-->
Padubidri: ಸಂಭ್ರಮದ ಉಚ್ಚಿಲ ದಸರಾ ಶುಭಾರಂಭ

Padubidri: ಸಂಭ್ರಮದ ಉಚ್ಚಿಲ ದಸರಾ ಶುಭಾರಂಭ

ಲೋಕಬಂಧು ನ್ಯೂಸ್, ಪಡುಬಿದ್ರಿ
ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಆಡಳಿತಕ್ಕೊಳಪಟ್ಟ ಶ್ರೀಕ್ಷೇತ್ರ ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಅ.2ರ ವರೆಗೆ ನಡೆಯುವ ನಾಲ್ಕನೇ ವರ್ಷದ ಉಡುಪಿ ಉಚ್ಚಿಲ ದಸರಾ ಮಹೋತ್ಸವಕ್ಕೆ ಸೋಮವಾರ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರೋಹಿಣಿ ಸಿಂಧೂರಿ ಮತ್ತು ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ರೋಹಿಣಿ ಸಿಂಧೂರಿ, ಉಡುಪಿ ಉಚ್ಚಿಲ ದಸರಾ ಮೈಸೂರು ದಸರಾಕ್ಕಿಂತ ವಿಭಿನ್ನವಾಗಿದೆ. ಮಹಾಲಕ್ಷ್ಮೀ ದೇವಿ ಸನ್ನಿಧಿಗೆ ಆಗಮಿಸಿರುವುದು ಸಂತಸ ತಂದಿದೆ. ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ 11 ದಿನಗಳ ಕಾಲ ನಡೆಯುವ ದಸರಾ ಮಹೋತ್ಸವ ವಿಜೃಂಭಣೆಯಿಂದ ನಡೆಯಲಿ ಎಂದು ಶುಭ ಹಾರೈಸಿದರು.


ಉಡುಪಿ ಪೋಲಿಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್, ಶಾಸಕರಾದ ಸುರೇಶ್ ಶೆಟ್ಟಿ ಗುರ್ಮೆ ಮತ್ತು ಯಶಪಾಲ್ ಸುವರ್ಣ, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮ, ಉದ್ಯಮಿಗಳಾದ ಕೃಷ್ಣಮೂರ್ತಿ ಮತ್ತು ಅಂಜಲಿ ವಿಜಯ್ ಮಾತನಾಡಿದರು.


ಈ ಸಂದರ್ಭದಲ್ಲಿ ಉಚ್ಚಿಲ ದಸರಾ ರೂವಾರಿ ನಾಡೋಜ ಡಾ.ಜಿ.ಶಂಕರ್, ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಬೆಳ್ಳಂಪಳ್ಳಿ, ಉಪಾಧ್ಯಕ್ಷ ಮೋಹನ್ ಬೇಂಗ್ರೆ ಎರ್ಮಾಳು, ಕಾರ್ಯದರ್ಶಿ ಶರಣ್ ಕುಮಾರ್ ಮಟ್ಟು, ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಗಿರಿಧರ ಸುವರ್ಣ, ಉಚ್ಚಿಲ ದಸರಾ ಉತ್ಸವ ಸಮಿತಿ ಅಧ್ಯಕ್ಷ ವಿನಯ ಕರ್ಕೇರ, ಮಹಿಳಾ ಸಂಚಾಲಕಿ ಸಂಧ್ಯಾದೀಪ ಸುನಿಲ್, ದೇವಳದ ಪ್ರಧಾನ ಅರ್ಚಕ ರಾಘವೇಂದ್ರ ಉಪಾಧ್ಯಾಯ, ಉದ್ಯಮಿ ಸಾಧು ಸಾಲ್ಯಾನ್, ಶ್ರೀಪತಿ ಭಟ್, ಉಷಾರಾಣಿ ಮಂಗಳೂರು, ಮನೋಜ್ ಕಾಂಚನ್, ಸುಜಿತ್ ಸಾಲ್ಯಾನ್, ಸತೀಶ್ ಕಾಂಚನ್, ಶಿವಕುಮಾರ್ ಮೆಂಡನ್, ಸುಗುಣ ಕರ್ಕೇರ ಮೊದಲಾದವರಿದ್ದರು.


ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಸ್ವಾಗತಿಸಿ, ದೇವಳದ ಪ್ರಧಾನ ವ್ಯವಸ್ಥಾಪಕ ಸತೀಶ್ ಅಮೀನ್ ಪಡುಕರೆ ನಿರೂಪಿಸಿದರು.


ಶಾರದೆ, ನವದುರ್ಗೆಯರ ಪ್ರತಿಷ್ಠೆ
ಇದೇ ಸಂದರ್ಭದಲ್ಲಿ ದೇವಳದ ಶಾಲಿನಿ ಜಿ.ಶಂಕರ್ ಸಭಾಂಗಣದಲ್ಲಿ ಕ್ಷೇತ್ರದ ತಂತ್ರಿ ಕುಕ್ಕಿಕಟ್ಟೆ ರಾಘವೇಂದ್ರ ತಂತ್ರಿ ಮತ್ತು ಪ್ರಧಾನ ಅರ್ಚಕ ರಾಘವೇಂದ್ರ ಉಪಾಧ್ಯಾಯ ನೇತೃತ್ವದಲ್ಲಿ ಶ್ರೀಶಾರದೆ ಹಾಗೂ ನವದುರ್ಗೆಯರ ಮೂರ್ತಿ ಪ್ರತಿಷ್ಠಾಪಿಸಲಾಯಿತು.
ಅದಕ್ಕೂ ಮುನ್ನ ಕ್ಷೇತ್ರದ ಶ್ರೀ ಮಹಾಲಕ್ಷ್ಮಿ ದೇವಿ ಸನ್ನಿಧಿಯಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಸಿ, ಕದಿರು ಕಟ್ಟಲಾಯಿತು.


ವಸ್ತು ಪ್ರದರ್ಶನ
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ವಸ್ತುಪ್ರದರ್ಶನ ಉದ್ಘಾಟಿಸಿದರು.
ಅನ್ನಸಂತರ್ಪಣೆ
ಬಳಿಕ ಚಂಡಿಕಾ ಹೋಮ, ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಪಲ್ಲಪೂಜೆ, ಅನ್ನಸಂತರ್ಪಣೆ ನಡೆಯಿತು.




Ads on article

Advertise in articles 1

advertising articles 2

Advertise under the article