ಮಸ್ತಕದ ಜ್ಞಾನ ವೃದ್ಧಿಗೆ ಪುಸ್ತಕದ ಓದು ದಿವೌಷಧ
Tuesday, July 16, 2024
ಮಸ್ತಕದ ಜ್ಞಾನ ವೃದ್ಧಿಗೆ ಪುಸ್ತಕದ ಓದು ದಿವೌಷಧ
ಲೋಕಬಂಧುನ್ಯೂಸ್ ಡೆಸ್ಕ್, ಉಡುಪಿ
ಆರೋಗ್ಯ ವೃದ್ಧಿಗೆ ಉತ್ತಮ ಪುಸ್ತಕಗಳ ಓದು ಪೂರಕ. ಆಸ್ಪತ್ರೆಗಳಲ್ಲಿಯೂ ಗ್ರಂಥಾಲಯ ತೆರೆಯುವುದರಿಂದ ಕನ್ನಡ ಸಾಹಿತ್ಯದ ಹಿರಿಮೆ ಗರಿಮೆ ವಿಸ್ತಾರಗೊಳ್ಳಲು ಸಾಧ್ಯ. ಆರೋಗ್ಯ ಚಿಕಿತ್ಸೆಗಾಗಿ ಬರುವ ರೋಗಿಗಳ ಮಸ್ತಕಕ್ಕೂ ಇಲ್ಲಿನ ಪುಸ್ತಕಗಳು ಜ್ಞಾನ ಹೆಚ್ಚಿಸುವ ಔಷಧವಾಗಲಿ ಎಂದು ಹಿರಿಯ ವಿಮರ್ಶಕ ಪ್ರೊ. ಮುರಳೀಧರ ಉಪಾಧ್ಯ ಹಿರಿಯಡ್ಕ ಆಶಿಸಿದರು.
ಉಡುಪಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಡೆಯುತ್ತಿರುವ ವಿನೂತನ ಮನೆಯೇ ಗ್ರಂಥಾಲಯ ಕಾರ್ಯಕ್ರಮದ ಸುವರ್ಣ ಸಂಭ್ರಮ (50ನೇ ಕಾರ್ಯಕ್ರಮ)ವನ್ನು ಇಲ್ಲಿನ ಗಾಂಧಿ ಆಸ್ಪತ್ರೆಯಲ್ಲಿ ಸೋಮವಾರ ಸಂಜೆ ಆಸ್ಪತ್ರೆ ಆಡಳಿತ ನಿರ್ದೇಶಕ ಡಾ. ಹರಿಶ್ಚಂದ್ರ ಅವರಿಗೆ ವಿವಿಧ ಪುಸ್ತಕಗಳನ್ನು ಹಸ್ತಾಂತರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಆರೋಗ್ಯದ ಪುಸ್ತಕಗಳಿರಲಿ
ಕೆಟ್ಟಿರುವ ತಮ್ಮಆರೋಗ್ಯ ಸರಿಪಡಿಸಿಕೊಳ್ಳಲು ರೋಗಿಗಳು ಆಸ್ಪತ್ರೆಗೆ ಬರುತ್ತಾರೆ. ಕೆಲವೊಮ್ಮೆ ಗಂಟೆಗಟ್ಟಲೆ ಕಾಲ ಕುಳಿತುಕೊಳ್ಳಬೇಕಾಗುತ್ತದೆ. ಅಂಥ ಸಂದರ್ಭದಲ್ಲಿ ಪುಸ್ತಕಗಳನ್ನು ಓದುವುದರಿಂದ ಸಮಯ ವ್ಯರ್ಥವಾಗದು.
ಓದಿನಿಂದ ಆರೋಗ್ಯ ವೃದ್ಧಿಯೂ ಆಗುವುದರಿಂದ ಸಾಹಿತ್ಯ ಕೃತಿಗಳ ಜೊತೆಗೆ ರೋಗಿಗಳ ಮನಸ್ಥಿತಿಗೆ ಅನುಗುಣವಾಗಿ ವಿವಿಧ ರೀತಿಯ ಆರೋಗ್ಯ, ಸಾಮಾಜಿಕ ಹಾಗೂ ಪರಿಸರಕ್ಕೆ ಸಂಬಂಧಿಸಿದ ಪುಸ್ತಕಗಳು ಲಭಿಸುವಂತಾಗಲಿ ಎಂದವರು ಸಲಹೆ ನೀಡಿದರು.
ಆಸ್ಪತ್ರೆಯಲ್ಲಿ ಗ್ರಂಥಾಲಯ ತೆರೆಯಲು ಸ್ಥಳಾವಕಾಶ ಮಾಡಿಕೊಟ್ಟ ಸಂಸ್ಥೆಯ ಆಡಳಿತ ನಿರ್ದೇಶಕ ಡಾ. ಹರಿಶ್ಚಂದ್ರ ಅವರನ್ನು ಕಸಾಪ ಉಡುಪಿ ತಾಲೂಕು ಘಟಕ ವತಿಯಿಂದ ಸನ್ಮಾನಿಸಲಾಯಿತು.
ಉಡುಪಿ- ಕರಾವಳಿ ಐಎಂಎ ಅಧ್ಯಕ್ಷೆ ಡಾ. ರಾಜಲಕ್ಷ್ಮೀ, ಕೋಶಾಧಿಕಾರಿ ಡಾ. ಆಮ್ನಾ ಹೆಗ್ಡೆ, ಗಾಂಧಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ವ್ಯಾಸರಾಜ ತಂತ್ರಿ, ಕಸಾಪ ಉಡುಪಿ ತಾಲೂಕು ಘಟಕದ ಗೌರವ ಕಾರ್ಯದರ್ಶಿಗಳಾದ ಜನಾರ್ದನ್ ಕೊಡವೂರು ಮತ್ತು ರಂಜನಿ ವಸಂತ್, ಖಜಾಂಚಿ ರಾಜೇಶ್ ಭಟ್ ಪಣಿಯಾಡಿ, ಪದ್ಮಾಸಿನಿ, ಸಿದ್ಧಬಸಯ್ಯಸ್ವಾಮಿ ಚಿಕ್ಕಮಠ, ಸಂಧ್ಯಾ ಶೆಣೈ, ಸತೀಶ್ ಕೊಡವೂರು, ಲಕ್ಷ್ಮೀ ಹರಿಶ್ಚಂದ್ರ, ಡಾ. ಪಂಚಮಿ, ಹಫೀಜ್ ರೆಹಮಾನ್, ಸುಬೋಧ, ಶಶಿಕಾಂತ್ ಶೆಟ್ಟಿ, ಪ್ರಭಾಕರ ಪೂಜಾರಿ ಮೊದಲಾದವರಿದ್ದರು.
ಕಸಾಪ ಉಡುಪಿ ತಾಲೂಕು ಘಟಕದ ಅಧ್ಯಕ್ಷ ರವಿರಾಜ್ ಎಚ್ .ಪಿ. ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಕಸಾಪ ಜಿಲ್ಲಾ ಮಹಿಳಾ ಪ್ರತಿನಿಧಿ ಪೂರ್ಣಿಮಾ ಜನಾರ್ದನ್ ನಿರೂಪಿಸಿದರು. ಸಂಚಾಲಕ ರಾಘವೇಂದ್ರ ಪ್ರಭು ಕರ್ವಾಲು ವಂದಿಸಿದರು.