-->
ಯಡಿಯೂರಪ್ಪ ಬಗ್ಗೆ ಮಾತನಾಡುವಾಗ ಎಚ್ಚರವಿರಲಿ

ಯಡಿಯೂರಪ್ಪ ಬಗ್ಗೆ ಮಾತನಾಡುವಾಗ ಎಚ್ಚರವಿರಲಿ

ಲೋಕಬಂಧು ನ್ಯೂಸ್, ಹಾವೇರಿ
ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿ ಸ್ಥಾನದಲ್ಲಿದ್ದು ಕೆಲಸ ನಿರ್ವಹಿಸುತ್ತಿದ್ದಾರೆ. ಯಡಿಯೂರಪ್ಪ ಬಗ್ಗೆ ಮಾತನಾಡುವಾಗ ಎಚ್ಚರ‌ವಿರಲು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಎಚ್ಚರಿಕೆ ನೀಡಿದರು.
ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಪರ ರೋಡ್ ಶೋ ನಡೆಸಿ ಮಾತನಾಡಿದ ಅವರು, ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಕಳೆದ 30- 40 ವರ್ಷಗಳಿಂದ ಸುದೀರ್ಘ ಹೋರಾಟ ಮಾಡಿ ಬಡವರು, ರೈತರ ಪರವಾಗಿ ಧ್ವನಿ ಎತ್ತಿ ಸರ್ವರಿಗೂ ಸಮಪಾಲು, ಸಮಬಾಳು ಎಂಬಂತೆ ಸರ್ವತೋಮುಖ ಅಭಿವೃದ್ಧಿಯ ಆಡಳಿತ ನೀಡಿದ್ದಾರೆ.


ಯಡಿಯೂರಪ್ಪ ಸಿದ್ದರಾಮಯ್ಯ ಅವರಂತೆ ಅದೃಷ್ಟದ ಮುಖ್ಯಮಂತ್ರಿಯಲ್ಲ. ಸಿದ್ದರಾಮಯ್ಯ ಬಡವರು, ರೈತರ ಪರವಾಗಿ ಹೋರಾಟ ಮಾಡಿಲ್ಲ, ಚಳವಳಿ ಮಾಡಿದವರಲ್ಲ ಎಂದು ಟೀಕಿಸಿದರು.


ಯಡಿಯೂರಪ್ಪ ಸರಕಾರ ಕೊಟ್ಟ ಭಾಗ್ಯಲಕ್ಷ್ಮಿ ಯೋಜನೆಯನ್ನು ಸಿದ್ದರಾಮಯ್ಯ ಸರಕಾರ ಸ್ಥಗಿತಗೊಳಿಸಿದೆ. ಕಾಂಗ್ರೆಸ್ ಸರಕಾರ ಬಡವರ ವಿರೋಧಿ ಸರಕಾರ. ಕಾಂಗ್ರೆಸ್ ಪಕ್ಷದ್ದು ರೈತ ವಿರೋಧಿ ಸರಕಾರ. ಅಭಿವೃದ್ಧಿ ಶೂನ್ಯ ಸರಕಾರ ಇದು. ಈ ಸರಕಾರ ಬದುಕಿದ್ದೂ ಸತ್ತಂತಿದೆ. ಈ ಭ್ರಷ್ಟ ಸರಕಾರವನ್ನು ಎಷ್ಟು ಬೇಗ ಕಿತ್ತೆಸೆಯುತ್ತೇವೆಯೋ ಅಷ್ಟು ಒಳ್ಳೆಯದು ಎಂದರು.


ಕಾಂಗ್ರೆಸ್ ಪಕ್ಷ ಹಾಗೂ ಇತರ ಪಕ್ಷಗಳ ಶಾಸಕರಿಗೆ ರಸ್ತೆ, ಶಾಲೆ, ಆಸ್ಪತ್ರೆ ಮತ್ತಿತರ ಕಾಮಗಾರಿ, ಅಭಿವೃದ್ಧಿ ಕಾರ್ಯ ನಡೆಸಲು ಸಾಧ್ಯವಾಗುತ್ತಿಲ್ಲ ಎಂಬ ಬೇಸರವಿದೆ. ಭ್ರಷ್ಟಾಚಾರ ರಹಿತ ಆಡಳಿತ ನೀಡುವುದಾಗಿ ತಿಳಿಸಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಪಕ್ಷ ಕಳೆದೆರಡು ವರ್ಷಗಳಲ್ಲಿ ಯಾವುದೇ ಹೊಸ ಯೋಜನೆ, ಅಭಿವೃದ್ಧಿ ಕಾರ್ಯಕ್ರಮ ಘೋಷಿಸಿಲ್ಲ ಎಂದು ಟೀಕಿಸಿದರು.


ಕಾಂಗ್ರೆಸ್  ಶಾಸಕ ರಾಜು ಕಾಗೆ, ಕಾಂಗ್ರೆಸ್ ಸರಕಾರಕ್ಕೆ ಅಭಿವೃದ್ಧಿಗೆ ಹಣ ಕೊಡಲು ಸಾಧ್ಯವಾಗುತ್ತಿಲ್ಲ. ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಬಂದಿದೆ ಎಂದು ಹೇಳುತ್ತಾರೆ. ಮತ್ತೊಂದು ಕಡೆ ಸರಕಾರಿ ನೌಕರರಿಗೆ ಸಂಬಳ ಕೊಡಲು ಕೂಡಾ ಈ ಸರಕಾರಕ್ಕೆ ಆಗುತ್ತಿಲ್ಲ. ಬೆಂಗಳೂರು, ದಾವಣಗೆರೆಯಲ್ಲಿ ಕಾಮಗಾರಿಯ ಹಣ ಸಿಗದೆ ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಬಂದಿದೆ ಎಂದು ವಿಜಯೇಂದ್ರ ವಿವರಿಸಿದರು.


ಬೆಳಗಾವಿಯಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಆಪ್ತ ಸಹಾಯಕನ ಬೆದರಿಕೆಯಿಂದ ಎಸ್‍ಡಿಎ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡದ್ದು ವರದಿಯಾಗಿದೆ. ಮುಡಾ ಹಗರಣ, ವಾಲ್ಮೀಕಿ ನಿಗಮ ಹಗರಣ ಬಹಿರಂಗವಾಗಿದೆ. ನಿಗಮದಿಂದ ದೋಚಿದ ಹಣವನ್ನು ಲೋಕಸಭಾ ಚುನಾವಣೆಗೆ ಬಳಸಿಕೊಂಡಿದ್ದಾರೆ ಎಂದು ವಿಜಯೇಂದ್ರ ಆರೋಪಿಸಿದರು.

Ads on article

Advertise in articles 1

advertising articles 2

Advertise under the article