ಯಾವುದೇ ಕಾರಣಕ್ಕೂ ರೈತರನ್ನು ಒಕ್ಕಲೆಬ್ಬಿಸುವುದಿಲ್ಲ
Tuesday, November 5, 2024
ಲೋಕಬಂಧು ನ್ಯೂಸ್, ಹುಬ್ಬಳ್ಳಿ
ವಕ್ಫ್ ಆಸ್ತಿ ವಿಚಾರ ವಿವಾದಕ್ಕೆ ಸಂಬಂಧಿಸಿದಂತೆ ನಮ್ಮ ಸರ್ಕಾರ ರೈತರ ಪರ ಇದೆ. ನೋಟಿಸ್ ಕೊಟ್ಟಿದ್ದರೆ ವಾಪಸ್ ಪಡೆಯಬೇಕು, ದಾಖಲಾತಿಯಲ್ಲಿ ತಿದ್ದುಪಡಿಯಾಗಿದ್ದರೆ ಸರಿಪಡಿಸಬೇಕು. ಯಾವುದೇ ಕಾರಣಕ್ಕೂ ರೈತರನ್ನು ಒಕ್ಕಲೆಬ್ಬಿಸಬಾರದೆಂದು ಆದೇಶಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.ಶಿಗ್ಗಾವಿ ವಿಧಾನಸಭಾ ಕ್ಷೇತ್ರ ಉಪ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಯಾಸಿರ್ ಪಠಾಣ ಪರ ಪ್ರಚಾರಕ್ಕೆ ತೆರಳುವ ಮುನ್ನ ಸೋಮವಾರ ಇಲ್ಲಿನ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ರೈತರು ಮುಸ್ಲಿಮರೇ ಇರಲಿ, ಹಿಂದೂಗಳೇ ಇರಲಿ. ಕ್ರಿಶ್ಚಿಯನ್ನರೇ ಇರಲಿ. ಯಾವ ರೈತರನ್ನೂ ಒಕ್ಕಲೆಬ್ಬಿಸಬಾರದು ಎಂದು ಈಚೆಗೆ ಕಾನೂನು ಸಚಿವ ಎಚ್.ಕೆ ಪಾಟೀಲ್, ಕಂದಾಯ ಸಚಿವ ಕೃಷ್ಣ ಭೈರೇಗೌಡ ಸಮ್ಮುಖದಲ್ಲಿ ಅಧಿಕಾರಿಗಳ ಸಭೆ ನಡೆಸಿ ಆದೇಶಿಸಿದ್ದೇನೆ. ರೈತರು ಆತಂಕ ಪಡುವ ಅಗತ್ಯವಿಲ್ಲ ಎಂದರು.
ವಕ್ಫ್ ವಿಚಾರ ಇಟ್ಟುಕೊಂಡು ಬಿಜೆಪಿ ನಡೆಸುತ್ತಿರುವ ಹೋರಾಟ ರಾಜಕೀಯ ಪ್ರೇರಿತ. ವಿಷಯಾಧಾರಿತ ಹೋರಾಟವನ್ನು ಬಿಜೆಪಿಯವರು ಎಂದೂ ಮಾಡುವುದಿಲ್ಲ. ಬರೀ ವಿವಾದಾಸ್ಪದ, ಗೊಂದಲ ಸೃಷ್ಟಿ ಮಾಡುವ ಹೋರಾಟ ಮಾಡುತ್ತಾರೆ.
ಬಿಜೆಪಿ ಸರ್ಕಾರ ಇದ್ದಾಗಲೂ ಪಹಣಿಯಲ್ಲಿ ತಿದ್ದುಪಡಿಯಾಗಿದೆ. ರೈತರಿಗೆ ನೋಟೀಸ್ ಕೊಟ್ಟಿದ್ದರು. ಈಗ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಎಲ್ಲರೂ ಉಲ್ಟಾ ಹೊಡೆಯುತ್ತಿದ್ದಾರೆ ಎಂದು ಸಿದ್ದರಾಮಯ್ಯ ದೂರಿದರು.
ಶಿಗ್ಗಾವಿ ಕ್ಷೇತ್ರದಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಗೆಲುವು ಸಾಧಿಸಲಿದ್ದಾರೆ. ಈ ಬಾರಿ ಮೂರು ದಿನ ಕ್ಷೇತ್ರದಲ್ಲಿ ಪ್ರಚಾರ ಮಾಡುತ್ತೇನೆ. ಈ ಕ್ಷೇತ್ರದಲ್ಲಿ ನಮ್ಮ ಪಕ್ಷಕ್ಕೆ ಶಕ್ತಿ ಇದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ಹೆಚ್ಚಿನ ಮತ ಪಡೆದಿದ್ದಾರೆ. ಹಾಗಾಗಿ, ನಮ್ಮ ಅಭ್ಯರ್ಥಿ ಗೆಲ್ಲುವ ವಿಶ್ವಾಸವಿದೆ ಎಂದು ಸಿಎಂ ಹೇಳಿದರು.