-->
ವ್ಯಾಸ ಜಯಂತಿ ಗುರು ಪೂರ್ಣಿಮೆ

ವ್ಯಾಸ ಜಯಂತಿ ಗುರು ಪೂರ್ಣಿಮೆ

ವ್ಯಾಸ ಜಯಂತಿ ಗುರು ಪೂರ್ಣಿಮೆ

ಜುಲೈ 21 ಭಾನುವಾರ ಗುರು ಪೂರ್ಣಿಮೆ. ಈ ದಿನದ ಮಹತ್ವದ ಬಗ್ಗೆ ಹರಿಕೃಷ್ಣ ಹೊಳ್ಳ, ಬ್ರಹ್ಮಾವರ ವಿವರಿಸಿದ್ದಾರೆ.
ಆಷಾಢ ಮಾಸದ ಹುಣ್ಣಿಮೆ ದಿನವನ್ನು ಗುರು ಪೂರ್ಣಿಮೆ ಎಂದು ಆಚರಿಸುತ್ತಾರೆ. ಇದೇ ಹಿಂದೂಗಳ ಪಾಲಿಗೆ ನಿಜವಾದ ಶಿಕ್ಷಕರ ದಿನ. ಅದನ್ನು ವ್ಯಾಸ ಪೂರ್ಣಿಮೆ ಎಂದೂ ಕರೆಯುತ್ತಾರೆ. ಏಕೆಂದರೆ, ಇದು ವಿಷ್ಣುವಿನ ಇನ್ನೊಂದು ಅವತಾರ ಎಂದೇ ಪರಿಗಣಿತರಾದ ಭಗವಾನ್ ವೇದವ್ಯಾಸರ ಜನ್ಮದಿನ.


ವೇದವ್ಯಾಸರ ಮೂಲ ಹೆಸರು ಕೃಷ್ಣ ದ್ವೈಪಾಯನ. ತಂದೆ ಪರಾಶರ ಮುನಿ ಹಾಗೂ ತಾಯಿ ಸತ್ಯವತೀ ದೇವಿ.


ಒಮ್ಮೆ ಮಹರ್ಷಿ ಪರಾಶರರು ನಾವೆಯೊಂದರಲ್ಲಿ ಗಂಗಾ ನದಿಯನ್ನು ದಾಟುತ್ತಿರುವಾಗ ದೂರದ ದ್ವೀಪದಿಂದ ಮೀನು ಕೊಳೆತಾಗ ಬರುವಂತಹ ಕೆಟ್ಟ ವಾಸನೆ ಬರುತ್ತಿತ್ತು. ಅವರು ಆ ದ್ವೀಪಕ್ಕೆ ಹೋಗಿ ನೋಡಿದಾಗ ಅಲ್ಲಿ ಒಬ್ಬ ಕುರೂಪಿಯಾದ ಬೆಸ್ತರ ಕನ್ಯೆ ಕುಳಿತಿದ್ದಳು. ಆಕೆಯ ದೇಹದಿಂದಲೇ ಆ ಕೆಟ್ಟ ವಾಸನೆ ಬರುತ್ತಿತ್ತು. ಆಕೆಯ ಹೆಸರು 'ಸತ್ಯವತಿ'.


ಆಕೆಯ ದೇಹದಿಂದ ಮೀನಿನ ವಾಸನೆ ಬರುತ್ತಿದ್ದುದರಿಂದ ಆಕೆಯನ್ನು 'ಮತ್ಸ್ಯಗಂಧೀ' ಎಂದೂ ಮತ್ತು ಆ ವಾಸನೆಯು ಯೋಜನ ದೂರದ ವರೆಗೂ ಪಸರಿಸುತ್ತಿದ್ದುದರಿಂದ ಆಕೆಯನ್ನು 'ಯೋಜನಗಂಧೀ' ಎಂದೂ ಕರೆಯುತ್ತಿದ್ದರು.


ಮೂಲತಃ ಬೆಸ್ತರವಳಲ್ಲ
ಸತ್ಯವತೀ ಮೂಲತಃ ಬೆಸ್ತರವಳಲ್ಲ. ಆಕೆಯ ಜನ್ಮ ವೃತ್ತಾಂತ ಬಹಳ ವಿಚಿತ್ರವಾಗಿದೆ.


ಮೃಗ ಬೇಟೆಗೆಂದು ಕಾಡಿಗೆ ಹೋದ ಚೇದಿ ದೇಶದ ಅರಸ ಉಪರಿಚರ ವಸು ಎಂಬಾತ ಅಲ್ಲಿ ಹರಿಣಗಳ ಮೈಥುನವನ್ನು ನೋಡುತ್ತಾನೆ. ಅದರಿಂದ ಆತ ಕಾಮೋದ್ರಿಕ್ತನಾದಾಗ ಅವನಿಗೆ ವೀರ್ಯ ಸ್ಖಲನವಾಗುತ್ತದೆ.


ವೀರ್ಯ ನಾಶ ಭ್ರೂಣ ಹತ್ಯೆಗೆ ಸಮ ಎಂಬುದನ್ನು ಮನಗಂಡು ವಸು, ಅದನ್ನು ಒಂದು ಗಿಡುಗ ಪಕ್ಷಿಯ ಮೂಲಕ ಅರಮನೆಯಲ್ಲಿರುವ ತನ್ನ ಪತ್ನಿ ಗಿರಿಕೆಗೆ ಕಳುಹಿಸುತ್ತಾನೆ.


ಆ ಗಿಡುಗ ಆಕಾಶ ಮಾರ್ಗದಲ್ಲಿ ಹಾರುತ್ತಾ ಹೋಗುತ್ತಿರುವಾಗ ಇನ್ನೊಂದು ಗಿಡುಗ ಅದನ್ನು ನೋಡಿ, ಅದರ ಬಾಯಿಯಲ್ಲಿರುವುದು ಮಾಂಸದ ಚೂರು ಎಂಬುದಾಗಿ ಭ್ರಮಿಸಿ ಆಹಾರಕ್ಕಾಗಿ ಜಗಳಕ್ಕೆ ತೊಡಗುತ್ತದೆ.


ಹಾಗೆ ಜಗಳ ಆಡುವಾಗ ಗಿಡುಗದ ಬಾಯಿಯಲ್ಲಿದ್ದ ವೀರ್ಯ ಎರಡು ತುಂಡುಗಳಾಗಿ ಕೆಳಗಡೆ ಇರುವ ಗಂಗಾನದಿಗೆ ಬೀಳುತ್ತದೆ!


ಬ್ರಹ್ಮನ ಶಾಪ
ಬ್ರಹ್ಮನ ಶಾಪದ ಕಾರಣದಿಂದಾಗಿ ಆ ನದಿಯಲ್ಲಿ ಮತ್ಸ್ಯಕನ್ಯೆಯಾಗಿ ಜೀವಿಸುತ್ತಿದ್ದ 'ಅದ್ರಿಕೆ' ಎಂಬ ಅಪ್ಸರೆ ಆ ವೀರ್ಯದ ತುಂಡುಗಳೆರಡನ್ನೂ ನುಂಗುತ್ತಾಳೆ. ಪರಿಣಾಮವಾಗಿ ಆ ಮೀನು ಗರ್ಭವತಿಯಾಗುತ್ತದೆ.


ಮುಂದೆ ಒಂದು ದಿನ ಬೆಸ್ತರ ಗುರಿಕಾರ ದಾಶರಾಜ ಕಂಧರನಿಗೆ ಆ ಮೀನು ಸಿಗುತ್ತದೆ. ಅವನು ಅದರ ಹೊಟ್ಟೆಯನ್ನು ಸೀಳಿದಾಗ ಅದರಲ್ಲಿ ಅವಳಿ ಶಿಶುಗಳು‌- ಒಂದು ಗಂಡು ಮತ್ತೊಂದು ಹೆಣ್ಣು ಶಿಶುಗಳು ಕಾಣಿಸುತ್ತವೆ.


ಕಂಧರನಿಂದ ಸೀಳಲ್ಪಟ್ಟು ಮತ್ಸ್ಯ ಕನ್ಯೆ ಕೊಲ್ಲಲ್ಪಟ್ಟಾಗ ಶಾಪ ವಿಮೋಚನೆಗೊಂಡ ಅದ್ರಿಕೆ ಪ್ರತ್ಯಕ್ಷಳಾಗಿ ಆ ಅವಳಿ ಮಕ್ಕಳನ್ನು ವಸುರಾಜನಿಗೆ ಒಪ್ಪಿಸುವಂತೆ ತಿಳಿಸಿ, ಅದೃಶ್ಯಳಾಗುತ್ತಾಳೆ.


ಅವಳ ಆಣತಿಯಂತೆ ಕಂಧರ ಆ ಎರಡು ಶಿಶುಗಳನ್ನು ವಸುರಾಜನಿಗೆ ಒಪ್ಪಿಸಿದಾಗ ಆತ ಗಂಡು ಶಿಶುವನ್ನು ಮಾತ್ರ ಸ್ವೀಕರಿಸಿ, ಆ ಮಗುವಿಗೆ 'ಮತ್ಸ್ಯ' ಎಂಬ ಹೆಸರನ್ನಿರಿಸಿ ತಾನೇ ಸಾಕಿಕೊಳ್ಳುತ್ತಾನೆ. ಮುಂದೆ ಆತನೇ 'ಮತ್ಸ್ಯರಾಜ'ನಾಗುತ್ತಾನೆ.


ಹೆಣ್ಣು ಶಿಶುವಿಗೆ 'ಮತ್ಸ್ಯಗಂಧೀ' ಎಂಬ ಹೆಸರನ್ನಿರಿಸಿ ಕಂದರನಿಗೆ ಮರಳಿಸಿ, ಸಾಕಿಕೊಳ್ಳುವಂತೆ ಆದೇಶಿಸುತ್ತಾನೆ.


ಹೀಗೆ ಬೆಸ್ತನಾದ ಕಂಧರನ ಸಾಕುಮಗಳಾಗಿ ಬೆಳೆದವಳೇ ಈ ಮತ್ಸ್ಯಗಂಧಿ. ಆಕೆ ವಸುದೇವರಿಂದ ಶಾಪಗ್ರಸ್ತಳಾಗಿದ್ದುದರಿಂದ ಆಕೆಯ ದೇಹದಿಂದ ಕೆಟ್ಟ ವಾಸನೆ ಬರುತ್ತಿತ್ತು.


ಆಕೆಯ ಪರಾಶರ ಮುನಿಗಳನ್ನು ನೋಡಿ, ಬಳಿಗೆ ಬಂದು ಅವರ ಪಾದಕ್ಕೆರಗುತ್ತಾಳೆ. ಅಲ್ಲದೇ 'ವಿಷ್ಣುವಿನ ಅಂಶವಿರುವ ತಾವು ಈ ಸ್ಥಳಕ್ಕೆ ಬಂದಿದ್ದರಿಂದ ಈ ದ್ವೀಪ ಪಾವನವಾಯಿತು. ನನ್ನ ಶಾಪ ವಿಮೋಚನೆ ಮಾಡಬೇಕು' ಎಂದು ಆಕೆ ಪರಾಶರರನ್ನು ಪ್ರಾರ್ಥಿಸುತ್ತಾಳೆ.


ಆಗ ಮಹರ್ಷಿಗಳು ಆಕೆಯನ್ನು ಸ್ಪರ್ಶಿಸಿ ಅವಳ ಶಾಪ ವಿಮೋಚನೆ ಮಾಡುತ್ತಾರೆ. ಆಗ ಅವಳು ಸುರೂಪಿಯಾಗಿ ಸುಗಂಧವನ್ನು ಹೊರ ಹೊಮ್ಮಿಸುವ 'ಯೋಜನಗಂಧಿ'ಯಾಗುತ್ತಾಳೆ.


ತ್ರಿಕಾಲ ಜ್ಞಾನಿಗಳಾದ ಪರಾಶರರು ಆಕೆಯ ಭವಿಷ್ಯವನ್ನು ಅರಿತು 'ಯೋಜನಗಂಧೀ , ಒಬ್ಬ ಮಹಾಮುನಿಯ ಮಹಾಮಾತೆಯಾಗುವ ಯೋಗ ನಿನಗಿದೆ. ಹೀಗಾಗಿ ನಾನು ಲೋಕ ಕಲ್ಯಾಣಕ್ಕಾಗಿ ನಿನ್ನ ಸಮಾಗಮವನ್ನು ಬಯಸುತ್ತಿದ್ದೇನೆ. ಹಾಗಂತ ನೀನು ಶಿಶುವನ್ನು ನವಮಾಸ ಪರ್ಯಂತ ಗರ್ಭದಲ್ಲಿ ಧರಿಸುವ ಅಗತ್ಯವಿಲ್ಲ. ನಮ್ಮಿಬ್ಬರ ಸಮಾಗಮವಾದ ಕೂಡಲೇ ಒಬ್ಬ ಮಹಾಪುರುಷನ ಜನನವಾಗುತ್ತದೆ. ಅಲ್ಲದೇ, ಶಿಶುವನ್ನು ಪಡೆದ ಮೇಲೆ ನಿನ್ನ ಕನ್ಯೆತನವೂ ನಾಶವಾಗುವುದಿಲ್ಲ. ನಮ್ಮ ಮಿಲನದಿಂದ ಜನಿಸುವ ಆ ತೇಜೋವಂತ ಮಗನಿಂದ ಮುಂದೆ ಲೋಕ ಕಲ್ಯಾಣವಾಗಲಿದೆ' ಎನ್ನುತ್ತಾರೆ.


ಗಾಂಧರ್ವ ವಿವಾಹ
ಸತ್ಯವತಿ ಅದಕ್ಕೆ ಒಪ್ಪುತ್ತಾಳೆ. ಪರಾಶರರು ಅಲ್ಲಿಯೇ ಅಗ್ನಿ ಸ್ಥಾಪಿಸಿ ಗಾಂಧರ್ವ ರೀತಿಯಲ್ಲಿ ಆಕೆಯನ್ನು ವಿವಾಹವಾಗುತ್ತಾರೆ. ಅವರಿಬ್ಬರಿಂದ ಜನಿಸಿದ ಮಗುವೇ 'ಕೃಷ್ಣ ದ್ವೈಪಾಯನ'. ಅವರೇ ವೇದವ್ಯಾಸರು.
‘ಕೃಷ್ಣ’ ಎಂದರೆ ಕಪ್ಪು ಎಂತಲೂ , ‘ದ್ವೈಪಾಯನ’ ಎಂದರೆ ಸುತ್ತಲೂ ನೀರು ಇರುವ ಪ್ರದೇಶ ಅಂದರೆ ದ್ವೀಪ ಎಂತಲೂ ಅರ್ಥ. ಹೀಗೆ ಬಣ್ಣ ಕಪ್ಪಾಗಿದ್ದು ದ್ವೀಪದಲ್ಲಿ ಜನಿಸಿದವರಾದ್ದರಿಂದ ಕೃಷ್ಣದ್ವೈಪಾಯನ ಎಂಬ ಹೆಸರು ಬಂತು.


ಈ ದ್ವೀಪ ಈಗಿನ ಕಾಲದ ಉತ್ತರ ಪ್ರದೇಶದ ಜಲುವಾ ಜಿಲ್ಲೆಯ 'ಕಲ್ಪಿ' ಎನ್ನುವ ಸ್ಥಳದ ಬಳಿ ಇದೆ.


ಹುಟ್ಟಿದ ಕ್ಷಣವೇ ಅಳುವುದಕ್ಕೆ ಬದಲಾಗಿ ಕೃಷ್ಣದ್ವೈಪಾಯನರು ದೊಡ್ಡವರಾಗಿ ಬೆಳೆದು ತಾಯಿ ಸತ್ಯವತಿಯ ಪಾದಕ್ಕೆ ಎರಗಿ 'ಮಾತೃದೇವೋಭವ' ಎನ್ನುತ್ತಾ ವಂದಿಸುತ್ತಾರೆ. ಅಲ್ಲದೇ 'ತಾಯೇ ನಿನಗೆ ಕಷ್ಟಕಾಲ ಒದಗಿದಾಗ ನನ್ನನ್ನು ಸ್ಮರಿಸಿಕೋ, ತಕ್ಷಣ ನಾನು ಪ್ರತ್ಯಕ್ಷನಾಗಿ ನಿನ್ನ ಇಷ್ಟಾರ್ಥಗಳನ್ನು ನೆರವೇರಿಸುತ್ತೇನೆ' ಎಂದು ಹೇಳಿ ಅಲ್ಲಿಂದ ಬದರಿಕಾಶ್ರಮಕ್ಕೆ ಹೊರಟು ಹೋಗುತ್ತಾರೆ.


ಅಲ್ಲಿ ತಾಪಸ ಜೀವನ ನಡೆಸಿ ಅತಿ ಪ್ರಮುಖ ಋಷಿಗಳಲ್ಲಿ ಒಬ್ಬರಾಗಿ ಪರಿಗಣಿತರಾಗುತ್ತಾರೆ. ಬದರಿಕಾಶ್ರಮದಲ್ಲಿ ತಪೋನಿರತರಾದ ಅವರಿಗೆ 'ಬಾದರಾಯಣ' ಎಂದೂ ಹೆಸರಿದೆ.


ವಿಷ್ಣುವಿನ ಅವತಾರ
ಪುರಾಣಗಳಲ್ಲಿ ಅವರನ್ನು ವಿಷ್ಣುವಿನ ಒಂದು ಅವತಾರವೆಂದೇ ಪರಿಗಣಿಸಲಾಗಿದೆ. ಹಿಂದೂ ಪುರಾಣದ ಪ್ರಕಾರ ಇರುವ ಏಳು ಚಿರಂಜೀವಿಗಳಲ್ಲಿ ಇವರೂ ಒಬ್ಬರು.


ಕೃಷ್ಣದ್ವೈಪಾಯನರು ತಮ್ಮ ಕಾಲದಲ್ಲಿ ಅಸ್ತಿತ್ವದಲ್ಲಿದ್ದ ಎಲ್ಲ ವೈದಿಕ ಋಕ್ಕುಗಳನ್ನು ಸಂಗ್ರಹಿಸಿ, ಯಜ್ಞ ಯಾಗಾದಿ ಧಾರ್ಮಿಕ ವಿಧಿಗಳಲ್ಲಿನ ಅವುಗಳ ಬಳಕೆಯ ಆಧಾರದ ಮೇಲೆ ಅವುಗಳನ್ನು ಋಗ್ವೇದ ಯಜುರ್ವೇದ, ಸಾಮವೇದ ಮತ್ತು ಅಥರ್ವವೇದ ಎಂಬ ನಾಲ್ಕು ಭಾಗಗಳನ್ನಾಗಿ ವಿಭಾಗಿಸಿ, ಅವುಗಳನ್ನು ಕ್ರಮವಾಗಿ ತಮ್ಮ ನಾಲ್ಕು ಮಂದಿ ಮುಖ್ಯ ಶಿಷ್ಯರಾದ ಪೈಲ, ವೈಶಂಪಾಯನ, ಜೈಮಿನಿ ಮತ್ತು ಸುಮಂತು ಮುನಿಗಳಿಗೆ ಬೋಧಿಸಿದರು.


ಆ ನಾಲ್ಕು ಮುನಿಗಳು ತಮ್ಮ ಶಿಷ್ಯ ಪರಂಪರೆಗೆ ಆ ವೇದವನ್ನು ಬೋಧಿಸಿದರು. ಹೀಗೆ ವೇದ ಪಾಠ ಇಂದಿಗೂ ಗುರುಗಳಿಂದ ಶಿಷ್ಯರಿಗೆ ನಡೆಯುತ್ತಿದೆ. ವೇದವನ್ನು ವಿಭಜಿಸಿದುದರಿಂದ ಕೃಷ್ಣದ್ವೈಪಾಯನರಿಗೆ 'ವೇದವ್ಯಾಸ' ಎಂಬ ಗೌರವ ಅಭಿನಾಮ ದೊರೆಯಿತು.


ಭಗವಾನ್ ವೇದವ್ಯಾಸರು ನಾಲ್ಕು ವೇದಗಳನ್ನು ರಚಿಸಿದ್ದಲ್ಲದೇ, 18 ಪುರಾಣಗಳನ್ನು, ಮಹಾಭಾರತ ಮತ್ತು ಶ್ರೀಮದ್ಭಾಗವತ ರಚಿಸಿದ ಮಹಾತ್ಮರಾಗಿದ್ದಾರೆ.


ವೇದಾಧ್ಯಯನಕ್ಕೆ ನಾಂದಿ ಹಾಡಿದ ವೇದವ್ಯಾಸ ಮಹರ್ಷಿಗಳು ಗುರುಗಳಿಗೆ ಗುರುಗಳಾಗಿ ಪರಮ ಗುರುಗಳಾಗಿದ್ದಾರೆ. ಹೀಗಾಗಿ ಅವರ ಜನ್ಮದಿನವಾದ ಈ ಹುಣ್ಣಿಮೆಯ ದಿನವನ್ನು ಗುರುಪೂರ್ಣಿಮೆ ಎಂದು ಆಚರಿಸುವುದು ಅರ್ಥಪೂರ್ಣವಾಗಿದೆ.


ಹಿಂದೂಗಳಲ್ಲಿ ತಂದೆ, ತಾಯಿಯ ನಂತರದ ಸ್ಥಾನ ಗುರುವಿನದ್ದಾಗಿದೆ. ನಮ್ಮ ಭವಿಷ್ಯವನ್ನು ರೂಪಿಸಿ ನಮ್ಮನ್ನು ವಿದ್ಯಾವಂತರನ್ನಾಗಿಸಿ ಮತ್ತು ಬುದ್ಧಿವಂತರನ್ನಾಗಿ ಮಾಡುವ ಜವಾಬ್ದಾರಿ ಗುರುಗಳದ್ದಾಗಿದೆ.


ಆದ್ದರಿಂದಲೇ ಗುರು ಪೂರ್ಣಿಮೆಯಂದು ಗುರುಗಳಿಗೆ ಗೌರವ ತೋರುವ ಸಲುವಾಗಿ ಈ ದಿನವನ್ನು ಆಚರಿಸಲಾಗುತ್ತದೆ.


ವ್ಯಾಸರ ನೆನಪಿಗಾಗಿ ಈ ದಿವಸವನ್ನು ಆಚರಿಸಲಾಗುತ್ತದೆ.


ಹಲವಾರು ದೇವಸ್ಥಾನಗಳಲ್ಲಿ ವ್ಯಾಸರ ಪೂಜೆಯನ್ನು ನೆರವೇರಿಸಲಾಗುತ್ತದೆ. ಇದೇ ದಿನದಂದು ಗುರುಗಳ ಪಾದಪೂಜೆ ಮಾಡುತ್ತಾರೆ. ಕೆಲವು ಕಡೆ ಯತಿಗಳು ಇದೇ ಗುರು ಪೂರ್ಣಿಮೆಯಂದು ಚಾತುರ್ಮಾಸ್ಯ ವ್ರತವನ್ನು ಆರಂಭಿಸುತ್ತಾರೆ.


ವೇದವ್ಯಾಸರು ಇದೇ ದಿನದಂದು ಬ್ರಹ್ಮಸೂತ್ರಗಳ ರಚನೆ ಪ್ರಾರಂಭಿಸಿದರಂತೆ. ಅದರ ಸ್ಮರಣಾರ್ಥಕವಾಗಿ ಈ ದಿನದಂದು ಬ್ರಹ್ಮಸೂತ್ರಗಳ ಪಠಣ ಮಾಡಲಾಗುತ್ತದೆ.


ಏಕಲವ್ಯ ಇದೇ ದಿನದಂದು ತನ್ನ ಗುರು ದ್ರೋಣಾಚಾರ್ಯರಿಗೆ ಗುರು ಕಾಣಿಕೆಯಾಗಿ ತನ್ನ ಬಲಗೈ ಹೆಬ್ಬೆರಳನ್ನೇ ಕತ್ತರಿಸಿಕೊಟ್ಟನಂತೆ!


ಬೌದ್ಧರಿಗೂ ಕೂಡಾ ಗುರು ಪೂರ್ಣಿಮೆ ಮಹತ್ವದ ದಿನವಾಗಿದೆ. ಸಾಂಪ್ರದಾಯಿಕವಾಗಿ ಬೌದ್ಧರು ಬುದ್ಧನಿಗೆ ಗೌರವ ಅರ್ಪಿಸುವ ದಿನವನ್ನಾಗಿ ಗುರು ಪೂರ್ಣಿಮೆಯನ್ನು ಆಚರಿಸುತ್ತಾರೆ.


ಬೌದ್ಧರು ಈ ಹಬ್ಬವನ್ನು ಗೌತಮ ಬುದ್ಧನ ಪ್ರಥಮ ಧರ್ಮೋಪದೇಶದ ಅಂಗವಾಗಿ ಆಚರಿಸುತ್ತಾರೆ.

-✍️ಹರಿಕೃಷ್ಣ ಹೊಳ್ಳ, ಬ್ರಹ್ಮಾವರ

Ads on article

Advertise in articles 1

advertising articles 2

Advertise under the article