈಟ್, ಇನ್ಸ್ಟಾಗ್ರಾಮ್, ಟ್ವಿಟರ್ ಹಾಗೂ ಪ್ರತಿಷ್ಠಿತ ಬ್ಲಾಗ್ ಸೇರಿದಂತೆ ಸಾಮಾಜಿಕ ಜಾಲಗಳಲ್ಲಿ ಹೆಚ್ಚು ಪ್ರಚುರಪಡಿಸಬೇಕು ಎಂದರು.
ಈ ಸಂದರ್ಭದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಮಮತಾದೇವಿ ಜಿ.ಎಸ್., ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಕುಮಾರ್ ಸಿ. ಯು, ವಾರ್ತಾಧಿಕಾರಿ ಮಂಜುನಾಥ್, ಜಸ್ಟ್ ರೋಲ್ ಫಿಲ್ಮ್ಸ್ ಯೂಟ್ಯೂಬ್ ಚಾನೆಲ್ ನಿರ್ದೇಶಕ, ನಿರ್ಮಾಪಕ ಹಾಗೂ ಸಾಹಿತ್ಯ ಸಂಯೋಜಕರು ಇದ್ದರು.
5 ನಿಮಿಷಗಳ ವೀಡಿಯೊ ಚಿತ್ರದಲ್ಲಿ `ಅಂದದ ಚೆಂದದ ನೂತನ ಚೇತನ ಸುಂದರ ಸೊಗಸಿನ ಊರು, ರಮ್ಯ ನಿಸರ್ಗದ ತೋರಣ ಹೊತ್ತ ನಯನ ಮನೋಹರ ಬೀಡು, ಅರಬ್ಬಿ ಸಮುದ್ರದ ಅಲೆಗಳು ಬಾಗುವ ಕಡಲ ಕಿನಾರೆಯ ನಾಡು, ಪ್ರೀತಿ ಅಕ್ಕರೆ ತುಂಬಿದ ನಿತ್ಯ ರಮಣೀಯ ಗೂಡು, ಉಡುಪಿ........" ಹಾಡಿನಲ್ಲಿ ದೇವಾಲಯಗಳು, ಭಾಷೆ, ಕಲೆ, ಸಂಸ್ಕೃತಿ, ಸಂಪ್ರದಾಯ, ಹಬ್ಬ ಜಾತ್ರೆಗಳ ವೈಭವ, ಯಕ್ಷಗಾನ, ಭೂತ ನೇಮ, ಕೋಲ ಆಚರಣೆ, ಕಂಬಳದ ವೈಭವ ಅದ್ಭುತವಾಗಿ ಮೂಡಿಬಂದಿದೆ.