.jpg)
ಮಳೆಯ ಅಬ್ಬರಕ್ಕೆ ಜನ ಜೀವನ ತತ್ತರ
Tuesday, July 16, 2024
ಮಳೆಯ ಅಬ್ಬರಕ್ಕೆ ಜನ ಜೀವನ ತತ್ತರ
ಲೋಕಬಂಧುನ್ಯೂಸ್ ಡೆಸ್ಕ್, ಉಡುಪಿ
ಜಿಲ್ಲೆಯಾದ್ಯಂತ ಪುನರ್ವಸು ಮಳೆ ತೀವ್ರಗೊಂಡಿದೆ. ಭಾರೀ ಮಳೆಯಿಂದಾಗಿ ಜನ ಜೀವನ ಅಸ್ತವ್ಯವಸ್ಥಗೊಂಡಿದೆ. ಸೋಮವಾರ ರಾತ್ರಿಯಿಡೀ ಮಳೆಯಾಗಿದ್ದು, ಮಂಗಳವಾರವೂ ಧಾರಾಕಾರ ಮಳೆಯಾಗಿದೆ.
ತೀವ್ರ ಮಳೆಯ ಕಾರಣದಿಂದ ಜಿಲ್ಲೆಯ ಎಲ್ಲಾ ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳಿಗೆ ರಜೆ ನೀಡಲಾಗಿತ್ತು.
ತಗ್ಗು ಪ್ರದೇಶ ಜಲಾವೃತ
ಹೆಬ್ರಿ, ಬ್ರಹ್ಮಾವರ, ಕುಂದಾಪುರ, ಬೈಂದೂರು ಭಾಗಗಳಲ್ಲಿ ಭಾರೀ ಮಳೆಯಾಗಿದ್ದು, ಮಳೆಯೊಂದಿಗೆ ವೇಗದ ಗಾಳಿ ಬೀಸಿದ ಪರಿಣಾಮ ಅನೇಕ ಮನೆಗಳು ಹಾಗೂ ಕೃಷಿಗೆ ಹಾನಿಯಾಗಿ ಸುಮಾರು 17.5 ಲಕ್ಷ ರೂ. ನಷ್ಟ ಸಂಭವಿಸಿದೆ.
ಜಿಲ್ಲೆಯ ನದಿಗಳು ಅಪಾಯ ಮಟ್ಟದಲ್ಲಿ ಹರಿಯುತ್ತಿದೆ.
ವಿದ್ಯುತ್ ಕಂಬಗಳು ಉರುಳಿಬಿದ್ದ ಕಾರಣ ವಿದ್ಯುತ್ ವ್ಯತ್ಯಯ ಉಂಟಾಗಿತ್ತು. ಹಲವು ಮನೆಗಳ ಇನ್ ವರ್ಟರ್ ಗಳು ಆಫ್ ಆಗಿದ್ದವು.
ಕಳೆದ 24 ಗಂಟೆ ಅವಧಿಯಲ್ಲಿ ಜಿಲ್ಲೆಯಲ್ಲಿ ಸರಾಸರಿ 14 ಸೆ.ಮೀ. ಮಳೆಯಾಗಿದೆ.
ಭಾರೀ ಮಳೆಯಿಂದಾಗಿ ಕೋಟ, ಉಪ್ಪೂರು, ಕುಂದಾಪುರ, ಬೈಂದೂರು ಮೊದಲಾದೆಡೆಗಳಲ್ಲಿನ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ.
ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.
ಬೈಂದೂರಿನ ಕೆಲವು ಕಡೆಗಳಿಗೆ ಜನರನ್ನು ಸ್ಥಳಾಂತರಿಸಲು ದೋಣಿಗಳನ್ನು ಬಳಸಲಾಗಿತ್ತು.
ಸಂಸದ ಕೋಟ ಭೇಟಿ
ಸಂಸದ ಕೋಟ ಶ್ರೀನಿವಾಸ ಪೂಜಾರಿ ನೆರೆ ಸಂತ್ರಸ್ತ ಪ್ರದೇಶಗಳಿಗೆ ಭೇಟಿ ನೀಡಿ, ಸೂಕ್ತ ಪರಿಹಾರ ಕಾರ್ಯಕ್ಕೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ, ಜಿ.ಪಂ. ಸಿಇಓ ಪ್ರತೀಕ್ ಬಾಯಲ್, ಎಡಿಸಿ ಮಮತಾದೇವಿ, ಕುಂದಾಪುರ ಸಹಾಯಕ ಕಮೀಷನರ್ ರಶ್ಮಿ ಎಸ್. ಆರ್. ಮೊದಲಾದವರಿದ್ದರು.