ಉತ್ತಮ ಆರೋಗ್ಯ ಮತ್ತು ಶಿಕ್ಷಣಕ್ಕೆ ಗುಣಮಟ್ಟದ ಆಹಾರ ಮುಖ್ಯ
Sunday, July 21, 2024
ಉತ್ತಮ ಆರೋಗ್ಯ ಮತ್ತು ಶಿಕ್ಷಣಕ್ಕೆ ಗುಣಮಟ್ಟದ ಆಹಾರ ಮುಖ್ಯ
ಲೋಕಬಂಧುನ್ಯೂಸ್ ಡೆಸ್ಕ್, ಬೆಂಗಳೂರು
ದೈಹಿಕ ಮತ್ತು ಮಾನಸಿಕ ಆರೋಗ್ಯ ಹಾಗೂ ಉತ್ತಮ ಶಿಕ್ಷಣಕ್ಕೆ ಗುಣಮಟ್ಟದ ಆಹಾರ ಮುಖ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು.
ಅಜೀಂ ಪ್ರೇಮ್ ಜಿ ಫೌಂಡೇಶನ್ ಸಹಭಾಗಿತ್ವದಲ್ಲಿ ಸರಕಾರಿ ಮತ್ತು ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮಕ್ಕಳಿಗೆ ವಾರದಲ್ಲಿ 6 ದಿನ ಉಚಿತ ಪೂರಕ ಪೌಷ್ಠಿಕ ಆಹಾರ ನೀಡುವ ಕಾರ್ಯಕ್ರಮವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.
ಉಪಾಹಾರ ಇಲ್ಲದೆ ಶಾಲೆಗೆ ಬಂದು, ಊಟ ಇಲ್ಲದೆ ಮಧ್ಯಾಹ್ನದ ವರೆಗೂ ಶಾಲೆಯಲ್ಲಿರುವ ಮಕ್ಕಳನ್ನು ನೋಡಿದ್ದೇನೆ.
ಹಾಗಾಗಿ ವಾರದಲ್ಲಿ ಎರಡು ದಿನ ಊಟ ಮತ್ತು ಮೊಟ್ಟೆ ಕೊಡಲು ಮುಂದಾದೆವು. ಇದೀಗ ಅಜೀಂ ಪ್ರೇಮ್ ಜಿ ಫೌಂಡೇಶನ್ ವಾರದಲ್ಲಿ ನಾಲ್ಕು ದಿನವೂ ಮಕ್ಕಳಿಗೆ ಮೊಟ್ಟೆ ನೀಡಲು ಮತ್ತು ಪೂರಕ ಪೌಷ್ಠಿಕ ಆಹಾರ ಒದಗಿಸುವ ಕಾರ್ಯಕ್ಕೆ ಸರ್ಕಾರದ ಜೊತೆಗೆ ಕೈಜೋಡಿಸಿ, ಒಡಂಬಡಿಕೆ ಮಾಡಿಕೊಂಡಿದೆ ಎಂದರು.
ವೈಜ್ಞಾನಿಕವಾಗಿ ಮತ್ತು ವೈಚಾರಿಕವಾಗಿ ವಿಕಾಸ ಹೊಂದಬೇಕು. ಆಗ ಮಾತ್ರ ಸಮಾಜಮುಖಿಗಳಾಗಲು ಸಾಧ್ಯ ಎಂದು ಶಾಲಾ ಮಕ್ಕಳಿಗೆ ಕರೆ ಕಿವಿಮಾತು ಹೇಳಿದರು.
ಬಡವರ ಮಕ್ಕಳಿಗೂ ಉತ್ತಮ ಶಿಕ್ಷಣಕ್ಕಾಗಿ ಅವಕಾಶ ಕಲ್ಪಿಸುವಿದಿ ನಮ್ಮ ಆಶಯ. ಆ ಕಾರಣಕ್ಕೆ ಸಮವಸ್ತ್ರ, ಶೂ, ಸಾಕ್ಸ್ ಕೊಡುವ ಜೊತೆಗೆ ಹೆಚ್ಚೆಚ್ಚು ವಸತಿ ಶಾಲೆಗಳನ್ನು ತೆರೆಯುತ್ತಿದ್ದೇವೆ ಎಂದರು.
ಶಿಕ್ಷಣ ಸಚಿವ ಮಧು ಬಂಗಾರಪ್ಪ, ವಿಪ್ರೋ ಮುಖ್ಯಸ್ಥ ಅಜೀಂ ಪ್ರೇಮ್ ಜಿ ದಂಪತಿ, ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್ ಅಹಮದ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಮೆಹರೂಜ್ ಮೊದಲಾದವರಿದ್ದರು.