ರಾಹುಲ್ ನಿಂದನೆ: ಶಾಸಕ ಭರತ್ ಶೆಟ್ಟಿ ವಿರುದ್ಧದ ಎಫ್ಐಆರ್ ಗೆ ಕೋರ್ಟ್ ತಡೆ
Saturday, July 20, 2024
ರಾಹುಲ್ ನಿಂದನೆ: ಶಾಸಕ ಭರತ್ ಶೆಟ್ಟಿ ವಿರುದ್ಧದ ಎಫ್ಐಆರ್ ಗೆ ಕೋರ್ಟ್ ತಡೆ
ಲೋಕಬಂಧುನ್ಯೂಸ್ ಡೆಸ್ಕ್, ಬೆಂಗಳೂರು
ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ನಿಂದನೆಗೆ ಸಂಬಂಧಿಸಿ ಮಂಗಳೂರು ಉತ್ತರ ಶಾಸಕ ಡಾ. ಭರತ್ ಶೆಟ್ಟಿ ವಿರುದ್ಧ ಕಾವೂರು ಪೊಲೀಸರು ದಾಖಲಿಸಿದ ಎಫ್‌ಐಆರ್‌ಗೆ ಹೈಕೋರ್ಟ್ ಶುಕ್ರವಾರ ತಡೆಯಾಜ್ಞೆ ನೀಡಿದೆ. ಮಾತ್ರವಲ್ಲ ಮುಂದಿನ ತೀರ್ಮಾನದ ವರೆಗೆ ಯಾವುದೇ ವಿಚಾರಣೆ ಪ್ರಕ್ರಿಯೆ ನಡೆಸದಂತೆ ಸೂಚಿಸಿದೆ.
ಲೋಕಸಭಾ ಅಧಿವೇಶನದಲ್ಲಿ ರಾಹುಲ್ ಗಾಂಧಿ ಹಿಂದೂ ಧರ್ಮದ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿ ಮಂಗಳೂರಿನಲ್ಲಿ ಬಿಜೆಪಿ ಯುವ ಮೋರ್ಚಾ ಪ್ರತಿಭಟನೆ ಆಯೋಜಿಸಿತ್ತು.
ಆ ವೇಳೆ ಶಾಸಕ ಡಾ. ಭರತ್ ಶೆಟ್ಟಿ 'ಹಿಂದೂಗಳು ಮತ್ತು ಹಿಂದೂ ಧರ್ಮವನ್ನು ನಿಂದಿಸಿದ ರಾಹುಲ್ ಗಾಂಧಿಯ ಕಪಾಳಕ್ಕೆ ಬಾರಿಸುವ ಎಂದು ಅನಿಸುತ್ತಿದೆ' ಎಂದು ಹೇಳಿದ್ದರು.
ರಾಹುಲ್ ಗಾಂಧಿ ಬಗ್ಗೆ ಕೀಳಾಗಿ ಮಾತನಾಡಿದ್ದಾರೆ ಎಂದು ಕಾಂಗ್ರೆಸ್ ಪ್ರತಿಭಟನೆ ನಡೆಸಿತ್ತಲ್ಲದೆ, ಪಾಲಿಕೆ ಸದಸ್ಯ ಅನಿಲ್ ಕುಮಾರ್ ಅವರು ಕಾವೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಪೊಲೀಸರು ಎಫ್‌ಐಆರ್ ದಾಖಲಿಸಿ ಮೂರು ದಿನದಲ್ಲಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿಗೊಳಿಸಿದ್ದರು.
ಆ ಹಿನ್ನೆಲೆಯಲ್ಲಿ ಶಾಸಕ ಡಾ. ಭರತ್ ಶೆಟ್ಟಿ ಜಾಮೀನಿಗೆ ಹೈಕೋರ್ಟ್ ಮೊರೆ ಹೋಗಿದ್ದರು.
ಬೆಂಗಳೂರಿನ ವಿಶೇಷ ನ್ಯಾಯಾಲಯ ಜುಲೈ 11ರಂದು ಡಾ. ಭರತ್ ಶೆಟ್ಟಿ ಅವರಿಗೆ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು.
ಇದೀಗ ಜಸ್ಟಿಸ್ ಕೃಷ್ಣ ದೀಕ್ಷಿತ್ ಅವರ ನ್ಯಾಯಪೀಠ ಎಫ್‌ಐಆರ್‌ಗೆ ತಡೆ ನೀಡಿದ್ದು, ಮುಂದಿನ ತೀರ್ಮಾನ ವರೆಗೆ ವಿಚಾರಣೆ ನಡೆಸದಂತೆ ಸೂಚಿಸಿದೆ.
ಶಾಸಕರ ಪರವಾಗಿ ಹಿರಿಯ ವಕೀಲ ಅರುಣ್‌ಶ್ಯಾಮ್ ವಾದಿಸಿದ್ದರು.
ಇತ್ತೀಚೆಗೆ ಶಾಸಕರ ಪರವಾಗಿ ಕಾವೂರಿನಲ್ಲಿ ಬೃಹತ್ ಪ್ರತಿಭಟನೆ ನಡೆದು ವಿಪಕ್ಷ ನಾಯಕ ಆರ್. ಅಶೋಕ್ ಮತ್ತಿತರರ ಉಪಸ್ಥಿತಿಯಲ್ಲಿ ಡಾ. ಭರತ್ ಶೆಟ್ಟಿ ಅವರು ಕಾವೂರು ಠಾಣೆಗೆ ತೆರಳಿ ವಿಚಾರಣಾ ಹೇಳಿಕೆ ದಾಖಲಿಸಿದ್ದರು.