ದೊಡ್ಡಣಗುಡ್ಡೆ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ಗುರು ಪೂರ್ಣಿಮೆ ಆಚರಣೆ
Sunday, July 21, 2024
ದೊಡ್ಡಣಗುಡ್ಡೆ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ಗುರು ಪೂರ್ಣಿಮೆ ಆಚರಣೆ
ಲೋಕಬಂಧುನ್ಯೂಸ್ ಡೆಸ್ಕ್, ಉಡುಪಿ
ದೊಡ್ಡಣಗುಡ್ಡೆ ಶ್ರೀಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ಗುರು ಹುಣ್ಣಿಮೆ ಮಹೋತ್ಸವ ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ಶಿಷ್ಯ ವರ್ಗದ ಸಹಕಾರದೊಂದಿಗೆ ಭಾನುವಾರ ಸಂಭ್ರಮದಿಂದ ಆಚರಿಸಲಾಯಿತು.
ಕ್ಷೇತ್ರದ ಗಾಯತ್ರಿ ಧ್ಯಾನಪೀಠದ ಕಪಿಲ ಮಹರ್ಷಿ ದಿವ್ಯ ಸನ್ನಿಧಾನದಲ್ಲಿ ಧಾರ್ಮಿಕ ಕಾರ್ಯಕ್ರಮವಾಗಿ ಮನ್ಯುನಾಮಕ ಲಕ್ಷ್ಮೀ ನರಸಿಂಹ ಯಾಗ ಪೆರ್ಡೂರು ದಿನೇಶ್ ಅಡಿಗ ನೇತೃತ್ವದಲ್ಲಿ ಸಂಪನ್ನಗೊಂಡಿತು.
ಕಪಿಲ ಮಹರ್ಷಿ ಸನ್ನಿಧಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಭಕ್ತ ಸಮೂಹ ಶ್ರೀಗುರೂಜಿಯವರನ್ನು ಭಕ್ತಿ ಪೂರ್ವಕವಾಗಿ ಗುರುಪೀಠದಲ್ಲಿ ಕುಳ್ಳಿರಿಸಿ ಪಾದಪೂಜೆಗೈದರು.
ಸಂಕಷ್ಟಕೊಳ್ಳಗಾದವರ ಸಂಕಷ್ಟ ನಿವಾರಿಸಿ ಸೂಕ್ತ ಮಾರ್ಗದರ್ಶನ ನೀಡಿ ನೆಮ್ಮದಿಯ ಬಾಳ್ವೆ ನಡೆಸಲು ಮಾರ್ಗದರ್ಶನ ನೀಡಿದ ಗುರುಗಳಿಗೆ ಶಾಲು ಹೊದಿಸಿ ಪೇಟ ತೊಡಿಸಿ ಫಲಪುಷ್ಪ ಕಾಣಿಕೆ ನೀಡಿ ಕೃತಜ್ಞತೆ ಸಲ್ಲಿಸಿದರು.
ಪ್ರಜ್ಞಾ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕ ಶಿಕ್ಷಕಿಯರು ಹಾಗೂ ವಿದ್ಯಾರ್ಥಿಗಳು ವಿವಿಧ ಮನರಂಜನ ಕಾರ್ಯಕ್ರಮ ನೀಡಿದರು.
ಧನ್ಯಶ್ರೀ, ಅನಘ, ಜಾನಕಿ ಎಸ್., ಕ್ಷೇತ್ರದ ಸ್ವಾತಿ ಆಚಾರ್ಯ ನೀಡಿದ ನೃತ್ಯ ಸೇವೆ ಜನಾಕರ್ಷಣೆಗೊಂಡಿತು.
ಅಪಾರ ಸಂಖ್ಯೆಯಲ್ಲಿ ನಡೆದ ಭಕ್ತರಿಗೆ ಫಲ ಮಂತ್ರಾಕ್ಷತೆ ನೀಡಿ ಗುರೂಜಿ ಆಶೀರ್ವದಿಸಿದರು.
ಶ್ರೀ ದುರ್ಗಾ ಆದಿಶಕ್ತಿ ದೇವಿಯ ಮಹಾಪೂಜೆಯನ್ನು ಅನಿಶ್ ಆಚಾರ್ಯ ನೆರವೇರಿಸಿದರು. ಆನಂದ ಬಾಯರಿ ದೇವಿಯನ್ನು ವಿಶೇಷವಾಗಿ ಅಲಂಕರಿಸಿದ್ದರು.
ಕಪಿಲ ಮಹರ್ಷಿ ಸನ್ನಿಧಿಯಲ್ಲಿ ವಿಶೇಷ ಅರ್ಚನೆ ಸಹಿತ ಗುರು ಪೂಜೆಯನ್ನು ಸ್ವಸ್ತಿಕ್ ಆಚಾರ್ಯ ನೆರವೇರಿಸಿದರು.
ಪಂಚಭಕ್ಷ ಸಹಿತ ಮಹಾಅನ್ನಸಂತರ್ಪಣೆ ಮೃಷ್ಟಾನ್ನ ಭೋಜನ ಪ್ರಸಾದ ಭಕ್ತರ ದೇಹ ಮನ ತಣಿಸಿತು.
ಸಂಜೆ ಕಡಿಯಾಳಿ ಮಾತೃ ಭಜನಾ ಮಂಡಳಿ ಭಜಕರಿಂದ ಭಜನೆ ಸಂಕೀರ್ತನೆ, ಸತ್ಯನಾರಾಯಣ ವ್ರತಕಥಾ ಪೂಜೆ, ಶ್ರೀಚಕ್ರ ಮಾತೆಗೆ ಹುಣ್ಣಿಮೆ ವಿಶೇಷ ಪೂಜೆ ಸಂಪನ್ನಗೊಂಡವು.
ಗುರು ಪೂರ್ಣಿಮೆ ಪ್ರಯುಕ್ತ ಶಾಲಾ ಮಕ್ಕಳಿಗೆ ಗುರೂಜಿ ಬ್ಯಾಗ್ ವಿತರಿಸಿದರು.
ಪ್ರಾತಃಕಾಲದಿಂದಲೇ ಶ್ರೀ ಗುರೂಜಿಯವರನ್ನು ಅಭಿನಂದಿಸಲು ಭಕ್ತ ಸಮೂಹ ಕ್ಷೇತ್ರದಲ್ಲಿ ಕಿಕ್ಕಿರಿದು ನೆರೆದಿತ್ತು ಎಂದು ಕ್ಷೇತ್ರ ಉಸ್ತುವಾರಿ ಕುಸುಮ ನಾಗರಾಜ್ ತಿಳಿಸಿದ್ದಾರೆ.